ADVERTISEMENT

ಯೋಗಿನಾರೇಯಣರ ಆರಾಧನೆ ಇಂದು

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 9:25 IST
Last Updated 4 ಜೂನ್ 2011, 9:25 IST
ಯೋಗಿನಾರೇಯಣರ ಆರಾಧನೆ ಇಂದು
ಯೋಗಿನಾರೇಯಣರ ಆರಾಧನೆ ಇಂದು   

ಚಿಂತಾಮಣಿ: ಕೈವಾರ ಯೋಗಿ ನಾರೇಯಣ ಯತೀಂದ್ರರ 176ನೇ ಆರಾಧನಾ ಮಹೋತ್ಸವ ಶನಿವಾರ (ಇಂದು) ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ತಾತಯ್ಯ ಎಂದೇ ಪ್ರಸಿದ್ಧರಾದ ಯೋಗಿನಾರೇಯಣ ಯತೀಂದ್ರರು ಭಕ್ತಿ, ಜ್ಞಾನ, ತತ್ವಯೋಗ ಸಾಧನೆಯ ಸಾಧಕರಾಗಿದ್ದರು. ಆಧ್ಯಾತ್ಮಿಕ ಚಿಂತಕರಾಗಿ ತಮ್ಮ ತತ್ವಪದಗಳ ಮೂಲಕ ಮನುಕುಲವನ್ನು ಎಚ್ಚರಿಸಿದ್ದರು. ಆಧ್ಯಾತ್ಮಿಕ ಬೋಧನೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅವರು ತಮ್ಮ ತತ್ವಪದಗಳ ಮೂಲಕ ಮಾರ್ಗದರ್ಶನ ನೀಡಿದ್ದಾರೆ

ಅಧ್ಯಾತ್ಮಿಕ ಒಲವಿದ್ದ ಯೋಗಿನಾರೇಯಣರು ತಮ್ಮ ಕುಲವೃತ್ತಿಯಾದ ಬಳೆತೊಡಿಸುವ ಕಾಯಕಕ್ಕಾಗಿ ಊರೂರು ಸುತ್ತುತ್ತಾ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದರು. ಕಂಡುಕೊಂಡ ಜೀವನದ ಸತ್ಯಗಳನ್ನು ಲೇಖನಿಯ ಮೂಲಕ ಜನತೆಗೆ ತಿಳಿಸಿದರು. ಬಳೆ ವ್ಯಾಪಾರಕ್ಕಾಗಿ ಚಿತ್ತೂರಿನ ಪ್ರಾಂತ್ಯಕ್ಕೆ ತೆರಳಿದ್ದಾಗ ಪರದೇಶಸ್ವಾಮಿ ಎಂಬ ಯೋಗಿಗಳ ದರ್ಶನದಿಂದ ಆಧ್ಯಾತ್ಮ ಉನ್ನತಿ ಸಾಧಿಸಿದರು ಎಂದು ಅವರು ಆತ್ಮ ಚರಿತ್ರೆ ತಿಳಿಸುತ್ತದೆ.

ಸಂಸಾರ ತ್ಯಜಿಸಿ ತಪಸ್ಸು ಆಚರಿಸಿ ಸಿದ್ಧ ಪುರುಷರಾದರು, ಕಲ್ಲನ್ನು ಕಲ್ಲುಸಕ್ಕರೆಯಾಗಿ ಮಾರ್ಪಡಿಸಿದರು ಎಂದ ಪ್ರತೀತಿ ಇದೆ. ಯೋಗ ಸಾಧನೆಗಳ ಮೂಲಕ ಅನೇಕ ಪವಾಡಗಳನ್ನು ಮಾಡುತ್ತಾ, ಜನರಿಗಾಗಿ ಕೀರ್ತನೆಗಳನ್ನು ರಚಿಸಿ ನಾದೋಪಾಸಕರಾದವರು.ಗುರುವಿನ ಸ್ಮರಣೆ ಮಾಡುತ್ತಾ ಅವರ ಪಾದದಲ್ಲಿ ಶರಣಾಗತಿ ಹೊಂದುವುದು ಎಲ್ಲಕಿಂತಲೂ ಮಹತ್ತರವಾದುದು ಎಂದು ತಾತಯ್ಯನವರು ತಮ್ಮ ಕೀರ್ತನೆಗಳಲ್ಲಿ ಹೇಳಿದ್ದಾರೆ.

ತಾತಯ್ಯನವರ ಕಾಲಜ್ಞಾನ ಗ್ರಂಥ ಇಂದಿಗೂ ಪ್ರಸ್ತುತ. ಭವಿಷ್ಯದಲ್ಲಿ ನಡೆಯುವ ಘಟನೆಗಳ ಮುನ್ಸೂಚನೆ ಈ ಗ್ರಂಥದಲ್ಲಿದೆ. ತಾತಯ್ಯನವರ ಆರಾಧನೆ ಮಠದಲ್ಲಿ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಸಾವಿರಾರು ಸಾಧುಗಳಿಗೆ ಕಾಷಾಯ ವಸ್ತ್ರದಾನ ಮಾಡಲಾಗುತ್ತದೆ. ಆಗಮಿಸುವ ಎಲ್ಲ ಭಕ್ತರಿಗೂ ಉಚಿತ ದಾಸೋಹವನ್ನು ಏರ್ಪಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.