ADVERTISEMENT

ಭ್ರಷ್ಟರಿಗೆ ಶಿಕ್ಷೆ ಖಚಿತ :ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 5:20 IST
Last Updated 14 ಜುಲೈ 2012, 5:20 IST

ಗೌರಿಬಿದನೂರು: ಲೋಕಾಯುಕ್ತ ಸಂಸ್ಥೆ ಬಲಯುತವಾಗಿದ್ದು, ತಪ್ಪು ಮಾಡಿದವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಶಿಕ್ಷೆ ತಪ್ಪುವುದಿಲ್ಲ ಎಂದು ಲೋಕಾಯುಕ್ತ ಡಿವೈಎಸ್ಪಿ ಬೂದಿಹಾಳ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಕುಂದುಕೊರೆತೆ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಂದ ದೂರುಗಳು ಬಂದಾಗ ಸಂಬಂಧಪಟ್ಟ ಅಧಿಕಾರಿಗಳು ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಸಲಹೆ ಸೂಚನೆಗಳನ್ನು ನೀಡಿ, ವಿಳಂಬ ಮಾಡದೆ ಕೆಲಸ ಮಾಡಿಕೊಡಬೇಕು ಎಂದು ಕಿವಿ ಮಾತು ಹೇಳಿದರು.

ಸಾರ್ವಜನಿಕರಿಗಾಗಿ ನಾವು ಎಂಬುವುದನ್ನು ಅರಿತುಕೊಳ್ಳಬೇಕು. ವಿನಾ ಕಾರಣ ಯಾರನ್ನೂ ಅಲೆದಾಡಿಸದೆ ಕಾನೂನಿನ ಅಡಿಯಲ್ಲಿ ಕೆಲಸಗಳನ್ನು ಸುಗಮವಾಗಿ ಮಾಡಿಕೊಡಬೇಕು ಎಂದು ಕರೆ ನೀಡಿದರು.

ಸರ್ಕಾರ `ಸಕಾಲ~ ಯೋಜನೆ ಜಾರಿಗೆ ತಂದಿರುವುದರಿಂದ ಅಧಿಕಾರಿಗಳು ನಿರ್ದಿಷ್ಟ ಸಮಯದಲ್ಲಿ ಕೆಲಸ ಮಾಡಿಕೊಡಬೇಕಾಗುತ್ತದೆ ಎಂದು ಒತ್ತಡ ಹೇರುವ ರಾಜಕಾರಿಣಿಗಳಿಗೆ ಸ್ಪಷ್ಟಪಡಿಸಬೇಕು. ರಾಜಕೀಯ ಒತ್ತಡಕ್ಕೆ, ಆಸೆ ಆಮಿಶಗಳಿಗೆ ಒಳಗಾಗದೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಂದಾಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಇಲಾಖೆಗಳಲ್ಲಿ ನಿಗದಿತ ಸಮಯಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿದೆ. ಅನೇಕ ಅರ್ಜಿಗಳು ವರ್ಷಗಟ್ಟಲೆ ಬಾಕಿ ಇರುವ ಕುರಿತು ಸಾರ್ವಜನಿಕರು ದೂರುತ್ತಾರೆ ಎಂದು ನುಡಿದರು.

ತಾಲ್ಲೂಕಿನ ಇಡಗೂರು ಗ್ರಾಮ ಪಂಚಾಯಿತಿಯಲ್ಲಿ 20 ವರ್ಷಗಳಿಂದ ನೀರು ಸರಬರಾಜು ಮಾಡುತ್ತಿದ್ದ ಅಂಜಿನಪ್ಪ ಎಂಬುವವರು ತಮ್ಮನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಿನಾ ಕಾರಣ ಕೆಲಸದಿಂದ ತೆಗೆದಿದ್ದಾರೆ ಎಂದು ದೂರು ಸಲ್ಲಿಸಿರು. ಅರ್ಜಿ ಪರಿಶೀಲಿಸಿ ವಾರದೊಳಗೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಪಟ್ಟಣದ ಅಭಿಲಾಷ್ ಬಡಾವಣೆಯಲ್ಲಿ ಪುರಸಭೆ ಉದ್ಯಾನವನ ನಿರ್ಮಿಸಿದೆ. ಆದರೆ ಅದು ನಿರ್ವಹಣೆಯಿಲ್ಲದೆ  ಹಾಳಾಗಿದೆ. ಈ ಕುರಿತು ಪುರಸಭೆಯಲ್ಲಿ ಪ್ರಶ್ನಿಸಿದರೆ ಹಮಾಲಿಗಳಿಗೆ ಸಂಬಳ ನೀಡಲು ಹಣವಿಲ್ಲ ಎಂಬ ಹಾರಿಕೆ ಉತ್ತರ ಸಿಗುತ್ತಿದೆ ಎಂದು ಹರೀಶ ಎನ್ನುವವರು ದೂರು ಸಲ್ಲಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಅರ್ಜಿ ವಿಲೇವಾರಿ ವಿಳಂಬಕ್ಕೆ ಕಾರಣಗಳನ್ನು ವಿವರಿಸಿದರು.

ಬರಡು: ಎಚ್ಚರಿಕೆ
ಮುಳಬಾಗಲು
:  ಕೆರೆ- ಕಲ್ಯಾಣಿಗಳನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿದು, ಕೋಲಾರ ಜಿಲ್ಲೆ ನೀರಿಲ್ಲದೆ ಬರಡಾಗುವ ಅಪಾಯವಿದೆ ಎಂದು ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.