ADVERTISEMENT

ಮಾರುಕಟ್ಟೆಯಲ್ಲಿ ಹಲಸಿನ ‘ಪರಿಮಳ’

ಘಮಗುಡುವ ಹಣ್ಣು, ವ್ಯಾಪಾರ ಬಲು ಜೋರು, ಮುಂಗಡ ನೀಡಿ ಹಣ್ಣು ಖರೀದಿಸಿದ ವರ್ತಕರ ಮೊಗದಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 28 ಮೇ 2018, 10:25 IST
Last Updated 28 ಮೇ 2018, 10:25 IST
ನಗರದಲ್ಲಿ ಹಲಸಿನ ಹಣ್ಣಿನ ತೊಳೆಗಳನ್ನು ಖರೀಸುವಲ್ಲಿ ಮಗ್ನರಾದ ಗ್ರಾಹಕರು
ನಗರದಲ್ಲಿ ಹಲಸಿನ ಹಣ್ಣಿನ ತೊಳೆಗಳನ್ನು ಖರೀಸುವಲ್ಲಿ ಮಗ್ನರಾದ ಗ್ರಾಹಕರು   

ಚಿಕ್ಕಬಳ್ಳಾಪುರ: ಹಲಸಿನ ಸುಗ್ಗಿ ಆರಂಭವಾಗಿದೆ. ನಗರದಲ್ಲಿ ಈವರೆಗೂ ಅಲ್ಲೊಂದು ಇಲ್ಲೊಂದು ಮಾರಾಟವಾಗುತ್ತಿದ್ದ ಹಲಸಿನ ವಹಿವಾಟು ವಾರದ ಈಚೆಗೆ ಜೋರಾಗಿದೆ. ಎಲ್ಲೆಲ್ಲೂ ಅದರ ಪರಿಮಳ ಪಸರಿಸಿದ್ದು, ಹಲಸಿನ ಮೋಹಿಗಳ ಬಾಯಲ್ಲಿ ನೀರೂರಿಸುತ್ತಿದೆ.

ನಗರದ ಚೆನ್ನಯ್ಯ ಪಾರ್ಕ್‌ ಮುಂಭಾಗ, ಭುವನೇಶ್ವರಿ ವೃತ್ತ, ಎಂ.ಜಿ. ರಸ್ತೆ, ಕೆ.ವಿ ಕ್ಯಾಂಪಸ್‌ ಗೇಟ್‌ ಬಳಿ, ಚದಲಪುರ ಕ್ರಾಸ್‌, ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಕಳೆಗಟ್ಟಿದೆ. ಗುಣಮಟ್ಟ, ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಲಾಗಿದೆ. ಕೆಲವಡೆ ಕಾಯಿ ಸುಲಿದು ತೊಳೆ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ.

ಚಿಕ್ಕಬಳ್ಳಾಪುರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ರೈತರ ಜಮೀನುಗಳಲ್ಲಿರುವ ಮರಗಳಿಂದ ಹಣ್ಣುಗಳನ್ನು ವ್ಯಾಪಾರಸ್ಥರು ಖರೀದಿಸಿ ಮಾರುತ್ತಿದ್ದಾರೆ. ಕೆಲವಡೆ ಮಧ್ಯವರ್ತಿಗಳು ನೇರವಾಗಿ ರೈತರಿಂದ ಹಣ್ಣು ಖರೀದಿಸಿ ತಂದು ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ.

ADVERTISEMENT

‘ಪ್ರತಿ ವರ್ಷ ರೈತರ ತೋಟಗಳ ಬಳಿ ಹೋಗಿ ಮರದಲ್ಲಿನ ಫಸಲಿನ ಆಧಾರದ ಮೇಲೆ ಕಾಯಿ ಲೆಕ್ಕ ಹಾಕಿ ರೈತರಿಗೆ ಮುಂಗಡ ಹಣ ನೀಡಿ ಖರೀದಿಸುತ್ತೇವೆ. ಕಾಯಿ ಹಣ್ಣಾಗುವ ಹಂತದಲ್ಲಿ ಕಿತ್ತು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತೇವೆ. ಜತೆಗೆ ತಳ್ಳುಗಾಡಿಯಲ್ಲಿ ತೊಳೆ ಸುಲಿದು ಮಾರಾಟ ಮಾಡುತ್ತೇನೆ’ ಎಂದು ಎಂ.ಜಿ ರಸ್ತೆಯಲ್ಲಿ ಹಲಸಿನ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಾಪಾರಿ ಅಕ್ಬಲ್‌ ಪಾಷಾ ಹೇಳಿದರು.

‘ತಿಂಗಳಿನಿಂದ ಎಂ.ಜಿ ರಸ್ತೆಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದೇನೆ. ದಿನಕ್ಕೆ 15ರಿಂದ 25 ಕಾಯಿ ಮಾರಾಟವಾಗುತ್ತಿವೆ. ಹಣ್ಣಿನ ಗಾತ್ರದ ಆಧಾರ ಮೇಲೆ ₹90ರಿಂದ ₹ 600ರ ವರೆಗೆ ಮಾರಾಟವಾಗುತ್ತಿವೆ. ಒಂದು ಹಣ್ಣಿಗೆ ₹ 20ರಿಂದ ₹ 40ರ ವರೆಗೆ ಲಾಭ ಸಿಗುತ್ತದೆ’ ಎಂದು ತಿಳಿಸಿದರು.

‘ಹಲಸಿನ ಹಣ್ಣು ಮಾರಾಟ ಮಾಡುವುದರ ಜತೆಯಲ್ಲೇ ನಾನೇ ಸ್ವಂತ ತಳ್ಳುಗಾಡಿ ಇಟ್ಟುಕೊಂಡು ಹಣ್ಣು ಸುಲಿದು ಒಂದು ತೊಳೆಗೆ ₹ 5ಕ್ಕೆ ಮಾರಾಟ ಮಾಡುತ್ತೇನೆ. ಜತೆಗೆ ಎರಡು– ಮೂರು ದಿನಕ್ಕೊಮ್ಮೆ ಹೈದಾರಬಾದ್‌ನಲ್ಲಿರುವ ಪರಿಚಿತ ವ್ಯಾಪಾರಿ ಒಬ್ಬರಿಗೆ 50 ರಿಂದ 100 ಕಾಯಿವರೆಗೂ ಹಣ್ಣು ಕಳುಹಿಸುತ್ತಿದ್ದೇನೆ’ ಎಂದು ಹೇಳಿದರು.

‘ಹಲಸಿನ ಸುಗ್ಗಿ ಮೂರು ತಿಂಗಳು ಇರಲಿದೆ. ಜಿಲ್ಲೆಗಿಂತ ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ಹಣ್ಣು ಹೆಚ್ಚು ಸಿಗುತ್ತದೆ.  ಸದ್ಯ ದೊಡ್ಡಬಳ್ಳಾಪುರ ಸುತ್ತಲಿನ 70ಕ್ಕೂ ಮರಗಳ ಫಸಲು ಖರೀದಿಸಿದ್ದೇನೆ. ಆ ಭಾಗದಲ್ಲಿ ಬಿಳಿ, ಹಳದಿ, ಕೆಂಪು ತೊಳೆಯುಳ್ಳ ಹಣ್ಣಿವೆ. ರುಚಿ ಸಹ ತುಂಬಾ ಚೆನ್ನಾಗಿರುತ್ತದೆ. ಹೀಗಾಗಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ’ ಎನ್ನುತ್ತಾರೆ ಕೆ.ವಿ.ಕ್ಯಾಂಪಸ್‌ ಬಳಿಯ ಹಲಸು ವ್ಯಾಪಾರಿ ಮಂಜುನಾಥ್‌.

ಕಾಪಾ ಹಲಸು, ರಸವಾಳ ಹಲಸು, ಅಂಟುರತ ಹಲಸು, ಚಂದ್ರ ಹಲಸು ತೊಳೆಗಳನ್ನು ಕೆಲವು ವರ್ಷಗಳಿಂದ ಗ್ರಾಹಕರು ದೋಸೆ, ಪಲ್ಯ, ಚಿಪ್ಸ್‌, ಹಪ್ಪಳ, ವೈವಿಧ್ಯಮಯ ತಿಂಡಿ ತಿನಿಸು ತಯಾರಿಸಲು ಬಳಸುವರು. ಹೀಗಾಗಿ ಹಲಸಿಗೆ ಈಗ ಬೇಡಿಕೆ ಸ್ವಲ್ಪ ಹೆಚ್ಚಿದೆ ಎಂದು ಹೇಳಿದರು.
**
ಹಲಸಿನಕಾಯಿ, ಹಣ್ಣು, ಬೀಜವನ್ನು ಆಹಾರ ಪದಾರ್ಥಗಳಿಗೆ ಬಳಕೆ ಮಾಡುವುದು ಹೆಚ್ಚುತ್ತಿದೆ. ಹೀಗಾಗಿ ಹಲಸಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ
ಅಕ್ಬಲ್‌ ಪಾಷಾ, ಹಲಸಿನ ವ್ಯಾಪಾರಿ 

ಕೆಂಪೇಗೌಡ ಎನ್.ವೆಂಕಟೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.