ADVERTISEMENT

ಬೇಡಿಕೆ ಈಡೇರಿಕೆಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 6:30 IST
Last Updated 20 ಅಕ್ಟೋಬರ್ 2012, 6:30 IST

ಗೌರಿಬಿದನೂರು: ನಿವೇಶನ ರಹಿತರಿಗೆ ನಿವೇಶನ, ವಸತಿ ಹೀನರಿಗೆ ಮನೆ ನಿರ್ಮಾಣಕ್ಕೆ ಕನಿಷ್ಠ 3ಲಕ್ಷ ರೂಪಾಯಿ, ಶೌಚಾಲಯ ನಿರ್ಮಾಣಕ್ಕಾಗಿ ಪ್ರತಿ ದಲಿತ ಕುಟುಂಬಕ್ಕೆ ಕನಿಷ್ಠ 20 ಸಾವಿರ ರೂಪಾಯಿ ನೀಡಬೇಕು ಎಂಬುದು  ಸೇರಿದಂತೆ  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಶುಕ್ರವಾರ ಪಟ್ಟಣದ ತಾಲ್ಲೂಕು ಕಚೇರಿ ಎದುರು ಪ್ರಚಾರಾಂದೋಲನ, ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು. ದಲಿತ ವಿಮೋಚನೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ  ಸಂಪೂರ್ಣ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ಮುಖಂಡ ಸಿದ್ದಗಂಗಪ್ಪ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿವೆ. ಇಂದಿಗೂ ದಲಿತರು ಭೂಹೀನರಾಗಿ, ಅಸಂಘಟಿತ ಕಾರ್ಮಿಕರಾಗಿ ಅಭದ್ರತೆಯಿಂದ ಜೀವನ ಸಾಗಿಸುತ್ತಿದ್ದಾರೆ. ದಲಿತ ಕಾಲೊನಿಗಳಲ್ಲಿ ಸ್ವಚ್ಛತೆ ಕಾಪಾಡಲು ಈವರೆಗೂ ಸಾಧ್ಯವಾಗಿಲ್ಲ. ನರೇಗಾ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗಿವೆ ಎಂದು ಆರೋಪಿಸಿದರು.

ಸರ್ಕಾರದ ವಿವಿಧ ಇಲಾಖೆಗೆ ಬರುವ ಅನುದಾನದಲ್ಲಿ ಶೇ 22ರಷ್ಟನ್ನು ಕಡ್ಡಾಯವಾಗಿ ದಲಿತರ ಅಭಿವೃದ್ಧಿಗೆ  ವಿನಿಯೋಗಿಸಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿ ನಿಗಮಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಶಾಸಕರು ಕೈಬಿಡಬೇಕು.

ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನಿಗದಿತ ಸಮಯಕ್ಕೆ ನೀಡಬೇಕು ಎಂದರು.
ತಾಲ್ಲೂಕು ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಸಿ.ಅಶ್ವತ್ಥಪ್ಪ ಮಾತನಾಡಿದರು. ಮುಖಂಡರಾದ ರವಿಚಂದ್ರರೆಡ್ಡಿ, ಅನ್ವರ್‌ಬಾಷಾ, ಆನೂಡಿ ನಾಗರಾಜ್, ಶ್ರೀನಿವಾಸ್, ಮಂಜುನಾಥ್, ನಾಗರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.