ADVERTISEMENT

ಮಧ್ಯಸ್ಥಿಕೆಗೆ ಮೊದಲ ಆದ್ಯತೆ ನೀಡಿ

ಮೂರು ದಿನಗಳ ಮಧ್ಯಸ್ಥಿಕೆಗಾರರ ಪುನರ್ ಮನನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 7:55 IST
Last Updated 3 ಜೂನ್ 2017, 7:55 IST
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಆರಂಭಗೊಂಡ 3 ದಿನಗಳ ಮಧ್ಯಸ್ಥಿಕೆಗಾರರ ಪುನರ್ ಮನನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಆರಂಭಗೊಂಡ 3 ದಿನಗಳ ಮಧ್ಯಸ್ಥಿಕೆಗಾರರ ಪುನರ್ ಮನನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ಮಾತನಾಡಿದರು   

ಚಿಕ್ಕಬಳ್ಳಾಪುರ: ‘ಮಧ್ಯಸ್ಥಿಕೆ ಮೂಲಕ ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ವಕೀಲರು ಆದ್ಯತೆ ನೀಡಬೇಕು. ಸಣ್ಣಪುಟ್ಟ ಪ್ರಕರಣಗಳು ನ್ಯಾಯಾಲಯದ ಅಂಗಳಕ್ಕೆ ಬರುವ ಮುನ್ನವೇ ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿಸುವ ಪ್ರಯತ್ನ ಮಾಡಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಧ್ಯಸ್ಥಿಕೆ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿರುವ 3 ದಿನಗಳ ಮಧ್ಯಸ್ಥಿಕೆಗಾರರ ಪುನರ್ ಮನನ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

‘ಕಾನೂನಿನ ನಿರ್ಬಂಧವಿಲ್ಲದೆ ನ್ಯಾಯ ಸಮ್ಮತವಾಗಿ ಕಕ್ಷಿದಾರರ ವ್ಯಾಜ್ಯ ಪರಿಹರಿಸುವಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ಪರಿಣಾಮಕಾರಿಯಾಗಿದೆ. ಇದರಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಈ ವಿಚಾರದಲ್ಲಿ ವಕೀಲರು ತ್ಯಾಗ ಮನೋಭಾವ ಮೆರೆಯಬೇಕು’ ಎಂದು ತಿಳಿಸಿದರು.

ADVERTISEMENT

‘ಪಂಚಾಯಿತಿ ಕಟ್ಟೆಯ ನ್ಯಾಯದಾನಕ್ಕಿಂತ ಭಿನ್ನವಾದ, ವೈಜ್ಞಾನಿಕ ಚಿಂತನೆಗಳ ಆಧರಿಸಿದ ಮಧ್ಯಸ್ಥಿಕೆ ಕೇಂದ್ರದಲ್ಲಿ ಕಾಲಮಿತಿಯೊಳಗೆ ಉಭಯ ಕಕ್ಷಿದಾರರಿಗೆ ನ್ಯಾಯ ಸಿಗಲಿದೆ. ಆದ್ದರಿಂದ ಈ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ವಕೀಲರ ಮೇಲೆ ದೊಡ್ಡ ಜವಾಬ್ದಾರಿ ಇದೆ’ ಎಂದರು.

ಮಧ್ಯಸ್ಥಿಕೆ ಕೇಂದ್ರದ ತರಬೇತಿಗಾರರಾದ ಶೋಭಾ ಪಾಟೀಲ್ ಮಾತನಾಡಿ, ‘ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕವೂ ಕಕ್ಷಿದಾರರಲ್ಲಿ ನ್ಯಾಯದ ಬಗ್ಗೆ ಮೂಡುವ ಅಸಮಾಧಾನದಿಂದ ಸಿವಿಲ್ ವ್ಯಾಜ್ಯಗಳು ಕ್ರಿಮಿನಲ್ ವ್ಯಾಜ್ಯಗಳಾಗಿ ಪರಿವರ್ತನೆ ಹೊಂದಿರುವ ನಿದರ್ಶನಗಳಿವೆ. ಇಂತಹ ಸೇಡಿನ ಮನೋಭಾವ ದೂರ ಮಾಡಲು ಮಧ್ಯಸ್ಥಿಕೆ ಪ್ರಕ್ರಿಯೆಯು ತುಂಬಾ ಸಹಕಾರಿಯಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಎಲ್ಲ ತಾಲ್ಲೂಕು ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆ ಕೇಂದ್ರಗಳಿವೆ. ನಾಗರಿಕರು ಆ ಕೇಂದ್ರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ರಾಜಿಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಮುಂದಾಗಬೇಕು. ಇದರಿಂದ ಹಣ ಮತ್ತು ಸಮಯ ವ್ಯಯವಾಗುವುದು ತಪ್ಪುತ್ತದೆ’ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ, ‘ನ್ಯಾಯಾಲಯಗಳ ಮೇಲಿನ ಒತ್ತಡ ಮತ್ತು ಕಕ್ಷಿದಾರರ ಹಣ ಮತ್ತು ಸಮಯ ಉಳಿಸಲು ಸರ್ಕಾರ ಮಧ್ಯಸ್ಥಿಕೆ ಕೇಂದ್ರಗಳನ್ನು ತೆರೆದಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿ ಜಾರಿಗೊಳಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್. ಶೋಭಾ, ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜ್, ಮಧ್ಯಸ್ಥಿಕೆ ಕೇಂದ್ರದ ತರಬೇತಿಗಾರರಾದ ಎಸ್.ಆರ್. ಅನುರಾಧಾ, ವೈಶಾಲಿ ಹೆಗಡೆ, ವಕೀಲರ ಸಂಘದ ಉಪಾಧ್ಯಕ್ಷ ಪಾಪಿರೆಡ್ಡಿ, ಕಾರ್ಯದರ್ಶಿ ಶ್ರೀನಿವಾಸ್, ಮಟಮಪ್ಪ ಇದ್ದರು.

**

ಮಧ್ಯಸ್ಥಿಕೆಯಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಿದೆ. ಮಧ್ಯಸ್ಥಿಕೆ ಕೇಂದ್ರಗಳ ಕುರಿತು ವಕೀಲರು ಸಮಾಜದಲ್ಲಿ ಅರಿವು ಮೂಡಿಸಲು ಮುಂದಾಗಬೇಕಿದೆ.
-ಶೋಭಾ ಪಾಟೀಲ್
ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.