ADVERTISEMENT

ಮಹಿಳೆಯರಿಗೆ ಸಾಂತ್ವನ ಕೇಂದ್ರಗಳು ವರದಾನವಾಗಿವೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:11 IST
Last Updated 19 ಡಿಸೆಂಬರ್ 2012, 11:11 IST

ಚಿಂತಾಮಣಿ: ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯು ತಲೆ ತಲಾಂತರಗಳಿಂದ ಅನುಭವಿಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ರಾಜ್ಯಾದ್ಯಂತ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ನಗರದ ಸೌಂದರ್ಯ ಗ್ರಾಮೀಣ ಹಾಗೂ ಪಟ್ಟಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಡಾ.ಎಂ.ವಿಜಯಾ ತಿಳಿಸಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಿಡಿಪಿಒ ಕಚೇರಿ ಹಾಗೂ ಸೌಂದರ್ಯ ಗ್ರಾಮೀಣ ಹಾಗೂ ಪಟ್ಟಣಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಉಪ್ಪರಪೇಟೆ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಮಹಿಳೆ ಮತ್ತು ಮಕ್ಕಳ ಸಂರಕ್ಷಣೆಯ ಬಗ್ಗೆ ಕಾನೂನು ಅರಿವು- ನೆರವು ಕಾರ್ಯಾಗಾರದಲ್ಲಿ ಮಾತನಾಡಿದರು.

ಸಾಂತ್ವನ ಕೇಂದ್ರಗಳು ಮಹಿಳೆಯರಿಗೆ ವರದಾನವಾಗಿದ್ದು, ಕೌಟುಂಬಿಕ ಕಲಹಗಳನ್ನು ಪರಸ್ಪರ ಚರ್ಚೆಗಳ ಮೂಲಕ ಪರಿಹಾರ ಮಾಡಲಾಗಿದೆ. ಮಹಿಳೆಯರು ಸಾಂತ್ವನ ಕೇಂದ್ರಗಳ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶ ಬಿ.ಸಿ.ಚಂದ್ರಶೇಖರ್ ಮಾತನಾಡಿ, ಕಾನೂನಿನ ಅರಿವು ಪಡೆದ ಕುಟುಂಬದಲ್ಲಿ ಸದಾ ಕಾಲ ಸಾಮರಸ್ಯ ಪ್ರೀತಿ, ವಿಶ್ವಾಸಗಳು ಮೂಡಿ ಕೌಟುಂಬಿಕ ಕಲಹಗಳು ದೂರವಾಗುತ್ತವೆ ಎಂದರು.

ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಾಜ್ ಉನ್ನೀಸಾ ಮಾತನಾಡಿ, ಅಲ್ಪಸಂಖ್ಯಾತ ಸಮಾಜದಲ್ಲಿ ಹದಿಹರೆಯದವರಿಗೆ ಮದುವೆ ಮಾಡುವುದರಿಂದ ಹಲವಾರು ಸಾಮಾಜಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಸಿಲುಕಬೇಕಾಗುತ್ತದೆ. ಮಹಿಳೆಯರು ಕಾನೂನಿನ ಅರಿವು ಪಡೆದು ಮಕ್ಕಳಿಗೆ ಪೂರ್ಣ ಪ್ರಮಾಣದ ಬೌದ್ಧಿಕ ಬೆಳವಣಿಗೆ ನಂತರ ವಿವಾಹವನ್ನು ಮಾಡಬೇಕು ಎಂದು ಮನವಿ ಮಾಡಿದರು.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಮಂಜುನಾಥರೆಡ್ಡಿ, ಬಾಲ್ಯ ವಿವಾಹ ತಡೆ ಕಾಯ್ದೆ ಕುರಿತು ಎನ್.ಎಸ್.ರೂಪಶ್ರಿ ಉಪನ್ಯಾಸ ನೀಡಿದರು. ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಮುದಿಗೌಡರ್ ಉದ್ಘಾಟಿಸಿದರು.

ಗ್ರಾ.ಪಂ. ಅಧ್ಯಕ್ಷ ಬಚ್ಚರೆಡ್ಡಿ, ಅಭಿವೃದ್ಧಿ ಅಧಿಕಾರಿ ಶಿವಣ್ಣ, ಸದಸ್ಯರಾದ ಬಾಬು, ಚಾಂಡ್ರಹಳ್ಳಿ ರವಿ, ನಾಗರಾಜ್, ಜಹೀರ್, ಮಾಜಿ ಅಧ್ಯಕ್ಷ ಏಜಾಜ್, ಸದಸ್ಯ ರಾಯಪ್ಪಲ್ಲಿ ವೆಂಕಟರೆಡ್ಡಿ, ವಕೀಲರಾದ ಈಶ್ವರ್‌ಗೌಡ, ವಿ.ವಿ.ರಾಜಣ್ಣ, ಎಸ್.ಶಿವಕುಮಾರ್, ಅಮರ್, ಎನ್.ಕೆ.ಪ್ರಸಾದ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.