ADVERTISEMENT

ಮಂಡಿಕಲ್ಲು ಬಾಯ್ತೆರೆದ ಬಂಡೆಗಲ್ಲು!

ರಾಹುಲ ಬೆಳಗಲಿ
Published 14 ಏಪ್ರಿಲ್ 2013, 10:47 IST
Last Updated 14 ಏಪ್ರಿಲ್ 2013, 10:47 IST

ಬಂಡೆಗಲ್ಲುಗಳ ಬಣ್ಣ ಮತ್ತು ಅವುಗಳ ಆಕಾರದ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಪರ್ವತಾರೋಹಿಗಳು ಮತ್ತು ಸಂಶೋಧಕರು ಒಮ್ಮೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಸಮೀಪದ ರಾಮದೇವರ ಕಾಡು ಆವರಣದಲ್ಲಿರುವ ಬೆಟ್ಟಕ್ಕೆ ಒಮ್ಮೆ ನೀಡಬೇಕು. ಜಿಲ್ಲೆಯಲ್ಲಿ ಬೇರೆಲ್ಲೂ ಕಾಣಸಿಗದ ಬಂಡೆಗಲ್ಲು ಅಲ್ಲಿ ಕಾಣಸಿಗುತ್ತದೆ. ಬೆಟ್ಟದಲ್ಲಿನ ಬಂಡೆಗಲ್ಲುಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದರೆ, ಒಂದೊಂದೆ ಬಂಡೆಗಲ್ಲು ಬಾಯ್ತೆರೆದು ಕೂತಂತೆ ಭಾಸವಾಗುತ್ತದೆ. ಬೊಚ್ಚು ಬಾಯಿ ಅಜ್ಜ ಮುದ್ದೆ ತಿನ್ನುವಂತೆ ಕಾಣುತ್ತದೆ!

ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಬಿಳಿ ಬಣ್ಣದ ಬೃಹದಾಕಾರದ ಬಂಡೆಗಲ್ಲುಗಳಿದ್ದರೆ, ಈ ಬೆಟ್ಟದಲ್ಲಿ ಮಾತ್ರ ಕಪ್ಪು ಬಣ್ಣದ ಬೃಹತ್ ಸ್ವರೂಪದ ಬಂಡೆಗಲ್ಲುಗಳೇ ಹೆಚ್ಚು ಗಮನ ಸೆಳೆಯುತ್ತವೆ. ಬೇರೆ ಬೆಟ್ಟಗುಡ್ಡಗಳಲ್ಲಿ ಬಂಡೆಗಲ್ಲುಗಳ ಮೇಲೆ ಪಾಚಿ ಹುಲ್ಲು ಬೆಳೆದಿರುವುದು ಅಥವಾ ಬಂಡೆಗಲ್ಲು ಹಸಿರು ಬಣ್ಣಕ್ಕೆ ತಿರುಗಿರುವುದನ್ನು ನೋಡಬಹುದು. ಆದರೆ ಇಲ್ಲಿನ ಬಂಡೆಗಲ್ಲಿನ ಬಣ್ಣ ಅಪ್ಪಟ ಕಪ್ಪು. ಯಾವುದೇ ರೀತಿಯ ಹಸಿರು ಪಾಚಿ ಮತ್ತು ಹುಲ್ಲು ಆವರಿಸಿಕೊಂಡಿಲ್ಲ. ಸ್ವಚ್ಛವಾಗಿರುವ ಬಂಡೆಗಲ್ಲು ಮೇಲೆ ನಡೆಯುವುದೇ ಒಂದು ಸೊಗಸು.

`ಆರಂಭದಲ್ಲಿ ಬೆಟ್ಟವನ್ನೇರಲು ಅಂತಹ ಕಷ್ಟವೇನೂ ಆಗೋದಿಲ್ಲ. ಆದರೆ ಎತ್ತರಕ್ಕೆ ಏರುತ್ತಿದ್ದಂತೆ ಕೊಂಚ ಆಯಾಸವಾಗದೆ ಇರುವುದಿಲ್ಲ. ಹತ್ತುವಾಗ ಮತ್ತು ಇಳಿಯುವಾಗ ಸ್ವಲ್ಪವಾದರೂ ಜಾಗರೂಕತೆ ವಹಿಸಲೇಬೇಕು. ಕಾಲು ಅತ್ತ-ಇತ್ತ ಜಾರಿದರೂ ನೇರವಾಗಿ ಬೆಟ್ಟದ ಕೆಳಗೆ ಹೋಗುತ್ತೇವೆ. ಬೆಟ್ಟದ ತುದಿಯಿಂದ ಉರುಳಿಬಿದ್ದರೆ, ಹಿಡಿದುಕೊಳ್ಳಲು ಏನೂ ಸಿಗುವುದಿಲ್ಲ. ಬಂಡೆಗಲ್ಲುಗಳ ಮಧ್ಯೆ ಅಲ್ಲಲ್ಲಿ ಬೆಳೆದಿರುವ ಒಣ ಹುಲ್ಲು ಬೆಟ್ಟದ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ' ಎಂದು ಪರ್ವತಾರೋಹಿ ಸುಮಂತ್ `ಪ್ರಜಾವಾಣಿ'ಗೆ ತಿಳಿಸಿದರು.

`ಇಲ್ಲಿನ ಬಂಡೆಗಲ್ಲುಗಳು ಯಾಕೆ ಕಪ್ಪಿವೆ ಎಂಬುದು ಇದುವರೆಗೆ ಗೊತ್ತಾಗಿಲ್ಲ. ನಮ್ಮ ಜಿಲ್ಲೆಯಲ್ಲಿ ಬಗೆ ಬಗೆ ಆಕಾರದ ಬಂಡೆಗಲ್ಲುಗಳು ಇವೆಯಾದರೂ ಕಪ್ಪು ಬಣ್ಣದಿಂದ ಕೂಡಿರುವುದು ಕಡಿಮೆ. ಕೆಲವೊಂದು ಬಂಡೆಗಲ್ಲು ಬಾಯ್ತೆರೆದಂತೆ ಕಂಡು ಬಂದರೆ, ಕೆಲವೊಂದು ಪದರುಪದರುಗಳಲ್ಲಿ ಮಡಚಿದಂತೆಯೂ ತೋರುತ್ತವೆ. ಟಿವಿ ಮತ್ತು ಸಿನಿಮಾಗಳಲ್ಲಿ ದೇಶ-ವಿದೇಶದ ಕಪ್ಪು ಬೆಟ್ಟಗಳನ್ನು ನೋಡಿದ್ದೇವೆ. ಆದರೆ ಇಲ್ಲಿನ ಕಪ್ಪು ಬಣ್ಣದ ಬೆಟ್ಟವನ್ನು ನೋಡಿ ತುಂಬ ಖುಷಿಯಾಯ್ತು. ಈ ಬೆಟ್ಟವು ಹೆಚ್ಚು ಪ್ರಚಾರಕ್ಕೆ ಬಂದಲ್ಲಿ, ಇದನ್ನು ನೋಡಲು ರಾಜ್ಯ ಮತ್ತು ಹೊರರಾಜ್ಯದಿಂದಲೂ ಪರ್ವತಾರೋಹಿಗಳು ಮತ್ತು ಪ್ರವಾಸಿಗರು ಬರುತ್ತಾರೆ' ಎಂದು ಅವರು ತಿಳಿಸಿದರು.

`ಈ ಬೆಟ್ಟದಲ್ಲಿ ಸಣ್ಣಪುಟ್ಟ ಗುಹೆಗಳು ಕೂಡ ಇವೆ. ಅವುಗಳೊಳಗೆ ಪ್ರವೇಶಿಸಲು ಸ್ವಲ್ಪ ಭಯ. ಆದರೆ ಧೈರ್ಯದಿಂದ ಒಮ್ಮೆ ಒಳಗೆ ಹೋಗಿ ನೋಡಿದ್ದಲ್ಲಿ, ವಿಶೇಷವಾದ ಅಂಶಗಳು ಬೆಳಕಿಗೆ ಬರಬಹುದು. ಅಂತಹ ಗುಹೆಗಳಲ್ಲಿ ಬಾವಲಿಗಳು, ನರಿ, ಮೊಲ ಮುಂತಾದವು ಇರುತ್ತವೆಯಂತೆ. ಆದರೆ ಇದುವರೆಗೆ ಅದರೊಳಗೆ ಹೋಗುವ ಧೈರ್ಯ ಮಾಡಿಲ್ಲ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.