ADVERTISEMENT

ಯಾವ್ಯಾವ ಕ್ಷೇತ್ರದಲ್ಲಿ ಯಾರ‌್ಯಾರು?

ಗದ್ದುಗೆಗೆ ಕಾದಾಟ, ಮತಕ್ಕೆ ಹೋರಾಟ-2013

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 4:54 IST
Last Updated 2 ಏಪ್ರಿಲ್ 2013, 4:54 IST

ಚಿಕ್ಕಬಳ್ಳಾಪುರ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ನೂತನ ಪಕ್ಷಗಳಾದ ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ನ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಸಿಪಿಎಂ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಆದರೆ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಆಯ್ಕೆ ಪ್ರಕ್ರಿಯೆ ಜಟಿಲವಾಗಿದೆ.

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿಯಿದ್ದು, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಆಕಾಂಕ್ಷಿಗಳು ತುದಿಗಾಲಲ್ಲಿ ಇದ್ದಾರೆ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ, ಕೆಪಿಸಿಸಿ ಸದಸ್ಯರಾದ ಯಲುವಹಳ್ಳಿ ಎನ್.ರಮೇಶ್ ಮತ್ತು ಡಾ.ಕೆ.ಸುಧಾಕರ್ ಅರ್ಜಿ ಸಲ್ಲಿಸಿದ್ದಾರೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಇನ್ನೂ ತೀರ್ಮಾನಗೊಂಡಿಲ್ಲ.

ಜೆಡಿಎಸ್‌ನಲ್ಲಿ ಹಾಲಿ ಶಾಸಕ ಕೆ.ಪಿ.ಬಚ್ಚೇಗೌಡ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಪ್ರಬಲ ಆಕಾಂಕ್ಷಿಯಾಗಿದ್ದ ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಕೆ.ವಿ.ನಾಗರಾಜ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯಲ್ಲಿ ಪಕ್ಷದ ಮುಖಂಡರಾದ ತಮ್ಮೇಶಗೌಡ, ಡಾ.ಮಂಜುನಾಥ್ ಮತ್ತು ಎ.ವಿ.ಬೈರೇಗೌಡ ಅರ್ಜಿ ಸಲ್ಲಿಸಿದ್ದಾರೆ.

ಚಿಂತಾಮಣಿ: ಜೆಡಿಎಸ್ ತೊರೆದಿರುವ ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಅವರ ಪುತ್ರಿ ವಾಣಿ ಕೃಷ್ಣಾರೆಡ್ಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಿಂದ ಜೆ.ಕೆ.ಕೃಷ್ಣಾರೆಡ್ಡಿ ಸ್ಪರ್ಧಿಸುವ ಸಾಧ್ಯತೆಯಿದೆ. ಸತತ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಹಾಲಿ ಶಾಸಕ ಡಾ.ಎಂ.ಸಿ.ಸುಧಾಕರ್ ಈ ಬಾರಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿಲ್ಲ. ಪಕ್ಷೇತರರಾಗಿ ಕಣಕ್ಕೆ ಇಳಿಯಲು ಬಯಸಿದ್ದಾರೆ.

ಬಿಜೆಪಿಯಿಂದ ಸತ್ಯನಾರಾಯಣ ಮಹೇಶ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಹಲವು ವರ್ಷಗಳ ಬಳಿಕ ಮತ್ತೆ ಸಿಪಿಎಂ ವತಿಯಿಂದ ಗೋಪಿನಾಥ್ ಸ್ಪರ್ಧಿಸಲಿದ್ದಾರೆ. ನೂತನ ಪಕ್ಷಗಳಾದ ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಖಚಿತವಾಗಿಲ್ಲ.

ಗೌರಿಬಿದನೂರು: ಸತತ ಮೂರು ಬಾರಿ ವಿಜಯಶಾಲಿಯಾಗಿರುವ ಹಾಲಿ ಶಾಸಕ ಎನ್.ಎಚ್.ಶಿವಶಂಕರ್‌ರೆಡ್ಡಿ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಪಕ್ಷದಲ್ಲಿ ಅವರಿಗೆ ಪೈಪೋಟಿಯಿರಲಿಲ್ಲ. ಆದರೆ ಈಗ ಮೂವರು ಆಕಾಂಕ್ಷಿಗಳು ದಿಢೀರ್ ಕಾಣಿಸಿಕೊಂಡಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆನಂದ್‌ಕುಮಾರ್ ಮತ್ತು ಕೆಪಿಸಿಸಿ ಸದಸ್ಯ ನಾಗಭೂಷಣರಾವ್ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಜೆಡಿಎಸ್‌ನಲ್ಲಿ ಮಾಜಿ ಶಾಸಕರಾದ ಎಸ್.ವಿ.ಅಶ್ವತ್ಥ್‌ನಾರಾಯಣರೆಡ್ಡಿ ಮತ್ತು ಎನ್.ಜ್ಯೋತಿರೆಡ್ಡಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಪಕ್ಷದ ವರಿಷ್ಠರು ಇದುವರೆಗೆ ಖಚಿತಪಡಿಸಿಲ್ಲ. ಆದರೆ ಊಹಾಪೋಹ ಮತ್ತು ಗಾಳಿಸುದ್ದಿಗಳು ಮುಂದುವರಿದಿವೆ. ಬಿಜೆಪಿಯಿಂದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ ಸ್ಪರ್ಧಿಸುವುದು ಖಾತ್ರಿಯಾಗಿದೆ. ಸಿಪಿಎಂನಿಂದ ಅಶ್ವತ್ಥಪ್ಪ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸೋಮಶೇಖರ್, ಕೆಜೆಪಿಯಿಂದ ಮುರಳೀಧರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಬಾಗೇಪಲ್ಲಿ: ಹಾಲಿ ಶಾಸಕ ಎನ್.ಸಂಪಂಗಿಯವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದ್ದು, ಪಕ್ಷದಲ್ಲಿ ಯಾರೂ ಪೈಪೋಟಿಯಿಲ್ಲ. ಆದರೆ ಸಮಾಜಸೇವಕನಾಗಿ ಗುರುತಿಸಿಕೊಂಡಿರುವ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದಾರೆ.
ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಅವರಿಗೆ ಪಕ್ಷದಲ್ಲಿ ಪ್ರತಿಸ್ಪರ್ಧಿಯಿಲ್ಲ. ಕೆಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಸಿ.ಆರ್.ಮನೋಹರ್ ಜೆಡಿಎಸ್‌ನತ್ತ ಒಲವು ತೋರಿದ್ದು, ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್ ಟಿಕೆಟ್‌ಗಾಗಿ ಜಿಲ್ಲಾ ಪಂಚಾಯಿತಿ ಹಾಲಿ ಸದಸ್ಯ ಹರಿನಾಥರೆಡ್ಡಿ ಮತ್ತು ಪಕ್ಷದ ಮುಖಂಡ ಡಿ.ಜೆ.ನಾಗರಾಜರೆಡ್ಡಿ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಎಸ್.ಎಂ.ಟಿ.ಲಕ್ಷ್ಮಿನಾರಾಯಣ, ಗುಂಜೂರು ಶ್ರೀನಿವಾಸರೆಡ್ಡಿ ಮತ್ತು ಎಂ.ನಾರಾಯಣಸ್ವಾಮಿ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಡಾ.ಜಿ.ಎಸ್.ಚೌಡರೆಡ್ಡಿ ಸ್ಪರ್ಧಿಸುವ ಸಾಧ್ಯತೆಯಿದೆ.

ಶಿಡ್ಲಘಟ್ಟ: ಹಾಲಿ ಶಾಸಕ ವಿ.ಮುನಿಯಪ್ಪ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದ್ದು, ಅವರಿಗೆ ಪಕ್ಷದಲ್ಲಿ ಯಾರೂ ಪೈಪೋಟಿಯಿಲ್ಲ. ಜೆಡಿಎಸ್‌ನಿಂದ ಎಂ.ರಾಜಣ್ಣ ಸ್ಪರ್ಧಿಸುವ ಸಾಧ್ಯತೆಯಿದೆ. ಬಿಜೆಪಿಯಲ್ಲಿ ಜೆ.ವಿ.ಸದಾಶಿವ ಮತ್ತು ಕೆಂಪರೆಡ್ಡಿ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಕೆಜೆಪಿಯಿಂದ ಶಿವಕುಮಾರಗೌಡ ಸ್ಪರ್ಧಿಸುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.