ADVERTISEMENT

ಬಗೆಹರಿಯದ ಪರೀಕ್ಷಾ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 8:55 IST
Last Updated 13 ಅಕ್ಟೋಬರ್ 2011, 8:55 IST

ಚಿಕ್ಕಬಳ್ಳಾಪುರ: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಆರಂಭಗೊಂಡರೂ ಪರೀಕ್ಷೆ ಅವ್ಯವಸ್ಥೆ ಇನ್ನೂ ಕೊನೆಗೊಂಡಿಲ್ಲ. ಕೆಲ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ, ಇನ್ನೂ ಕೆಲವರಿಗೆ  ಮೇಜಿನ ವ್ಯವಸ್ಥೆ ಕೂಡ ಆಗಿಲ್ಲ. ಅವ್ಯವಸ್ಥೆ ಮತ್ತು ಸೌಕರ್ಯಗಳ ಕೊರತೆ ನಡುವೆಯೇ ಪರೀಕ್ಷೆ ಆರಂಭಗೊಂಡಿವೆ.

ಈ ಅವ್ಯವಸ್ಥೆಗೆ ನೇರ ಹೊಣೆ ಯಾರು ಹೋರುತ್ತಿಲ್ಲವಾದ್ದರಿಂದ ಸಮಸ್ಯೆ ಬಗೆಹರಿಯುತ್ತಿಲ್ಲ.  ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳು  ಮತ್ತು `ಸಂಗಮ~ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಆದರೆ ಯಾವುದೇ ರೀತಿಯ ಸ್ಪಷ್ಟವಾದ ಪ್ರತಿಕ್ರಿಯೆ ದೊರೆಯದಿರುವುದರಿಂದ ಪ್ರಾಧ್ಯಾಪಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಬೇಸರ ಮೂಡಿದೆ.

ಪರೀಕ್ಷೆ ಪ್ರವೇಶ ಪತ್ರ ಸಿಗದಿರುವುದಕ್ಕೆ, ಪರೀಕ್ಷಾ ಕೇಂದ್ರ ಬದಲಾಗಿರುವುದಕ್ಕೆ ಮತ್ತು ಕೆಲವಾರು ಅವ್ಯವಸ್ಥೆಗೆ ಬೆಂಗಳೂರು ವಿಶ್ವವಿದ್ಯಾಲಯವೇ ಕಾರಣ ಎಂದು ಕಾಲೇಜಿನ ಪ್ರಾಧ್ಯಾಪಕರು ಮುಕ್ತವಾಗಿ ಹೇಳುತ್ತಿದ್ದರೂ ಪ್ರಾಂಶುಪಾಲರು ಮಾತ್ರ  ಮೌನವಹಿಸಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ.

`ಕೃಷ್ಣಪ್ಪ ಅವರು ಸಹಕಾರ ನೀಡದಿರುವುದಕ್ಕೆ ನಾವು ಇಷ್ಟೆಲ್ಲ ಕಷ್ಟಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪೂರ್ಣ ಮಾಹಿತಿಯುಳ್ಳ ಸಿ.ಡಿ ನೀಡಿಲ್ಲ, ಪ್ರವೇಶಪತ್ರಗಳ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಸಹಕಾರ ಕೋರಿ ದೂರವಾಣಿ ಕರೆ ಮಾಡಿದರೂ ಪ್ರತಿಕ್ರಿಯಿಸುವುದಿಲ್ಲ~ ಎಂದು ಎಂ.ನಾರಾಯಣಸ್ವಾಮಿ ಆರೋಪಿಸಿದ್ದರು.

ಹಳೆಯ ವಿದ್ಯಾರ್ಥಿಗಳಾದ ಯಲುವಹಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್ ಮುಂತಾದವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಪರೀಕ್ಷೆ ಅವ್ಯವಸ್ಥೆ ಸರಿಪಡಿಸಬೇಕು ಎಂದು ಹೇಳಿದ್ದರು.

ಇದೇ ರೀತಿಯ ಪ್ರತಿಕ್ರಿಯೆ ನೀಡಿದ `ಸಂಗಮ~ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಘಟನಾ ಕಾರ್ಯದರ್ಶಿ ವಿ.ವೆಂಕಟೇಶ್ ಸರ್ಕಾರಕ್ಕೆ ಪತ್ರ ಬರೆದು, `ಪರೀಕ್ಷೆ ಸುಗಮವಾಗಿ ನಡೆಸಲು ಸರ್ಕಾರ ಮಧ್ಯಪ್ರವೇಶ ಮಾಡಬೇಕು~ ಎಂದು ಕೋರಿದ್ದರು. 

ಇದರ ಮಧ್ಯೆ ಪ್ರೊ.ಬಿ.ವಿ.ಕೃಷ್ಣಪ್ಪ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಮೌನವಹಿಸಿರುವುದಕ್ಕೆ ಕಾರಣವೇನು ಎಂಬುದು ಕಾಲೇಜು ಸಿಬ್ಬಂದಿಗಳಲ್ಲಿ ಆಶ್ಚರ್ಯ ಉಂಟು ಮಾಡಿದೆ.

`ಪರೀಕ್ಷೆ ಅವ್ಯವಸ್ಥೆಗೆ ಸಂಬಂಧಿಸಿದಂತೆ ನೇರವಾದ ಸ್ಪಷ್ಟೀಕರಣ ನೀಡುವುದರ ಬದಲು ಇಡೀ ಪ್ರಕರಣದ ದಿಕ್ಕನೇ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಕಳೆದ ಬಾರಿ ಪರೀಕ್ಷೆಯಲ್ಲಿ ಡಿಬಾರ್‌ಗೊಂಡಿದ್ದ ವಿದ್ಯಾರ್ಥಿನಿಯೊಬ್ಬರನ್ನು ರಕ್ಷಿಸಲೆತ್ನಿಸಿ ಆರೋಪ ಹೊತ್ತ ಕೃಷ್ಣಪ್ಪ ಅವರು ಈಗಲೂ ಮೌನವಹಿಸಿರುವುದಕ್ಕೆ ಏನೂ ಕಾರಣ ಎಂಬುದು ಗೊತ್ತಾಗುತ್ತಿಲ್ಲ~ ಎಂದು ಸಿಬ್ಬಂದಿ ಆರೋಪ.

ಪ್ರಾಂಶುಪಾಲರಿಗೆ ತರಾಟೆ
ಚಿಕ್ಕಬಳ್ಳಾಪುರ: ಪರೀಕ್ಷಾ ಅವ್ಯವಸ್ಥೆಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್‌ಮೂರ್ತಿ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಬಿ.ವಿ.ಕೃಷ್ಣಪ್ಪ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎಂ.ನಾರಾಯಣಸ್ವಾಮಿ ಅವರನ್ನು  ಮಂಗಳವಾರ ಸಂಜೆ ತರಾಟೆ ತೆಗೆದುಕೊಂಡಿದ್ದಾರೆ.

`ಪರೀಕ್ಷೆ ಅವ್ಯವಸ್ಥೆ ಸರಿಪಡಿಸುವುದರ ಬದಲು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದೀರಿ. ಜವಾಬ್ದಾರಿ ಹುದ್ದೆಗಳಲ್ಲಿ ಇದ್ದುಕೊಂಡು ಪರಿಸ್ಥಿತಿಯನ್ನು ನಿಭಾಯಿಸುವುದರ ಬದಲು ಶೀತಲಸಮರದಲ್ಲಿ ತೊಡಗಿದ್ದೀರಿ. ಪರೀಕ್ಷೆ ಅವ್ಯವಸ್ಥೆ ಇದೇ ರೀತಿ ಮುಂದುವರೆದಲ್ಲಿ, ಇಬ್ಬರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ~ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.