ADVERTISEMENT

ಬರಪೀಡಿತ ಜಿಲ್ಲೆಯಲ್ಲಿ ಕೋಟ್ಯಧೀಶರ ಸ್ಪರ್ಧೆ

ಮತದಾರರ ಎದುರು ಹಲವು ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 12:45 IST
Last Updated 20 ಏಪ್ರಿಲ್ 2013, 12:45 IST

ಚಿಕ್ಕಬಳ್ಳಾಪುರ: ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಒಬ್ಬರಿಗಿಂತ ಒಬ್ಬರು ಸ್ಥಿತಿವಂತರಿದ್ದಾರೆ.

ಇನ್ನು ವಿದ್ಯಾಭ್ಯಾಸ ಗಮನಿಸಿದರೆ ಕೆಲವರು ವೈದ್ಯಕೀಯ ಪದವಿ ಪಡೆದಿದ್ದರೆ, ಇನ್ನೂ ಕೆಲವರು ಬಿ.ಎ., ಅಥವಾ ಬಿ.ಎಸ್ಸಿ., ಪದವಿವರೆಗೆ ಶಿಕ್ಷಣ ಪೂರೈಸಿದ್ದಾರೆ. ಕೋಟ್ಯಧೀಶರೊಬ್ಬರಂತೂ ಕೇವಲ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ಅಂತಹ ಕೆಲವರ ಪರಿಚಯ ಮತ್ತು ಆಸ್ತಿ ವಿವರ ಇಲ್ಲಿದೆ.

ಡಾ.ಎಂ.ಸಿ.ಸುಧಾಕರ್‌ಗೆ ಕಾರಿಲ್ಲ
ಡಾ.ಎಂ.ಸಿ.ಸುಧಾಕರ್ (44) ದಂತ ವೈದ್ಯರು. ಮಂಗಳೂರಿನ ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯಲ್ಲಿ ಪದವಿ ಪೂರ್ಣಗೊಳಿಸಿರುವ ಅವರು ಚಿಂತಾಮಣಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯಥಿಯಾಗಿ ಸ್ಪರ್ಧಿಸುತ್ತಿದ್ದಾರೆ.  ಅವರು ಮತ್ತು ಕುಟುಂಬದ ಒಟ್ಟು ಆಸ್ತಿ ಮೌಲ್ಯ 11.64 ಕೋಟಿ ರೂಪಾಯಿ ಮೀರುತ್ತದೆ. ಆದರೆ ಲೆಕ್ಕ ಹಾಕಿದರೆ, ಚರಾಸ್ತಿ ಮತ್ತು ಸ್ಥಿರಾಸ್ತಿಯಲ್ಲಿ ಸುಧಾಕರ್‌ಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆ.

ಡಾ.ಎಂ.ಸಿ.ಸುಧಾಕರ್ ಚರಾಸ್ತಿ ಮೌಲ್ಯ 54.44 ಲಕ್ಷ ರೂಪಾಯಿಗಳಷ್ಟಿದ್ದರೆ, ಅವರ ಪತ್ನಿ ಬಳಿ 2.78 ಕೋಟಿ ಮೌಲ್ಯದ ಚರಾಸ್ತಿಯಿದೆ. ಸ್ಥಿರಾಸ್ತಿಯಲ್ಲಿ ಅವರ ಆಸ್ತಿ ಮೌಲ್ಯ 3.16 ಕೋಟಿ ರೂಪಾಯಿಯಿದ್ದರೆ, ಪತ್ನಿಯ ಚರಾಸ್ತಿ ಮೌಲ್ಯ 5.19 ಕೋಟಿ ರೂಪಾಯಿಯಿದೆ. ಅವರಿಗೆ 30 ಲಕ್ಷ ರೂಪಾಯಿ ಸಾಲದ ಹೊಣೆಯಿದ್ದರೆ, ಪತ್ನಿಗೆ 5.83 ಕೋಟಿ ರೂಪಾಯಿ ಸಾಲದ ಹೊಣೆಯಿದೆ.

ಸುಧಾಕರ್ ಬಳಿ 78 ಸಾವಿರ ರೂಪಾಯಿ ನಗದು ಇದ್ದರೆ, ಪತ್ನಿ ಬಳಿ 76 ಸಾವಿರ ರೂಪಾಯಿ ನಗದಿದೆ. ಅವರ ಬ್ಯಾಂಕ್ ಖಾತೆಗಳಲ್ಲಿ 4.49 ಲಕ್ಷ ರೂಪಾಯಿಯಿದ್ದರೆ, ಪತ್ನಿಯ ಬ್ಯಾಂಕ್ ಖಾತೆಗಳಲ್ಲಿ 15 ಲಕ್ಷ ರೂಪಾಯಿಯಿದೆ. ಕೋಟ್ಯಂತರ ರೂಪಾಯಿ ಆಸ್ತಿಯಿದ್ದರೂ ಸುಧಾಕರ್ ಬಳಿ ಸ್ವಂತ ಕಾರಿಲ್ಲ. ಆದರೆ ಅವರ ಪತ್ನಿ ಬಳಿ ಒಟ್ಟು 20 ಲಕ್ಷ ರೂಪಾಯಿ ಮೌಲ್ಯಕ್ಕೂ ಹೆಚ್ಚು ಬೆಲಾ ಬಾಳುವ ಟೊಯೊಟಾ ಇನ್ನೊವಾ ಮತ್ತು ಸ್ಕಾರ್ಪಿಯೊ ವಾಹನಗಳಿವೆ.

ಅವರ ಬಳಿ 1.39 ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ ತೂಕದ ಚಿನ್ನಾಭರಣವಿದ್ದರೆ, ಪತ್ನಿ ಬಳಿ 2 ಲಕ್ಷ ರೂಪಾಯಿ ಮೌಲ್ಯ 4 ಕೆ.ಜಿ. ತೂಕದ ಬೆಳ್ಳಿ ಮತ್ತು 90 ಲಕ್ಷ ರೂಪಾಯಿ ಮೌಲ್ಯದ 3,200 ಗ್ರಾಂ ತೂಕದ ಚಿನ್ನಾಭರಣವಿದೆ. ಸುಧಾಕರ್ ಅವರಿಗೆ ಪತ್ನಿಯೇ 35,352 ರೂಪಾಯಿ ಸಾಲ ನೀಡಿದ್ದಾರೆ.

ವಿ.ಮುನಿಯಪ್ಪಗೆ ಸಾಲ ಇಲ್ಲ
ವಿ.ಮುನಿಯಪ್ಪ (66) ಬಿ.ಎಸ್ಸಿ., ಅನುತ್ತೀರ್ಣರಾಗಿದ್ದು, ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಕುಟುಂಬದ ಒಟ್ಟು ಆಸ್ತಿ 5 ಕೋಟಿ ರೂಪಾಯಿಗೆ ಸಮೀಪಿಸುತ್ತದೆ. ಅದರಲ್ಲಿ ಚರಾಸ್ತಿ ಮೌಲ್ಯ 19.93 ಲಕ್ಷ ರೂಪಾಯಿಯಾಗಿದ್ದರೆ, ಅವರ ಪತ್ನಿ ಎಂ.ರತ್ನಮ್ಮ ಚರಾಸ್ತಿ ಮೌಲ್ಯ 57.99 ಲಕ್ಷ ರೂಪಾಯಿ. ಅವರ ಬಳಿ 2.79 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದ್ದರೆ, ಪತ್ನಿ 1.51 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ವಿ.ಮುನಿಯಪ್ಪ ಅವರ ಬಳಿ 3 ಲಕ್ಷ ರೂಪಾಯಿ ನಗದು ಇದ್ದರೆ, ಅವರ ಪತ್ನಿ ಬಳಿ 2 ಲಕ್ಷ ರೂಪಾಯಿ ನಗದು ಇದೆ. 2.80 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಆಲ್ಟೊ ಕಾರು ಹೊಂದಿದ್ದಾರೆ. ಅವರ ಬಳಿ 2.50 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ಚಿನ್ನಾಭರಣವಿದ್ದರೆ, 45.78 ಲಕ್ಷ ರೂಪಾಯಿ ಮೌಲ್ಯದ 4552 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಅವರಿಗೆ ಮತ್ತು ಕುಟುಂಬಕ್ಕೆ ಸಾಲದ ಹೊಣೆ ಯಾವುದೂ ಇಲ್ಲ.

ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ
ಜೆ.ಕೆ.ಕೃಷ್ಣಾರೆಡ್ಡಿ (46) ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಚಿಂತಾಮಣಿ ಕ್ಷೇತ್ರದಲ್ಲಿ ಎಂ.ಕೃಷ್ಣಾರೆಡ್ಡಿ ಹೆಸರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರ ಮತ್ತು ಕುಟುಂಬದ ಒಟ್ಟು ಆಸ್ತಿ ಮೌಲ್ಯ 40 ಕೋಟಿ ರೂಪಾಯಿ ಸಮೀಪಿಸುತ್ತದೆ. ಅವರ ಬಳಿ 1.59 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿಯಿದ್ದರೆ, ಅವರ ಪತ್ನಿ ಬಳಿ 46.70 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿಯಿದೆ.
ಅವರ ಬಳಿ 34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದ್ದರೆ, ಪತ್ನಿ ಬಳಿ 4.64 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದೆ. ಅವರ ಬಳಿ ನಗದು ರೂಪದಲ್ಲಿ 9 ಲಕ್ಷ ರೂಪಾಯಿಯಿದ್ದರೆ, ಪತ್ನಿ ಬಳಿ 3 ಲಕ್ಷ ರೂಪಾಯಿ ನಗದು ಇದೆ. ಅವರ ಬಳಿ 44.50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳಿದ್ದರೆ, ಪತ್ನಿ ಬಳಿ 29.50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳಿವೆ. ಅವರ ಬಳಿ 24 ಲಕ್ಷ ರೂಪಾಯಿ ಮೌಲ್ಯದ ಹೋಂಡಾ ಕಾರು ಮತ್ತು 12 ಲಕ್ಷ ರೂಪಾಯಿ ಮೌಲ್ಯದ ಕರೊಲಾ ಕಾರು ಇದೆ. ಅವರಿಗೆ ಯಾವುದೇ ಸಾಲದ ಹೊಣೆಯಿಲ್ಲ.

ಪತ್ನಿಯೇ ಶ್ರೀಮಂತೆ
ವಾಣಿ ಕೃಷ್ಣಾರೆಡ್ಡಿ (41) ಬಿ.ಎ., ಪವೀಧರರಾಗಿದ್ದು, ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಮತ್ತು ಕುಟುಂಬದ ಅಸ್ತಿಯು 81 ಲಕ್ಷ ರೂಪಾಯಿ ಮೀರಿದೆ. ಆದರೆ ಪತಿ ಸುರೇಶ್ ರಾಮಕೃಷ್ಣ ಅವರಿಗಿಂತ ವಾಣಿ ಕೃಷ್ಣಾರೆಡ್ಡಿ ಶ್ರೀಮಂತೆ. ವಾಣಿ ಕೃಷ್ಣಾರೆಡ್ಡಿ ಅವರಿಗೆ 27.29 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿಯಿದ್ದರೆ, ಪತಿ ಸುರೇಶ್‌ಗೆ 4.18 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿಯಿದೆ. ಆದರೆ ಸ್ಥಿರಾಸ್ತಿ ವಿಷಯದಲ್ಲಿ ಇಬ್ಬರೂ ಸಮಾನವಾಗಿದ್ದಾರೆ. ಇಬ್ಬರಿಗೂ ತಲಾ 25 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದೆ. ವಾಣಿ ಕೃಷ್ಣಾರೆಡ್ಡಿಯವರಿಗೆ ಸಾಲ ಇಲ್ಲ. ಆದರೆ ಪತಿಗೆ 5.78 ಲಕ್ಷ ರೂಪಾಯಿ ಸಾಲ ಇದೆ.

ಅವರ ಬಳಿ 1.49 ಲಕ್ಷ ರೂಪಾಯಿಗಳಷ್ಟು ನಗದು ಇದ್ದರೆ, ಅವರ ಪತಿ ಬಳಿ 1.25 ಲಕ್ಷ ರೂಪಾಯಿ ನಗದು ಇದೆ. ಅವರ ಬಳಿ ಯಾವುದೇ ರೀತಿಯ ವಾಹನವಿಲ್ಲ. ಅವರ ಪತಿ 1 ಲಕ್ಷ ರೂಪಾಯಿ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ. ಅವರ ಬಳಿ 17.85 ಲಕ್ಷ ರೂಪಾಯಿ ಮೌಲ್ಯದ 700 ಗ್ರಾಂ ತೂಕದ ಚಿನ್ನ ಮತ್ತು 1.44 ಲಕ್ಷ ರೂಪಾಯಿ ಮೌಲ್ಯದ 3 ಕೆ.ಜಿ. ಬೆಳ್ಳಿಯಿದೆ.

ಪತಿಗಿಂತ ಪತ್ನಿಯೇ ಶ್ರೀಮಂತೆ!
ಡಾ.ಕೆ.ಸುಧಾಕರ್ (39) ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅವರ ಮತ್ತು ಕುಟುಂಬದ ಒಟ್ಟು ಆಸ್ತಿ 2.29 ಕೋಟಿ ರೂಪಾಯಿ. ಅವರ ಚರಾಸ್ತಿ ಮೌಲ್ಯ 8.41 ಲಕ್ಷ ರೂಪಾಯಿಯಾಗಿದ್ದರೆ, ಪತ್ನಿ ಪ್ರೀತಿಯ ಚರಾಸ್ತಿ ಮೌಲ್ಯ 8.52 ಲಕ್ಷ ರೂಪಾಯಿ. ಅವರ ಸ್ಥಿರಾಸ್ತಿ 60 ಲಕ್ಷ ರೂಪಾಯಿ.

ಒಟ್ಟು 3.04 ಲಕ್ಷ ರೂಪಾಯಿ ಸಾಲಗಾರರಾಗಿರುವ ಅವರ ಬಳಿ ನಗದು ರೂಪದಲ್ಲಿ 3 ಲಕ್ಷ ರೂಪಾಯಿಯಿದ್ದರೆ, ಪತ್ನಿ ಬಳಿ 2 ಲಕ್ಷ ರೂಪಾಯಿ ನಗದು ಇದೆ. ಅವರ ಬಳಿ 2 ಲಕ್ಷ ರೂಪಾಯಿ ಮೌಲ್ಯದ ಲ್ಯಾನ್ಸರ್ ಕಾರು ಮತ್ತು ಒಟ್ಟು 6.34 ಲಕ್ಷ ರೂಪಾಯಿ ಮೌಲ್ಯದ ಎರಡು ಟ್ರ್ಯಾಕ್ಟರ್ ಮತ್ತು ಟ್ರೇಲರ್ ಇದೆ. ಪತ್ನಿ ಬಳಿ 4 ಲಕ್ಷ ರೂಪಾಯಿ ಮೌಲ್ಯದ ಹುಂಡೈ ಕಾರು ಮತ್ತು 25 ಸಾವಿರ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನವಿದೆ.

ಅವರ ಬಳಿ 3.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 117 ಗ್ರಾಂ ತೂಕದ ಚಿನ್ನಾಭರಣವಿದ್ದರೆ, ಪತ್ನಿ ಬಳಿ 20 ಲಕ್ಷ ರೂಪಾಯಿ ಮೌಲ್ಯದ 1 ಕೆ.ಜಿ. ಚಿನ್ನ, 2.12 ಲಕ್ಷ ರೂಪಾಯಿ ಮೌಲ್ಯದ 4 ಕೆ.ಜಿ. ಬೆಳ್ಳಿ ಮತ್ತು 15 ಲಕ್ಷ ರೂಪಾಯಿ ಮೌಲ್ಯದ 4 ಡೈಮೆಂಡ್ ಸೆಟ್‌ಗಳಿವೆ.

ಪತಿ, ಪತ್ನಿಗೆ ವಾಹನವಿಲ್ಲ
ಎಂ.ರಾಜಣ್ಣ (49) ಬಿ.ಎಸ್ಸಿ ಪದವೀಧರರಾಗಿದ್ದು, ಡೇರಿ ತಂತ್ರಜ್ಞಾನ ಅಧ್ಯಯನ ಮಾಡಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿದಿದ್ದಾರೆ. ಅವರು 10 ಲಕ್ಷ ರೂಪಾಯಿ ನಗದು ಹೊಂದಿದ್ದರೆ, ಪತ್ನಿ ಶಿವಲೀಲಾ ಬಳಿ 1 ಲಕ್ಷ ಮತ್ತು ಎಂ.ರಾಜಣ್ಣ ಅವರ ತಂದೆ ಎಂ.ಬಿ.ಮುನಿಯಪ್ಪ ಬಳಿ 1 ಲಕ್ಷ ರೂಪಾಯಿ ನಗದು ಇದೆ. ಬ್ಯಾಂಕ್‌ನಲ್ಲಿ ಒಂದು ಲಕ್ಷ ರೂಪಾಯಿ ಹೊಂದಿರುವ ಅವರು 10 ಲಕ್ಷ ರೂಪಾಯಿ ಮತ್ತು ಪತ್ನಿ ಶಿವಲೀಲಾ 2 ಲಕ್ಷ ರೂಪಾಯಿ ಮೌಲ್ಯದ ವಿಮೆ ಮಾಡಿಸಿದ್ದಾರೆ.

ಪತಿ ಮತ್ತು ಪತ್ನಿ ಇಬ್ಬರ ಬಳಿಯೂ ವಾಹನವಿಲ್ಲ. ಆದರೆ ರಾಜಣ್ಣ ಅವರ ತಂದೆ ಮುನಿಯಪ್ಪ ಬಳಿ 1985ರ ಮಾಡೆಲ್‌ನ ಅಂಬಾಸಡರ್ ಕಾರು ಮತ್ತು 1996 ಮಾಡೆಲ್‌ನ ಸರಕುಸಾಗಣೆ ವಾಹನವಿದೆ. ಎಂ.ರಾಜಣ್ಣ ಬಳಿ 2.70 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದರೆ, ಪತ್ನಿ ಶಿವಲೀಲಾ ಬಳಿ 7.50 ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚಿನ್ನ ಇದೆ. ಅವರ ಪುತ್ರಿ ಮೋನಿಕಾ ಬಳಿ 75 ಸಾವಿರ ರೂಪಾಯಿ ಮೌಲ್ಯದ ಆಭರಣವಿದೆ. ಅವರ ಕುಟುಂಬದ ಬಳಿ ಒಟ್ಟು 88 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದೆ ಮತ್ತು 2 ಲಕ್ಷ ರೂಪಾಯಿಷ್ಟು ಸಾಲವಿದೆ.

ಆದಾಯಕ್ಕಿಂತ ಸಾಲವೇ ಹೆಚ್ಚು
ಹರಿನಾಥರೆಡ್ಡಿ (37) ಬಿ.ಎ ಪದವೀಧರರಾಗಿದ್ದು, ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರ ಮತ್ತು ಕುಟುಂಬದ ಒಟ್ಟು ಆಸ್ತಿ ಮೌಲ್ಯದ 4.50 ಕೋಟಿ ರೂಪಾಯಿಗೂ ಹೆಚ್ಚಿದೆ. ಅವರ ಬಳಿ 75.60 ಲಕ್ಷ ರೂಪಾಯಿಯಷ್ಟು ಚರಾಸ್ತಿಯಿದ್ದರೆ, ಪತ್ನಿ ಬಳಿ 73.90 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿಯಿದೆ. ಅವರ ಬಳಿ 3.53 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದ್ದರೆ, ಪತ್ನಿ ಬಳಿ 44.65 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದೆ. ಹರಿನಾಥರೆಡ್ಡಿ ವಿರುದ್ಧ ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಚೆಕ್‌ಬೌನ್ಸ್ ಮತ್ತು ಬಾಗೇಪಲ್ಲಿ ಠಾಣೆಯಲ್ಲಿ ಚುನಾವಣೆ ಮೊಕದ್ದಮೆ ಇದೆ.

ಅವರ ಬಳಿ ನಗದು ರೂಪದಲ್ಲಿ 1.60 ಲಕ್ಷ ರೂಪಾಯಿಯಿದ್ದರೆ, ಪತ್ನಿ ಬಳಿ 50 ಸಾವಿರ ರೂಪಾಯಿ ನಗದು ಇದೆ. ಅವರ ಬಳಿ ಅತ್ಯಾಧುನಿಕ ಮಾದರಿಯ ಮೂರು ಕಾರುಗಳಿವೆ. 42 ಲಕ್ಷ ರೂಪಾಯಿ ಮೌಲ್ಯದ ಲ್ಯಾಂಡ್‌ರೋವರ್ ಕಾರು, 24 ಲಕ್ಷ ರೂಪಾಯಿ ಮೌಲ್ಯದ ಫಾರ್ಚೂನರ್ ಕಾರು ಮತ್ತು 2.50 ಲಕ್ಷ ರೂಪಾಯಿ ಮೌಲ್ಯದ ಆಲ್ಟೊ ಕಾರು ಇದೆ. ಪತ್ನಿ ಒಟ್ಟು 30 ಲಕ್ಷ ರೂಪಾಯಿ ಮೌಲ್ಯದ ಎರಡು ಇನ್ನೊವಾ ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿ 4.50 ಲಕ್ಷ ರೂಪಾಯಿ ಮೌಲ್ಯದ 150 ಗ್ರಾಂ ತೂಕದ ಚಿನ್ನವಿದ್ದರೆ, 18 ಲಕ್ಷ ರೂಪಾಯಿ ಮೌಲ್ಯದ 600 ಗ್ರಾಂ ತೂಕದ ಚಿನ್ನ ಇದೆ. ಆದರೆ ಅವರಿಗೆ 5 ಕೋಟಿ ರೂಪಾಯಿ ಸಾಲ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.