ADVERTISEMENT

ಬರದ ನಾಡಿನಲ್ಲಿ ಅರಳಿತು ಕಮಲ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 8:30 IST
Last Updated 9 ಫೆಬ್ರುವರಿ 2011, 8:30 IST

ಕೋಲಾರ: ‘ಜಿಲ್ಲಾ ಪಂಚಾಯಿತಿ ಮೇಲೆ ಬಿಜೆಪಿ ಬಾವುಟ ಹಾರಲಿದೆ’ ಎಂದು ಶಾಸಕ ಆರ್.ವರ್ತೂರು ಪ್ರಕಾಶ್ ಪಂಚಾಯಿತಿ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಹೇಳಿದ ಮಾತು ನಿಜವಾಗಿದೆ. ಇಲ್ಲಿನ ಜಿಲ್ಲಾ ಪಂಚಾಯಿತಿಯ ಅಧಿಕಾರ ಚುಕ್ಕಾಣಿ ಬಿಜೆಪಿಯ ವಶವಾಗಿದೆ. ಮಾಲೂರು ತಾಲ್ಲೂಕಿನ ಲಕ್ಕೂರು ಕ್ಷೇತ್ರದ ಸದಸ್ಯೆ, ಬಿಜೆಪಿಯ ಮಂಜುಳಾ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬರದ ನಾಡಿನಲ್ಲಿ ಕಮಲ ಅರಳಿದಂತಾಗಿದೆ. ಇದುವರೆಗೂ ಅಧಿಕಾರದ ರುಚಿ ನೋಡಿದ ಕಾಂಗ್ರೆಸ್-ಜೆಡಿಎಸ್‌ಗೆ ಹಿನ್ನಡೆಯುಂಟಾಗಿದೆ.

ಶಾಸಕ ವರ್ತೂರು ಮತ್ತು ಬಿಜೆಪಿ ನಡುವಿನ ಮೈತ್ರಿಯ ನಡುವೆ ಗೆದ್ದಿರುವ ಬಿಜೆಪಿ ಮತ್ತು ವರ್ತೂರರಿಗೆ ಜಿಪಂ ಮಟ್ಟದಲ್ಲಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆ ಈಡೇರಿದಂತಾಗಿದೆ. ಅದರಲ್ಲೂ, ಬಿಜೆಪಿಗೆ ಮೊದಲಿಗೆ ಹೆಚ್ಚು ಲಾಭವಾಗಿದೆ ಎಂಬುದು ಗಮನಾರ್ಹ. 20 ತಿಂಗಳ ಮೊದಲ ಅವಧಿಯ ಮೊದಲ 10 ತಿಂಗಳ ಕಂತಿಗೆ ಬಿಜೆಪಿ ಸದಸ್ಯೆಗೆ ಯಾವುದೇ ವಿರೋಧವಿಲ್ಲದೆ ಅಧ್ಯಕ್ಷ ಪಟ್ಟ ದೊರಕಿದೆ.

ಬಿಜೆಪಿಗೆ ಬೆಂಬಲ ನೀಡಿರುವ ವರ್ತೂರರಿಗೆ ಸದ್ಯಕ್ಕೆ ಲಾಭವೇನೂ ಇಲ್ಲ ಎಂಬಂತೆ ಕಂಡರೂ, ತಮ್ಮ ರಾಜಕೀಯ ವಿರೋಧಿಗಳಾದ ಕಾಂಗ್ರೆಸ್‌ನ ಪ್ರಮುಖ, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಜೆಡಿಎಸ್‌ನ ಪ್ರಮುಖ, ಮಾಜಿ ಸಚಿವ ಕೆ.ಶ್ರೀನಿವಾಸಗೌಡರನ್ನು ಮಣಿಸಿದ ಸಂತೋಷ-ಸಂಭ್ರಮ ದೊಡ್ಡಮಟ್ಟದಲ್ಲಿ ಅವರಿಗೆ ದಕ್ಕಿದೆ.ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು, ಹಲವು ದಿನಗಳಿಂದ ಬಿಜೆಪಿಯ ಮಾತಿಗೆ ತಲೆದೂಗುತ್ತಿರುವ ಅವರು ತಮ್ಮ ಬಣದ ಅಭ್ಯರ್ಥಿ ಭಾರತಿಯವರನ್ನು ಕಣಕ್ಕೆ ಇಳಿಸಲಿಲ್ಲ. ಒಂದು ಬೇಕೆಂದರೆ ಮತ್ತೊಂದನ್ನು ತ್ಯಾಗ ಮಾಡಬೇಕು ಎಂಬ ಗಾದೆ ಮಾತಿಗೆ ತಮ್ಮನ್ನು ಅವರು ಒಪ್ಪಿಸಿಕೊಂಡಿದ್ದಾರೆ. ಅವರ ನಿರೀಕ್ಷೆಯನ್ನು ಬಿಜೆಪಿ ಸಮರ್ಥವಾಗಿ ತನಗೆ ಬೇಕಾದಂತೆ ಬಳಸಿಕೊಂಡಿದೆ.

ಅಧ್ಯಕ್ಷ ಸ್ಥಾನದ ಅರ್ಹ ಅಭ್ಯರ್ಥಿಗಳಾಗಿದ್ದರೂ, ಮೇಲ್ಮಟ್ಟದ ರಾಜಕೀಯ ಒತ್ತಡಗಳ ಪರಿಣಾಮವಾಗಿ, ನಾಮಪತ್ರ ಸಲ್ಲಿಸಲು ಸಾಧ್ಯವಾಗದ ವೇಮಗಲ್ ಕ್ಷೇತ್ರದ ಭಾರತಿಯವರ ಮನಸು ಭಾರವಾಗಿದ್ದರೆ, ಕಾಮಸಮುದ್ರಂ ಕ್ಷೇತ್ರದ ಸೀಮೌಲ್ ಅವರಿಗೆ ಮೌನವೇ ಆಸರೆಯಾಗಿದೆ.ಹೆಚ್ಚಿದ ಪೈಪೋಟಿ: ಇತ್ತ ಬಿಜೆಪಿ-ವರ್ತೂರು ಮೈತ್ರಿ ‘ಸಂಸಾರ’ ಮಾಡಿಕೊಂಡ ಒಪ್ಪಂದಗಳನ್ನು ಗೌರವಿಸಿ ಖುಷಿಯಾಗಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಒಡಕು ಕಾಣಿಸಿಕೊಂಡಿದೆ. ಕೈಮಿಲಾಯಿಸುವ ಹಂತಕ್ಕೂ ಹೋಗಿದೆ ಎಂಬುದು ಖಚಿತ ಮೂಲಗಳ ನುಡಿ.

ಅಧ್ಯಕ್ಷ ಸ್ಥಾನಕ್ಕೆ ಅರ್ಹ ಮಹಿಳೆ ಇಲ್ಲದೆ ಅಸಹಾಯಕವಾದ ಈ ಎರಡೂ ಪಕ್ಷಗಳು ಉಪಾಧ್ಯಕ್ಷ ಹುದ್ದೆಯನ್ನಾದರೂ ಪಡೆಯುವ ಹಂಬಲ ಹೊಂದಿದ್ದವು. ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಈ ಸ್ಥಾನಕ್ಕೆ ಎರಡೂ ಪಕ್ಷಗಳಲ್ಲಿ ಪೈಪೋಟಿ ಹೆಚ್ಚಿತ್ತು. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಎಲ್ಲ ಐದು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು ಎಂಬ ನಿರ್ಧಾರವಾಗಿದ್ದರೂ, ಅಲ್ಲಿರುವವರೇ ಪೈಪೋಟಿಗೆ ಇಳಿದಿದ್ದರಿಂದ, ಕಳೆದ ಎರಡು ದಿನದಿಂದ ಚುನಾವಣೆ ನಡೆಯುವ ಮಂಗಳವಾರ ಬೆಳಿಗ್ಗೆವರೆಗೂ ಸನ್ನಿವೇಶ ಪ್ರಕ್ಷುಬ್ದತೆಯಿಂದ ಕೂಡಿತ್ತು.

ಕಳೆದ ಬಾರಿ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಸದಸ್ಯ ತೂಪಲ್ಲಿ ನಾರಾಯಣ ಸ್ವಾಮಿ ಕಾಂಗ್ರೆಸ್ ಪರ ವಾಲಿದ್ದರಿಂದ ಅವರಿಗೆ ಈಗ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಮಾಜಿ ಸಚಿವ ಕೆ. ಶ್ರೀನಿವಾಸಗೌಡರ ನೇತೃತ್ವದ ಪಡೆ, ಬಂಗಾರಪೇಟೆ ಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಆಗ್ರಹಿಸಿದ ಪರಿಣಾಮ ಸನ್ನಿವೇಶ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಎನ್ನಲಾಗಿದೆ.

ಅದೇ ರೀತಿ, ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಚಿಕ್ಕಅಂಕಂಡಹಳ್ಳಿ ಕ್ಷೇತ್ರದ ಎಂ.ಎಸ್.ಆನಂದ್ ಅವರ ಆಕಾಂಕ್ಷೆಯನ್ನು ಸ್ಪಷ್ಟವಾಗಿ ತಳ್ಳಿಹಾಕಲಾಗಿತ್ತು. ಕೊನೆಗೆ ಸೋಮಶೇಖರ ಅವರನ್ನು ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಲಾಗಿತ್ತು. ಅದರಿಂದ ಅಸಮಾಧಾನಗೊಂಡ ಎಂ.ಎಸ್. ಆನಂದ್ ಮುಖಂಡರ ಮಾತಿಗೆ ಮಣೆ ಹಾಕದೆ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು.ವರ್ತೂರು- ಬಿಜೆಪಿ ಸದಸ್ಯರ ಜೊತೆ ಕುಳಿತು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. 12 ಮತ ಪಡೆದು ಸೋತರು. 16 ಮತ ಪಡೆದ ಸೋಮಶೇಖರ ಗೆದ್ದರು.

ಇದೀಗ ಫಲಿತಾಂಶದ ಬಳಿಕ ಶ್ರೀನಿವಾಸಗೌಡರ ವಿರುದ್ಧ ಆನಂದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕೊನೇ ಕ್ಷಣದವರೆಗೂ ಭೇದ ತಂತ್ರವನ್ನು ಅನುಸರಿಸಿದರು’ ಎಂದು ಕೆ.ಎಚ್. ಮುನಿಯಪ್ಪನವರ ವಿರುದ್ಧ ವರ್ತೂರು ಕಿಡಿ ಕಾರಿದ್ದಾರೆ. ಬಿಜೆಪಿ ಅಧಿಕಾರ ಪಡೆದ ಸಂಭ್ರಮದಲ್ಲಿದೆ. ದ್ವೇಷ ರಾಜಕಾರಣದ ಕಿಡಿ ಮತ್ತು ಬಿಜೆಪಿ ಸಂಭ್ರಮ ಜಿಲ್ಲಾ ಪಂಚಾಯಿತಿ ಆಡಳಿತದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.