ADVERTISEMENT

ಬಗೆಹರಿಯದ ವಿದ್ಯುತ್ ಸಮಸ್ಯೆ: ಜನರು ಕಂಗಾಲು, ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 9:50 IST
Last Updated 10 ಅಕ್ಟೋಬರ್ 2011, 9:50 IST
ಬಗೆಹರಿಯದ ವಿದ್ಯುತ್ ಸಮಸ್ಯೆ: ಜನರು ಕಂಗಾಲು, ರೈತರ ಆತಂಕ
ಬಗೆಹರಿಯದ ವಿದ್ಯುತ್ ಸಮಸ್ಯೆ: ಜನರು ಕಂಗಾಲು, ರೈತರ ಆತಂಕ   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇನ್ನೂ ಒಂದು ತಿಂಗಳವರೆಗೆ ವಿದ್ಯುತ್ ಸಮಸ್ಯೆ ಬಗೆಹರಿಯುವುದಿಲ್ಲ. ಲೋಡ್‌ಶೆಡ್ಡಿಂಗ್ ವೇಳಾಪಟ್ಟಿಯನ್ನು ಶ್ರೀಘ್ರವೇ ಬಿಡುಗಡೆಗೊಳಿಸಿ, ನಗರಪ್ರದೇಶ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇಂತಿಷ್ಟು ವೇಳೆ ವಿದ್ಯುತ್ ಪೂರೈಕ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರು ನೀಡಿರುವ ಹೇಳಿಕೆ ನಗರಪ್ರದೇಶದ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ. ಗ್ರಾಮಾಂತರ ಪ್ರದೇಶದಲ್ಲಿನ ರೈತ ಸಮುದಾಯದವರಂತೂ ಇನ್ನಷ್ಟು ಕಂಗಾಲಾಗಿದ್ದಾರೆ.

ವಿದ್ಯುತ್ ಸಮರ್ಪಕ ಪೂರೈಕೆಯಿಲ್ಲದೇ ನಗರಪ್ರದೇಶದ ನಿವಾಸಿಗಳು ಒಂದು ರೀತಿಯ ಸಮಸ್ಯೆಗಳನ್ನು ಎದುರಿಸಿದರೆ, ಮಳೆಯಿಲ್ಲದೇ ಈಗಾಗಲೇ ಕಂಗೆಟ್ಟಿರುವ ಗ್ರಾಮಾಂತರ ಪ್ರದೇಶದ ನಿವಾಸಿಗಳು ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ. ತೆಲಂಗಾಣ ಹೋರಾಟ ಕೊನೆಗೊಂಡ ನಂತರ ಕಲ್ಲಿದಲು ಪೂರೈಕೆ ಸುಗಮವಾಗಿದೆ ಎಂದು ಭಾವಿಸಿದ್ದೆವು. ಆದರೆ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ವಿದ್ಯುತ್ ಪೂರೈಕೆ ಅನಿಶ್ಚಿತತೆ ಮುಂದುವರೆಯಲಿದೆ ಎಂಬುದು ತಿಳಿದು ಬೇಸರವಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ಬಹುತೇಕ ಜನರ ದೈನಂದಿನ ಜೀವನಶೈಲಿಗೆ ಧಕ್ಕೆಯಾಗಿದೆ. ಬೆಳಗಿನ ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದರಿಂದ ಕೆಲಸಕಾರ್ಯಗಳಿಗೆ ಅಡಚಣೆಯಾಗುತ್ತಿದೆ. ಕಚೇರಿಗಳಿಗೆ ಬೇಗನೇ ಹೊರಡಲು ಆಗುತ್ತಿಲ್ಲ ಎಂದು ನೌಕರವರ್ಗದವರು ಒಂದೆಡೆ ದೂರಿದರೆ, ಮತ್ತೊಂದೆಡೆ ರಾತ್ರಿ ವೇಳೆ ವಿದ್ಯಾಭಾಸ್ಯ ಮಾಡಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಸಂಕಷ್ಟ ತೋಡಿಕೊಳ್ಳುತ್ತಾರೆ. ಹೋಮ್‌ವರ್ಕ್ ಸರಿಯಾಗಿ ಮಾಡಲಾಗದೇ ಶಿಕ್ಷಕರಿಂದ ಬಯ್ಯಿಸಿಕೊಳ್ಳಬೇಕಾಗಿದೆ ಎಂದು  ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ.

ವಿದ್ಯುತ್ ಪೂರೈಕೆ ಮೇಲೆ ಅವಲಂಬಿತವಾಗಿರುವ ಉದ್ಯಮಗಳ ಪಾಡಂತೂ ಹೇಳತೀರದು. ಸಣ್ಣಪುಟ್ಟ ಗುಡಿ ಕೈಗಾರಿಕೆಗಳು, ಗಿರಣಿಗಳು, ಹೋಟೆಲ್‌ಗಳು, ಚಿತ್ರಮಂದಿರಗಳು ಮುಂತಾದ ಉದ್ಯಮಗಳ ಮಾಲೀಕರು ತಮ್ಮ ಸಂಕಷ್ಟಗಳನ್ನು ಒಂದೊಂದಾಗಿ ತೋಡಿಕೊಳ್ಳುತ್ತಾರೆ.

`ಹೋಟೆಲ್‌ಗಳಿಗೆ ಮತ್ತು ಸಾರ್ವಜನಿಕರಿಗೆ ಗಿರಣಿ, ಗ್ರೈಡಂರ್‌ಗಳ ಮೂಲಕ ಹಿಟ್ಟನ್ನು ಮಾಡಿಕೊಡುವ ನಮ್ಮ ಉದ್ಯಮಕ್ಕೆ ವಿದ್ಯುತ್ ವ್ಯತ್ಯಯದಿಂದ ತುಂಬ ಸಮಸ್ಯೆಯಾಗಿದೆ. ಅಕ್ಕಿ ಹಿಟ್ಟು ಅಥವಾ ಗೋಧಿ ಹಿಟ್ಟು ಇನ್ನೇನೂ ಪೂರ್ಣಗೊಳ್ಳಬೇಕು ಎಂಬುವಷ್ಟರಲ್ಲಿ ವಿದ್ಯುತ್ ಕಡಿತಗೊಳ್ಳುತ್ತದೆ. ವಿದ್ಯುತ್ ಪೂರೈಕೆಗಾಗಿ ಮತ್ತೆ ಒಂದು ಗಂಟೆ ಕಾಯಬೇಕು.  ಜನರೇಟರ್‌ಗಳನ್ನು ಇಟ್ಟುಕೊಂಡು ಗಿರಣಿಗಳನ್ನು ನಡೆಸುವಷ್ಟು ಶಕ್ತಿ ನಮ್ಮಲ್ಲಿ ಇಲ್ಲ~ ಎಂದು ಗಿರಣಿ ಮಾಲೀಕರು ಹೇಳುತ್ತಾರೆ.

ಹೋಟೆಲ್ ಮಾಲೀಕರು ಇನ್ನೊಂದು ರೀತಿಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. `ಬೆಳಿಗ್ಗೆ ಇಡ್ಲಿ, ದೋಸೆ ಅಥವಾ ಚಟ್ನಿ ಮಾಡುವ ಸರಿಯಾದ ಸಮಯಕ್ಕೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗುತ್ತದೆ.  ಮತ್ತೆ ಯಾವಾಗ ವಿದ್ಯುತ್ ಪೂರೈಕೆಯಾಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ಇರುವುದಿಲ್ಲ. ಚಟ್ನಿಯಿಲ್ಲದೇ ಇಡ್ಲಿ, ದೋಸೆಗಳನ್ನು             ನೀಡಿದರೆ ಗ್ರಾಹಕರು ಸಿಡಿಮಿಡಿಗೊಳ್ಳುತ್ತಾರೆ. ತಿಂಡಿಯ ಗುಣಮಟ್ಟದಲ್ಲಿ ಕೊಂಚ  ಏರುಪೇರಾದರೂ ಜನರು ಬೇಸರ ವ್ಯಕ್ತಪಡಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ  ನಾವು ಹೋಟೆಲ್ ನಡೆಸುವುದಾದರೂ ಹೇಗೆ~ ಎಂದು ಹೋಟೆಲ್ ಮಾಲೀಕರು ಪ್ರಶ್ನಿಸುತ್ತಾರೆ.

ಕೆಲ ದಿನಗಳ ಹಿಂದೆ ಕನ್ನಡನಾಡು ರಾಜ್ಯ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ, ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದರು. `ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಕೆಟ್ಟು ಹೆಸರು ತರಬೇಡಿ. ವಿದ್ಯುತ್ ಸಮಸ್ಯೆ ಪರಿಹರಿಸಿ~ ಎಂದು ಕೋರಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬೆಸ್ಕಾಂ ಅಧಿಕಾರಿಗಳಿಗೆ  ಮನವಿ ಮಾಡಿದ್ದರು. ರೈತ ಮುಖಂಡ ಯಲುವಹಳ್ಳಿ ಎನ್.ರಮೇಶ್ ನೇತೃತ್ವದಲ್ಲಿ ನೂರಾರು ರೈತರು ಮೆರವಣಿಗೆ           ನಡೆಸಿ, ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಕೈಗೊಂಡಿದ್ದರು.

ಎಲ್ಲರನ್ನೂ ಮಾತಿನ ಮೂಲಕ ಸಮಾಧಾನಪಡಿಸಿದ್ದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ್ ಅವರು ವಿದ್ಯುತ್ ಸಮಸ್ಯೆ ಶೀಘ್ರವೇ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದರು. ಇನ್ನೇನೂ ಸಮಸ್ಯೆ ಕೊನೆಗೊಳ್ಳಲಿದೆ ಎಂದು ರೈತರು ಸಮಾಧಾನಪಟ್ಟಿದ್ದರು.

ಆದರೆ ಸ್ವತಃ ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರೇ ವಿದ್ಯುತ್ ಸಮಸ್ಯೆ ಬೇಗನೇ ಬಗೆಹರಿಯುವುದಿಲ್ಲ ಎಂದು ಹೇಳಿರುವುದು ಬಹುತೇಕ ಜನರಲ್ಲಿ ನಿರಾಸೆ ಮೂಡಿಸಿದೆ.

ನಿರಂತರ ಬೆಳಕು, ನಿರಂತರ ವಿದ್ಯುತ್ ಪೂರೈಕೆಯಾಗುವುದು ಯಾವಾಗ~ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.