ADVERTISEMENT

ಮಹಿಳೆಯರ ಹಕ್ಕಿಗಾಗಿ ಹೋರಾಟ ಅಗತ್ಯ

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಿ.ಎನ್‌.ಮುನಿಕೃಷ್ಣಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 7:16 IST
Last Updated 20 ಮಾರ್ಚ್ 2018, 7:16 IST

ಚಿಕ್ಕಬಳ್ಳಾಪುರ: ಪುರುಷರು ಮತ್ತು ಮಹಿಳೆಯರು ಒಂದೇ ನಾಣ್ಯದ ಎರಡು ಮುಖಗಳು. ಮಹಿಳೆಯರು ನ್ಯಾಯಕ್ಕಾಗಿ ಮತ್ತು ತಮ್ಮ ಹಕ್ಕು ಪಡೆಯಲು ಹೋರಾಟ ರೂಪಿಸುವುದು ಅಗತ್ಯ ಎಂದು ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ತಿಳಿಸಿದರು.

ತಾಲ್ಲೂಕಿನ ಅವಲಗುರ್ಕಿ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆ ಎಂದರೆ ಭೋಗದ ವಸ್ತು, ಮನೆಯ ಕೆಲಸದಾಳು, ಗಂಡ ಮತ್ತು ಮಕ್ಕಳಿಗಾಗಿ ದುಡಿಯಲು ಇರುವ ಯಂತ್ರ ಎಂದು ಭಾವಿಸಬಾರದು. ಬದಲಾಗಿ ತಾಯಿ, ಸಹೋದರಿ, ಪತ್ನಿಯಾಗಿ ಗೌರವದಿಂದ ಕಾಣಬೇಕು. ಮಹಿಳೆಯರು ತಮ್ಮ ಮನಸ್ಸಿಗೆ ಬಂದಿದ್ದನ್ನು ವಿವೇಚನೆಯಿಂದ ನಿರ್ಧಾರ ಕೈಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಜತೆಗೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಮಹಿಳೆಯರು ನಮ್ಮ ನಡುವೆ ಸಾಕಷ್ಟಿದ್ದಾರೆ. ಕ್ರೀಡೆಯಲ್ಲಿ ದೇಶದ ಕೀರ್ತಿ ಹೆಚ್ಚಿಸಿದವರೂ ಇದ್ದಾರೆ. ಹೀಗಾಗಿ ಸಮಾಜದಲ್ಲಿ ಲಿಂಗ ತಾರತಮ್ಯ ಬಿಟ್ಟು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಪ್ರತಿಯೊಬ್ಬರು ಕಲ್ಪಿಸಿಕೊಡಬೇಕು. ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ ವಿವಿಧ ಶೋಷಣೆಗಳು ಹೆಚ್ಚುತ್ತಲೇ ಇವೆ. ಇದು ಪ್ರತಿಯೊಬ್ಬರು ತಲೆ ತಗ್ಗಿಸುವ ವಿಚಾರವಾಗಿದೆ. ಇದರ ವಿರುದ್ಧ ಹೋರಾಟ ನಡೆಸಲು ಪ್ರತಿಯೊಬ್ಬರು ಸಂಘಟಿತರಾಗಬೇಕು ಎಂದರು.

ಅವಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌.ರಾಮಕೃಷ್ಣಪ್ಪ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ಸರ್ಕಾರಿ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ಖಾಸಗಿ ವಲಯದಲ್ಲಿ ಇದು ಇನ್ನೂ ಮರೀಚಿಕೆ ಎನಿಸಿದೆ. ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಜತೆಗೆ ತಮ್ಮ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಮಹಿಳೆಯರು ಇವತ್ತಿನ ದಿನಗಳಲ್ಲಿ ಹೆಚ್ಚೆಚ್ಚು ಸ್ತ್ರೀ ಶಕ್ತಿ ಸಂಘಗಳನ್ನು ಗ್ರಾಮಗಳಲ್ಲಿ ಆರಂಭಿಸಬೇಕು. ಇದರಿಂದ ಎಲ್ಲರೂ ಒಂದು ಕಡೆ ಸೇರುವ ಅವಕಾಶ ದೊರೆಯುತ್ತದೆ. ತಮ್ಮಲ್ಲಿರುವ ಸಮಸ್ಯೆ ಹಂಚಿಕೊಳ್ಳುವ ಮೂಲಕ ಪರಿಹಾರ ಹುಡಕಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಎ ಕೊತ್ತೂರು ಎಂಪಿಸಿಎಸ್‌ ಅಧ್ಯಕ್ಷ ಎ.ವೆಂಕಟರೆಡ್ಡಿ, ಅವಲಗುರ್ಕಿ ಗ್ರಾಮ ಪಂಚಾಯಿತಿ ಸದಸ್ಯೆ ಗಾಯತ್ರಿ, ಅಂಗನವಾಡಿ ಮೇಲ್ವಿಚಾರಕಿ ಕೃಷ್ಣಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.