ADVERTISEMENT

ಬ್ರಹ್ಮಗಿರಿ ಬೆಟ್ಟದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ

ದಟ್ಟ ಮಂಜಿನಿಂದ ದಾರಿ ತಪ್ಪಿಸಿಕೊಂಡು ಸಹಾಯಕ್ಕೆ ಪೊಲೀಸರ ಮೊರೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 15:49 IST
Last Updated 3 ನವೆಂಬರ್ 2018, 15:49 IST
ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ದೀಪಾಂಶು ಅವರನ್ನು ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಯುವಕರು ಹೊತ್ತುಕೊಂಡು ಕೆಳಗೆ ತಂದರು.
ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ದೀಪಾಂಶು ಅವರನ್ನು ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಯುವಕರು ಹೊತ್ತುಕೊಂಡು ಕೆಳಗೆ ತಂದರು.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಬ್ರಹ್ಮಗಿರಿ ಬೆಟ್ಟದಲ್ಲಿ ಚಾರಣಕ್ಕೆ ಬಂದು ಶನಿವಾರ ದಾರಿ ತಪ್ಪಿಸಿಕೊಂಡು ತೊಂದರೆ ಸಿಲುಕಿದ್ದ ಬೆಂಗಳೂರಿನ ಮೂವರುವಿದ್ಯಾರ್ಥಿಗಳನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ದಯಾನಂದ ಸಾಗರ್ ಕಾಲೇಜಿನಲ್ಲಿ 3ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ದೀಪಕ್, ದೀಪಾಂಶು, ಪರಾಕ್ ಕುಮಾರ್ ಅವರು ತೊಂದರೆ ಸಿಲುಕಿದ್ದ ವಿದ್ಯಾರ್ಥಿಗಳು.

ನಂದಿಬೆಟ್ಟದ ಸಮೀಪದಲ್ಲಿಯೇ ಇರುವ ಬ್ರಹ್ಮಗಿರಿ ಬೆಟ್ಟವನ್ನು ಈ ವಿದ್ಯಾರ್ಥಿಗಳು ರಾತ್ರಿ ವೇಳೆ ಕಾರಹಳ್ಳಿ ಕ್ರಾಸ್ ಕಡೆಯಿಂದ ಏರಿದ್ದರು. ಅರ್ಧ ಬೆಟ್ಟ ಏರುತ್ತಿದ್ದಂತೆ ದಟ್ಟವಾಗಿ ಕವಿದ ಮಂಜಿನಲ್ಲಿ ದಾರಿ ತಪ್ಪಿಸಿಕೊಂಡು ಅಲೆದಾಡಿ ಹೈರಾಣಾದ ವಿದ್ಯಾರ್ಥಿಗಳು ಅಪಾಯದ ಸೂಚನೆ ಅರಿತು ಪೊಲೀಸರಿಗೆ ಕರೆ ಮಾಡಿ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು.

ADVERTISEMENT

ನಂದಿಗಿರಿಧಾಮ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮೊಬೈಲ್ ಸಂಕೇತಗಳ ಮೂಲಕ ಬೆಟ್ಟದಲ್ಲಿ ವಿದ್ಯಾರ್ಥಿಗಳಿದ್ದ ಸ್ಥಳ ಪತ್ತೆ ಮಾಡಿ, ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿ, ಬೆಳಿಗ್ಗೆ 9ರ ಸುಮಾರಿಗೆ ಮೂರೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಟ್ಟದಿಂದ ಕೆಳಗೆ ಕರೆದುಕೊಂಡು ಬಂದರು.

ಮೂರು ವಿದ್ಯಾರ್ಥಿಗಳ ಪೈಕಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ದೀಪಾಂಶು ಅವರನ್ನು ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯ ಯುವಕರು ಹೊತ್ತುಕೊಂಡು ಕೆಳಗೆ ತಂದರು. ಅನುಮತಿ ಇಲ್ಲದೆ ಚಾರಣ ನಡೆಸಿದ ವಿದ್ಯಾರ್ಥಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.