ADVERTISEMENT

ಪ್ರಾಚ್ಯವಸ್ತು ಸಂಗ್ರಹಾಲಯ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 9:15 IST
Last Updated 12 ಮಾರ್ಚ್ 2011, 9:15 IST
ಪ್ರಾಚ್ಯವಸ್ತು ಸಂಗ್ರಹಾಲಯ ಅಧಿಕಾರಿಗಳ ಭೇಟಿ
ಪ್ರಾಚ್ಯವಸ್ತು ಸಂಗ್ರಹಾಲಯ ಅಧಿಕಾರಿಗಳ ಭೇಟಿ   

ಚಿಕ್ಕಬಳ್ಳಾಪುರ: ರಂಗಸ್ಥಳವೆಂದೇ ಪ್ರಸಿದ್ಧವಾಗಿರುವ ರಂಗನಾಥ ಸ್ವಾಮಿ ದೇವಾಲಯದ ಆವರಣಕ್ಕೆ ರಾಜ್ಯ ಪ್ರಾಚ್ಯವಸ್ತುಗಳ ಸಂಗ್ರಹಾಲಯದ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿದರು. ಸುತ್ತಮುತ್ತಲಿನ ಆವರಣ, ಕಟ್ಟಡ ಮತ್ತು ಪುಷ್ಕರಣಿಗಳನ್ನು ಪರಿಶೀಲಿಸಿದ ಅವರು ದೇವಾಲಯಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಮತ್ತು ದಾಖಲೆಪತ್ರಗಳನ್ನು ಪಡೆದುಕೊಂಡರು. ಶತಮಾನಗಳಿಂದ ಈ ಭಾಗದ ಜನರಿಗೆ ಪವಿತ್ರ ಕ್ಷೇತ್ರವಾಗಿರುವ ರಂಗನಾಥಸ್ವಾಮಿ ದೇವಾಲಯದ ಬಗ್ಗೆ ಕೆಲವು ಮಾಹಿತಿಯನ್ನು ಸಂಗ್ರಹಿಸಿದರು.

ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ ಬಳಿಯ ರಂಗಸ್ಥಳದ ಬಗ್ಗೆ ಹಲವು ಪ್ರತೀತಿಗಳು ಹಾಗೂ ಆಸಕ್ತಿಮಯ ಸಂಗತಿಗಳಿವೆ. ಇತ್ತೀಚಿನ ಕೆಲ ದಿನಗಳಿಂದ ಅಲ್ಲಿ ದೇವಾಲಯದ ಜೀರ್ಣೋದ್ಧಾರದ ಕಾರ್ಯಗಳು ನಡೆದಿದ್ದು, ಅದನ್ನು ಪರಿಶೀಲಿಸಲು ಮತ್ತು ಇತರ ಮಾಹಿತಿಯನ್ನು ಪಡೆದುಕೊಳ್ಳಲು ರಾಜ್ಯಪ್ರಾಚ್ಯವಸ್ತುಗಳ ಸಂಗ್ರಾಹಲಯ ಇಲಾಖೆಯ ಉಪನಿರ್ದೇಶಕ ಸಿದ್ದನಗೌಡರ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿತು.

‘ದೇವಾಲಯದ ಕಾಮಗಾರಿ ಮತ್ತು ಇನ್ನಿತರ ವಿಷಯಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಲಿಖಿತ ರೂಪದಲ್ಲಿ ವರದಿ ನೀಡಲಿದ್ದಾರೆ. ಅವರು ವರದಿ ನೀಡಿದ ನಂತರವಷ್ಟೇ ಅಧಿಕಾರಿಗಳ ಅಭಿಪ್ರಾಯ ಬೆಳಕಿಗೆ ಬರಲಿದೆ’ ಎಂದು ಉಪವಿಭಾಗಾಧಿಕಾರಿ ಪಿ.ವಸಂತಕುಮಾರ್ ತಿಳಿಸಿದರು.

ರಂಗಸ್ಥಳದ ಜೀರ್ಣೋದ್ಧಾರ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ 2007ರ ಜನವರಿ 1ರಂದು ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. 108 ಅಡಿ ಎತ್ತರದ ರಾಜಗೋಪುರ ನಿರ್ಮಾಣ ಕಾರ್ಯ, ಸ್ವಾಮಿ ಪುಷ್ಕರಣಿಯ ಜೀಣೋದ್ಧಾರ, ಕಲ್ಯಾಣೋತ್ಸವ ರಂಗಮಂಟಪ ಮತ್ತು ಭಕ್ತಾದಿಗಳ ವಿಶ್ರಾಂತಿಗೆಂದೇ ಉಚಿತ ವಸತಿ ನಿಲಯದ ನಿರ್ಮಾಣ ಮುಂತಾದವುಗಳಿಗೆ ಚಾಲನೆ ನೀಡಿದ್ದರು.

 ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕು ಸೇರಿದಂತೆ ಕೋಲಾರ, ತುಮಕೂರು ಜಿಲ್ಲೆಯಿಂದ  ಜನರು ಇಲ್ಲಿ ನಿತ್ಯ ಭೇಟಿ ನೀಡುತ್ತಾರೆ. ಮದುವೆ, ಮುಂಜ್ವಿ ಸೇರಿದಂತೆ ಇತರ ಕಾರ್ಯಕ್ರಮಗಳು  ನಡೆಯುತ್ತವೆ. ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸೂರ್ಯನ ಪ್ರಥಮ ಕಿರಣ ರಂಗನಾಥ ಸ್ವಾಮಿಯ ಪಾದದ ಮೇಲೆ ಬೀಳುತ್ತವೆ. ಕಿಂಡಿಗಳಿಂದ ಹಾದು ಬರುವ ಕಿರಣಗಳು ಪಾದದ ಮೇಲೆ ಬರುವುದನ್ನು ವೀಕ್ಷಿಸಲು ಸಹಸ್ರಾರು ಜನರು ದೇಗುಲಕ್ಕೆ ಬರುತ್ತಾರೆ.

ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ತೇರು ಎಳೆಯಲಾಗುತ್ತದೆ. ಸುಮಾರು 60 ವರ್ಷಗಳ ಹಿಂದೆ ಕಲ್ಲಿನ ಚಕ್ರಗಳಿಂದ ರಥವನ್ನು ಎಳೆಯಲಾಗುತಿತ್ತು. ಆದರೆ ಈಗ ಅವುಗಳನ್ನು ಬಳಸಲಾಗುತ್ತಿಲ್ಲ. ದೇವಾಲಯದ ಆವರಣದಲ್ಲಿದ್ದ ಮೂರು ಪುಷ್ಕರಣಿಗಳಲ್ಲಿ ಎರಡು ಮಾತ್ರ ಉಳಿದುಕೊಂಡಿವೆ. ವಿಶಾಲವಾಗಿರುವ ಈ ಪುಷ್ಕರಣಿಗಳಲ್ಲಿ ನೀರು ಕೂಡ ಬತ್ತುತ್ತಿದೆ. ಸುತ್ತಮುತ್ತಲೂ ಗಿಡಗಂಟಿಗಳು ಬೆಳೆದಿದ್ದು, ನಿಧಾನವಾಗಿ ಕಣ್ಮರೆಯಾಗುವ ಅಂಚಿನಲ್ಲಿವೆ.

ಪರಿಸರ ಇನ್ನಷ್ಟು ಶುಚಿಗೊಳಿಸಿ, ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯ, ಸಾರಿಗೆ ಸೌಲಭ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸಿದರೆ ಅನುಕೂಲವಾಗುತ್ತದೆ. ದೇವಾಲಯದ ಕುರಿತು ಸಮಗ್ರ ಮಾಹಿತಿ ನೀಡಬಲ್ಲ ಕರಪತ್ರ ಅಥವಾ ಕಿರುಪುಸ್ತಿಕೆಯನ್ನು ಹೊರತಂದರೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.