ಚಿಕ್ಕಬಳ್ಳಾಪುರ: ದೇಶದಲ್ಲಿ ಪ್ರಜಾಪ್ರಭುತ್ವದ ತಳಪಾಯ ಇನ್ನೂ ಗಟ್ಟಿಯಾಗಿ ಉಳಿಯಬೇಕಿದ್ದರೆ, ಯುವಜನರು ಆಸಕ್ತಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ‘ಸ್ವೀಪ್’ ಮತದಾನ ಜಾಗೃತಿ ಅರಿವು ಸಮಿತಿ ಅಧ್ಯಕ್ಷೆ ನೀಲಾ ಮಂಜುನಾಥ್ ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಎನ್ಎಸ್‌ಎಸ್ ಘಟಕದ ಸಹಯೋಗದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ‘ಸುಭದ್ರ ಕ್ರಿಯಾಶೀಲ ಪ್ರಜಾಪ್ರಭುತ್ವಕ್ಕೆ ಮತದಾನದ ಮಹತ್ವ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲೇ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, 18ನೇ ವಯಸ್ಸಿಗೆ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಚುನಾವಣೆಯ ಮೂಲಕ ದೇಶದ ನಾಯಕತ್ವದ ಭವಿಷ್ಯ ನಿರ್ಧರಿಸಲಾಗುವುದರಿಂದ ಅರ್ಹರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಎಂದು ಅವರು ಸಲಹೆ ಮಾಡಿದರು.
ಮತದಾನ ಪ್ರಮಾಣ ಕುಸಿಯಬಾರದು ಮತ್ತು ಯುವಜನರು ಚುನಾವಣೆಯಿಂದ ವಿಮುಖಗೊಳ್ಳಬಾರದು ಎಂಬ ಸದುದ್ದೇಶದಿಂದ ‘ಸ್ವೀಪ್’ ಮತದಾನ ಜಾಗೃತಿ ಅಭಿಯಾನ ಕೈಗೊಂಡಿದೆ. ಸ್ವೀಪ್ ಕಾರ್ಯಕ್ರಮದಡಿ ಬರೀ ವಿಚಾರ ಸಂಕಿರಣ ನಡೆಸುವುದಲ್ಲ, ಪ್ರಬಂಧ, ಓಟ, ಭಾಷಣ ಸ್ಪರ್ಧೆ ಮುಂತಾದವು ಹಮ್ಮಿಕೊಳ್ಳಲಾಗುವುದು. ಚುನಾವಣೆ ಕುರಿತು ಯುವಜನರಲ್ಲಿ ಆಸಕ್ತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ ಮಾತನಾಡಿ, ದೇಶದಲ್ಲಿ ಸುಭದ್ರ ಮತ್ತು ಸ್ಥಿರ ಸರ್ಕಾರ ನೆಲೆಗೊಳ್ಳಬೇಕಿದ್ದರೆ, ಜನರ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯವಾಗುತ್ತದೆ. ಮತದಾರರು ಚಲಾಯಿಸುವ ಒಂದೊಂದು ಮತವು ತುಂಬಾ ಮುಖ್ಯವಾಗಿದ್ದು, ಅದು ಸಮರ್ಥ ಜನಪ್ರತಿನಿಧಿಯ ಆಯ್ಕೆಗೆ ಸಹಕರಿಸುತ್ತದೆ. ಆದ್ದರಿಂದ ನಾವು ಮತದಾನದಿಂದ ವಿಮುಖರಾಗಬಾರದು ಎಂದರು.
ಮತ ಚಲಾಯಿಸದೇ ನಂತರ ನಾಯಕತ್ವದ ಬಗ್ಗೆ ಪಶ್ಚಾತ್ತಾಪ ಪಡುವುದಕ್ಕಿಂತ ಮತ ಚಲಾಯಿಸಿ ಸೂಕ್ತ ನಾಯಕರನ್ನು ಆಯ್ಕೆ ಮಾಡುವುದು ಸರಿ. ಬಹುತೇಕ ದೇಶಗಳಲ್ಲಿ ಕಿರಿಯ ವಯಸ್ಸಿನವರಿಗೆ ಮತ್ತು ಮಹಿಳೆಯರಿಗೆ ಮತ ಚಲಾಯಿಸಲು ಅವಕಾಶ ನೀಡುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಆ ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರಾಧ್ಯಾಪಕಿ ಡಾ.ಜಿ.ಸುಧಾ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಆಸೆ–ಆಮಿಷ, ಬೆದರಿಕೆ ಒಡ್ಡುತ್ತಾರೆ. ಆದರೆ ಅದ್ಯಾವುದಕ್ಕೂ ಅಂಜದೇ ತಮ್ಮ ಮನಸ್ಸಿಗೆ ಒಪ್ಪುವ ಮತ್ತು ಸಮರ್ಥರೆಂದೇ ಗುರುತಿಸುವ ವ್ಯಕ್ತಿ ಪರ ಮತ ಚಲಾಯಿಸಿ ಎಂದರು.
ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನಾ, ಕಾಲೇಜು ಪ್ರಾಂಶುಪಾಲ ಕೃಷ್ಣಪ್ಪ, ಪ್ರಾಧ್ಯಾಪಕರಾದ ಚಂದ್ರಪ್ಪ, ರಾಮಕೃಷ್ಣ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.