ADVERTISEMENT

ಪ್ರಯಾಣಿಕರ ಓಡಾಟಕ್ಕೆ ಮೇಲ್ಸೇತುವೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 10:34 IST
Last Updated 24 ಮಾರ್ಚ್ 2014, 10:34 IST

ಚಿಕ್ಕಬಳ್ಳಾಪುರ: ಹಲವು ವರ್ಷಗಳ ನಂತರ 4 ತಿಂಗಳ ಹಿಂದೆ ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ರೈಲು ಮೊದಲ ಪ್ರಯಾಣ ಆರಂಭಿಸಿತು. ರೈಲಿನ ಪ್ರಯಾಣ ಆರಂಭಗೊಂಡ  ದಿನದಿಂದ ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಿವೆ. ಅವುಗಳಲ್ಲಿ ಪ್ರಮುಖವಾದದ್ದು ಪಾದಚಾರಿ ಮೇಲ್ಸೇತುವೆ ನಿರ್ಮಾಣ.

ಸೇತುವೆ ನಿರ್ಮಾಣದಿಂದ ರೈಲು ಪ್ರಯಾಣಿಕರಲ್ಲಿ ಸಂತಸ ಮೂಡಿದೆ. ಒಂದು ಬದಿಯಿಂದ ಇನ್ನೊಂದು ಬದಿಯ ಪ್ಲಾಟ್‌ಫಾರ್ಮ್‌ಗೆ ದಾಡುವಾಗ ಮೂಡುತ್ತಿದ್ದ ಆತಂಕವು ಇನ್ನು ದೂರ ಎಂದು ಹಂಚಿಕೊಳ್ಳುತ್ತಾರೆ ಪ್ರಯಾಣಿಕರು.

  ಪ್ರಯಾಣಿಕರ ಸುರಕ್ಷತೆಗಾಗಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ನಿರ್ಮಾಣ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.  ನಿಲ್ದಾಣದ ಎರಡೂ ಬದಿಗಳಲ್ಲಿಯೂ ಕೆಲ ದಿನಗಳ ಹಿಂದೆ ಎತ್ತರದ ಪ್ಲಾಟ್‌ಫಾರ್ಮ್‌ ನಿರ್ಮಿಸಿದ್ದರಿಂದ ಪ್ರಯಾಣಿಕರಿಗೆ ಮತ್ತು ವಾಯುವಿಹಾರಿಗಳು ತೊಂದರೆ ಎದುರಿಸುತ್ತಿದ್ದರು. ನಿಲ್ದಾಣದ ಮತ್ತೊಂದು ಬದಿಯಲ್ಲಿರುವ ದೇಗುಲ ಮತ್ತು ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಹೋಗಲು ತೊಂದರೆಯಾಗಿದೆ ಎಂದು ದೂರುತ್ತಿದ್ದರು. ಈಗ ಮೇಲ್ಸೇತುವೆಯಿಂದ ಪ್ರಯಾಣಿಕರಲ್ಲಿ ಹರ್ಷ ಮೂಡಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದರು.

‘ಮುಂದಿನ ದಿನಗಳಲ್ಲಿ ಕೋಲಾರ–ಚಿಕ್ಕಬಳ್ಳಾಪುರ–ಬೆಂಗಳೂರು ರೈಲು ಸಂಚಾರದ ಜತೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಲಿದೆ. ಸುರಕ್ಷತೆ ದೃಷ್ಟಿಯಿಂದ ಅನುಕೂಲವಾಗಲಿದೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಎರಡೂ ಬದಿ ಮೆಟ್ಟಿಲುಗಳಲ್ಲಿ ವಿಶಾಲ ಸ್ಥಳಾವಕಾಶವಿದೆ. ಸೇತುವೆ ಮೇಲೆ ನಿಂತುಕೊಂಡೇ ರೈಲಿನ ಸಂಚಾರ ಗಮನಿಸಬಹುದು. ಇದು ಹೆಚ್ಚು ಸುರಕ್ಷಿತ ಮತ್ತು ಸುಲಭ ಮಾರ್ಗ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣದ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಲಿದೆ.  ಈಗಾಗಲೇ ನೀರು ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ಉಪಾಹಾರ ಮಂದಿರವನ್ನು ನಿಲ್ದಾಣದಲ್ಲಿ ತಲೆಯೆತ್ತಲಿದೆ. ಬ್ರಿಟಿಷರ ಕಾಲದ ನಿಲ್ದಾಣವು ಅತ್ಯಾಧುನಿಕ ಸೌಕರ್ಯಗಳಿಂದ ಕಂಗೊಳಿಸಲಿದೆ.

ಕೋಲಾರ–ಚಿಕ್ಕಬಳ್ಳಾಪುರ ರೈಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರತಿ ದಿನವೂ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಕೋಲಾರದತ್ತ ಪ್ರಯಾಣಿಸುತ್ತಾರೆ. ಬೆಳಿಗ್ಗೆ 10ಗಂಟೆಗೆ ಚಿಕ್ಕಬಳ್ಳಾಪುರದಿಂದ ಕೋಲಾರಗೆ ಹೊರಡುವ ರೈಲು ಸಂಜೆ 4ರ ಸುಮಾರಿಗೆ ಚಿಕ್ಕಬಳ್ಳಾಪುರಕ್ಕೆ ಹಿಂದಿರುಗುತ್ತದೆ. ಕಡಿಮೆ ಖರ್ಚು ಮತ್ತು ಕಡಿಮೆ ಅವಧಿಯಲ್ಲಿ ಕೋಲಾರಗೆ ಹೋಗಲು ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.