ADVERTISEMENT

ಬಾಯಲ್ಲಿ ನೀರೂರಿಸುವ ಕಾರೆ ಹಣ್ಣು

ಗ್ರಾಮಗಳಲ್ಲಿ ಕಾಯಿ ಬಿಟ್ಟು ತೂಗುತ್ತಿವೆ ಕಾರೆ ಗಿಡಗಳು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2016, 9:10 IST
Last Updated 13 ಸೆಪ್ಟೆಂಬರ್ 2016, 9:10 IST
ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಗ್ರಾಮದ ಸಮೀಪ ರಸ್ತೆ ಬದಿಯಲ್ಲಿ ಕಾಯಿಬಿಟ್ಟಿ ಕಂಗೊಳಿಸುತ್ತಿರುವ ಕಾರೆ ಗಿಡ
ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಗ್ರಾಮದ ಸಮೀಪ ರಸ್ತೆ ಬದಿಯಲ್ಲಿ ಕಾಯಿಬಿಟ್ಟಿ ಕಂಗೊಳಿಸುತ್ತಿರುವ ಕಾರೆ ಗಿಡ   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕಾರೆ ಗಿಡಗಳು ಕಾಯಿ ಬಿಟ್ಟು ತೂಗುತ್ತಿವೆ. ಗ್ರಾಮೀಣ ಪ್ರದೇಶದ ಮಕ್ಕಳು ಹಣ್ಣನ್ನು ಬಿಡಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿ ಸವಿಯುತ್ತಿದ್ದಾರೆ.

ಕಾರೆ, ಚೂಪಾದ ಮುಳ್ಳಿನ ಪೊದೆ. ಎಚ್ಚರ ತಪ್ಪಿದರೆ ಕೈ, ಕಾಲಿಗೆ ಮುಳ್ಳು ತಗಲುವುದು ನಿಶ್ಚಿತ. ಹಸಿರು ಕಾಯಿ, ಹಳದಿ ಬಣ್ಣಕ್ಕೆ ತಿರುಗಿ, ಕಾಫಿ ಬಣ್ಣದಲ್ಲಿ ಹಣ್ಣಾದಾಗ ಗ್ರಾಮೀಣ ಮಕ್ಕಳು ಕಾರೆ ಪೊದೆಗಳ ಕಡೆ ಕಾಲು ಹಾಕುತ್ತಾರೆ.ಹಣ್ಣನ್ನು ಬಿಡಿಸಿ ಮನೆಗೆ ತರಲು ಆಗದಿರುವುದರಿಂದ (ಹೆಚ್ಚು ಮೃದು) ಮುಳ್ಳಿನ ನಡುವೆ ಬೆರಳು ತೂರಿಸಿ ಬಿಡಿಸಿ ಬಾಯಿಗೆ ಹಾಕಿಕೊಳ್ಳುವುದು ರೂಢಿ.

ಮಕ್ಕಳು ಹಳದಿ ಬಣ್ಣದ ದೋರೆ ಕಾಯಿಯನ್ನು ಬಿಡಿಸಿ ಮನೆಗೆ ಕೊಂಡೊಯ್ದು, ಗೊರಜು ಕಲ್ಲು ಸೇರಿಸಿ ಹಣ್ಣು ಮಾಡುತ್ತಾರೆ. ಮನೆ ಸೇರಿದ ಹಣ್ಣನ್ನು ಹಿರಿಯರೂ ಸವಿಯುತ್ತಾರೆ. ಕಾರೆ ಕಾಯಿ ಒತ್ತಾಗಿ ಬಿಟ್ಟರೆ ಭತ್ತ ಸಮೃದ್ಧವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಕೃಷಿಕ ವಲಯದಲ್ಲಿತ್ತು. ಆದರೆ ಈಗ ಮಳೆ ಕೊರತೆಯಿಂದಾಗಿ ಗದ್ದೆ ಬಯಲಿನ ಬೇಸಾಯ ಸಂಪುರ್ಣ ನಿಂತಿದೆ.

ಗ್ರಾಮೀಣ ಪ್ರದೇಶದಲ್ಲಿ ಕಾರೆ ಕಾಯಿಗೆ ಸಂಬಂಧಿಸಿದಂತೆ ಶಿಶು ಗೀತೆಗಳಿವೆ. ಆಧುನಿಕತೆಯ ಹಂಗಿನಲ್ಲಿ ಜಾನಪದ ಶಿಶುಗೀತೆಗಳು ಹಾಗೂ ಜಾನಪದ ಗೀತೆಗಳು ನೇಪಥ್ಯಕ್ಕೆ ಸರಿಯುತ್ತಿರುವುದು ಖೇದಕರ ಸಂಗತಿಯಾಗಿದೆ.

ಕಾರೆ ಹಣ್ಣು ತಿನ್ನಲು ರುಚಿಯಾಗಿರುತ್ತದೆ. ಇಷ್ಟು ಮಾತ್ರವಲ್ಲ. ಕಾರೆ ಗಿಡದ ಸೊಪ್ಪೆಂದರೆ ಮೇಕೆಗಳಿಗೆ ಪಂಚಪ್ರಾಣ, ಮುಳ್ಳುಗಳ ನಡುವಿನ ಸೊಪ್ಪನ್ನು, ಮುಳ್ಳು ಸೋಕದಂತೆ ತಿನ್ನುವ ಆಡಿನ ಪರಿ ನಿಜಕ್ಕೂ ಅಚ್ಚರಿ.

ಎತ್ತರವಾಗಿ ಬೆಳೆದ ಕಾರೆ ಕೊಂಬೆಗಳನ್ನು ಕತ್ತರಿಸಿ ಕಣದಲ್ಲಿ ರಾಗಿ ಹುಲ್ಲು ಸವರಲು ಬಳಸುತ್ತಾರೆ. ಗುಬ್ಬನ್ನು ತೆಗೆದು ಕಾಳು ವಿಂಗಡಿಸಲೂ ಕಾರೆ ಮುಳ್ಳುಕಡ್ಡಿ ಬೇಕು.

ಹಿಂದೆ ಕಾರೆ ಪೊದೆಗಳು ಎಲ್ಲೆಲ್ಲೂ ಕಂಡುಬರುತ್ತಿದ್ದವು. ಆದರೆ ಕಾಡುಗಳ ನಾಶದೊಂದಿಗೆ ಕಾರೆ ಗಿಡಗಳ ಸಂಖ್ಯೆಯೂ ಕುಸಿದಿದೆ. ಈಗ ರಸ್ತೆ ಬದಿಗಳು ಹಾಗೂ ಹಸಿರು ಬೇಲಿಗಳಲ್ಲಿ ಮಾತ್ರ ನೆಲೆ ಕಂಡುಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.