ADVERTISEMENT

ಮಳೆಗಾಲ ಸ್ವಾಗತಕ್ಕೆ ಬಂದಿದೆ ಸಿಕಾಡ

ಕೀಟದ ಧ್ವನಿ ಜಾಡು ಹಿಡಿಯುವುದು ಬಲು ಕಷ್ಟ

​ಪ್ರಜಾವಾಣಿ ವಾರ್ತೆ
Published 14 ಮೇ 2018, 11:29 IST
Last Updated 14 ಮೇ 2018, 11:29 IST
ತಾದೂರು ಗ್ರಾಮದ ಬೇವಿನ ಮರದ ತೊಗಟೆ ಮೇಲೆ ಕಂಡು ಬಂದ ಸಿಕಾಡ ಕೀಟ
ತಾದೂರು ಗ್ರಾಮದ ಬೇವಿನ ಮರದ ತೊಗಟೆ ಮೇಲೆ ಕಂಡು ಬಂದ ಸಿಕಾಡ ಕೀಟ   

ಶಿಡ್ಲಘಟ್ಟ: ಮಳೆಗಾಲದ ಪ್ರಾರಂಭಕ್ಕೆ ಮುನ್ನ ಪ್ರಾರಂಭವಾಗಿ ಮಳೆಗಾಲ ಮುಗಿಯುವ ಹೊತ್ತಿಗೆ ಮುಗಿದು ಹೋಗುವ ಜೀವನ ಚಕ್ರವೊಂದು ನಮ್ಮ ಸುತ್ತಮುತ್ತಲಿನಲ್ಲಿಯೇ ನಡೆಯುತ್ತಿ ರುತ್ತದೆ. ಕೇವಲ ತನ್ನ ಶಬ್ದದಿಂದ ಎಲ್ಲರಿಗೂ ಪರಿಚಿತವಾದ ಈ ಕೀಟ ತಾಲ್ಲೂಕಿನ ವಿವಿಧ ಮಾವು, ಬೇವು, ಜಾಲಿ ತೋಪುಗಳಲ್ಲಿ ಹಾಗೂ ಕಾಡು ಪ್ರದೇಶಗಳಲ್ಲಿ ಕಂಡುಬರುತ್ತವೆ.

ತಾಲ್ಲೂಕಿನ ತಾದೂರು ಗ್ರಾಮದ ಬೇವಿನ ಮರದ ತೊಗಟೆಯ ಮೇಲೆ ಕಂಡು ಬಂದ ಈ ಕೀಟ ತೊಗಟೆಯ ಬಣ್ಣವನ್ನೇ ಹೊಂದಿದ್ದು ಗುರುತು ಹಿಡಿಯುವುದು ಬಹಳ ಕಷ್ಟ. ಗೌಡನ ಕೆರೆ ಯಲ್ಲಿನ ಜಾಲಿ ಮರಗಳ ತೊಗಟೆ ಮೇಲೂ ಕಂಡು ಬರುವ ಕೀಟದ ಧ್ವನಿ ಹಿಡಿದು ಹುಡುಕುವುದು ಸುಲಭವಲ್ಲ.

‘ಸಿಕಾಡ ಎಂದು ಕರೆಯುವ ಈ ಕೀಟಗಳದ್ದು ವಿಸ್ಮಯಕರವಾದ ಜೀವನ ಚಕ್ರ. ಹೆಚ್ಚಾಗಿ ಗಿಡ ಮರ ಗಳಲ್ಲೇ ವಾಸಿಸುವ ಇವುಗಳು ಸಸ್ಯ ರಸವನ್ನು ಹೀರುತ್ತವೆ. ಗಂಡು ಕೀಟವು ತನ್ನ ಹಿಂಭಾಗದಲ್ಲಿರುವ ‘ಟಿಂಬಲ್ಸ್’ ಎಂಬ ಅಂಗದಿಂದ ವಿಶಿಷ್ಟ ವಾದ ಶಬ್ದ ಹೊರಡಿಸುತ್ತದೆ. ಈ ಅಂಗವು ನಮ್ಮ ತಬಲಾ, ಮೃದಂಗ ಮೊದಲಾದ ಚರ್ಮವಾದ್ಯಗಳಂತೆ ಕೆಲಸ ಮಾಡುತ್ತದೆ. ಆದರೆ ಕೇಳಲು ಇದು ಹಕ್ಕಿಗಳ ಹಾಡಿನಂತಿರುತ್ತದೆ. ಸಂಗಾತಿಯನ್ನು ಆಕರ್ಷಿಸುವುದು ಈ ಕೂಗಿನ ಮುಖ್ಯ ಉದ್ದೇಶ. ಹೆಣ್ಣು ಕೀಟವು ಮರಗಳ ತೊಗಟೆಯ ಬಿರುಕಿನಲ್ಲಿ ಮೊಟ್ಟೆಗಳನ್ನಿಡುತ್ತದೆ. ಸಂತಾನೋತ್ಪತ್ತಿ ಕೆಲಸವಾದೊಡನೆ ಈ ಕೀಟಗಳು ಸಾಯುತ್ತವೆ’

ADVERTISEMENT

‘ಮೊಟ್ಟೆಯು ಒಡೆದು ಹೊರಬರುವ ಮರಿಗೆ ರೆಕ್ಕೆಗಳಿರುವುದಿಲ್ಲ. ಅದು ಮರವನ್ನಿಳಿದು ನಿಧಾನವಾಗಿ ಮಣ್ಣಿನಲ್ಲಿ ರುವ ಮರದ ಬೇರನ್ನು ತಲುಪುತ್ತವೆ. ಅಲ್ಲಿ ಬೇರಿನ ರಸವನ್ನು ಕುಡಿಯುತ್ತಾ ನಿಧಾನವಾಗಿ ಬೆಳೆಯುತ್ತವೆ. ಸುಮಾರು ಎರಡು - ಮೂರು ವರ್ಷಗಳ ಕಾಲ ಅಲ್ಲೇ ಉಳಿಯುತ್ತವೆ. ಉತ್ತರ ಅಮೆರಿಕದ ಕೆಲ ಸಿಕಾಡಗಳು ಹದಿಮೂರು - ಹದಿನೇಳು ವರ್ಷಗಳಷ್ಟು ದೀರ್ಘಾವಧಿಯವರೆಗೆ ಮರಿಗಳಾಗಿ ನೆಲದೊಳಗೇ ಇರುತ್ತವೆ’

‘ಭೂಗತವಾಗಿ ಇರುವಷ್ಟು ವರ್ಷಗಳು ಕೀಟಗಳ ಬಾಲ್ಯಾವಸ್ಥೆ ಎನ್ನಬಹುದು. ಒಮ್ಮೆ ನೆಲದಿಂದ ಮೇಲೆ ಬಂದಿತೆಂದರೆ ಅದು ಯೌವನಾವಸ್ಥೆಗೆ ಬಂದಿತೆಂದೇ ಅರ್ಥ. ಮೇಲೆ ಬಂದ ಕೀಟಕ್ಕೆ ರೆಕ್ಕೆಗಳು ಇರುವುದಿಲ್ಲ. ನೆಲದಿಂದ ಮೇಲೆ ಬರುವ ಮರಿ ಸಿಕಾಡ, ಮರದ ತೊಗಟೆಯ ಮೇಲೆ ಕುಳಿತು ಹಳೆಯ ಚರ್ಮವನ್ನು ಅಥವಾ ಪೊರೆಯನ್ನು ಕಳಚುವುದರ ಮೂಲಕ ತನ್ನ ಜೀವನದ ಇನ್ನೊಂದು ಚಕ್ರವನ್ನು ಪೂರೈಸಿ, ಹೊಸ ಜೀವನಕ್ಕೆ ಕಾಲಿಡುತ್ತದೆ. ಇದು ಈಗ ರೆಕ್ಕೆ ಮೂಡುವ ಹೊತ್ತು, ಸಿಕಾಡದ ಯೌವಾನವಸ್ಥೆ 3 ರಿಂದ 4 ತಿಂಗಳು ಮಾತ್ರ. ಈ ಹೊತ್ತಿನಲ್ಲಿ ಹೆಣ್ಣು ಕೀಟದೊಡನೆ ಮಿಲನವಾಗಿ ತನ್ನ ಜೀವನ ಚಕ್ರವನ್ನು ಪೂರೈಸುತ್ತದೆ’ ಎಂದು ಉಪನ್ಯಾಸಕ ಅಜಿತ್‌ ವಿವರಿಸಿದರು.

‘ನಾವೆಲ್ಲಾ ಚಿಕ್ಕಂದಿನಿಂದಲೂ ಈ ಕೀಟ ನೋಡಿದ್ದೇವೆ ಹಾಗೂ ಇದರ ಶಬ್ದ ಕೇಳಿದ್ದೇವೆ. ಆದರೆ ಇದರ ಜೀವನ ಚಕ್ರದ ಬಗ್ಗೆ ಮಾಹಿತಿ ಗೊತ್ತಿರಲಿಲ್ಲ. ಮರಕ್ಕೆ ಅಂಟಿಕೊಂಡ ಬೆನ್ನು ಭಾಗದಲ್ಲಿ ಸೀಳಾದ ಸಿಕಾಡದ ದೇಹವನ್ನು ಕಾಣಬಹುದು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಜನರು, ಸಿಕಾಡವು ಕೂಗಿ-ಕೂಗಿ ಹೊಟ್ಟೆಯೊಡೆದು ಸತ್ತು ಹೋಗಿದೆ ಎಂದು ಹೇಳುತ್ತಿರುತ್ತಾರೆ. ಹಳ್ಳಿಗರಿಗೆ ಮಳೆಗಾಲದ ಮುನ್ಸೂಚನೆ ಸಿಗುವುದು ಇದರ ಕೂಗಿನಿಂದ. ಇದರ ಕೂಗು ರೈತರಿಗೆ ಒಂದು ಆಶಾಭಾವನೆಯನ್ನು ಮೂಡಿಸುತ್ತದೆ. ಮಳೆಗಾಲದಲ್ಲಿ ನಮ್ಮಲ್ಲಿ ಬರುವ ಎಲ್ಲಾ ಅತಿಥಿಗಳಂತೆ ಸಿಕಾಡವೂ ಮೆಚ್ಚುಗೆಯ ಮಳೆಗಾಲದ ಅತಿಥಿ ಆಗಿದೆ’ ಎಂದು ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌ ತಿಳಿಸಿದರು.
-ಡಿ.ಜಿ.ಮಲ್ಲಿಕಾರ್ಜುನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.