ADVERTISEMENT

ರಂಗೇರಿದ ಪ್ರಚಾರ, ಕಾರ್ಮಿಕರಿಗೆ ಬರ

ಬಿಸಿಲ ಬೇಗೆ ತಪ್ಪಿಸಿಕೊಂಡು ಮತಯಾಚನೆಗೆ ಮುಂದಾದ ಕೂಲಿಕಾರರು, ಊಟ–ಉಪಾಹಾರದ ಜತೆಗೆ ಸಂಬಳ ಲಭ್ಯ

ಈರಪ್ಪ ಹಳಕಟ್ಟಿ
Published 5 ಮೇ 2018, 10:19 IST
Last Updated 5 ಮೇ 2018, 10:19 IST

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಪ್ರಚಾರ ಗಲ್ಲಿ ಗಲ್ಲಿಗಳಲ್ಲಿ ಕಾವು ಪಡೆದುಕೊಳ್ಳುತ್ತಿದ್ದಂತೆ ಮನೆಗೆಲಸ ದಿಂದ ಹಿಡಿದು ನಿರ್ಮಾಣ ಕ್ಷೇತ್ರದ ವರೆಗೆ ಮೇಲೆ ತನ್ನ ಪರಿಣಾಮ ಬೀರಿದೆ. ದಿನದ ಕೂಲಿಗಾಗಿ ಆಯ್ದ ಸ್ಥಳಗಳಲ್ಲಿ ಕಾಯ್ದು ನಿಲ್ಲುತ್ತಿದ್ದ ಕಾರ್ಮಿಕರು ಈಗ ಕೈಗೆ ಸಿಗದಷ್ಟು ಪ್ರಚಾರ ಕಾರ್ಯದಲ್ಲಿ ಕ್ರಿಯಾಶೀಲರಾಗಿದ್ದಾರೆ!

ಮತದಾನ ಪ್ರಕ್ರಿಯೆಗೆ ದಿನಗಣನೆ ಆರಂಭಗೊಂಡು ಪ್ರಚಾರ ಗರಿಗೆದರುತ್ತಿದ್ದಂತೆ ಕಾರ್ಮಿಕರಿಗೆ ಎಲ್ಲದ ಬೇಡಿಕೆ ತಂದಿದೆ. ಕೆಲಸಕ್ಕಾಗಿ ಎದುರು ನೋಡುತ್ತಿದ್ದವರನ್ನು ಇದೀಗ ವಿವಿಧ ಪಕ್ಷದವರು ಪೈಪೋಟಿಯಲ್ಲಿ ಪ್ರಚಾರ ಕಾರ್ಯಗಳಿಗೆ ಕರೆದುಕೊಂಡು ಹೋಗಿ ಊಟ, ಉಪಾಹಾರದ ಜತೆಗೆ ‘ಕೈಮುಚ್ಚಿ’ ಹಣ ನೀಡಿ ಕಳುಹಿಸುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಕಟ್ಟಡ ಕಾಮಗಾರಿಗಳಿಗೆ ಕಾರ್ಮಿಕರ ಅಭಾವ ತಲೆದೋರಿದ್ದು, ಅನೇಕ ಕಾಮಗಾರಿ ಸ್ಥಗಿತಗೊಂಡಿವೆ.

ಕಟ್ಟಡಗಳ ನಿರ್ಮಾಣ, ಪ್ಲಂಬರ್ ಕೆಲಸ, ಎಲೆಕ್ಟ್ರಿಕಲ್, ಮರಗೆಲಸ, ಟೈಲ್ಸ್, ಗ್ರಾನೈಟ್, ಪೇಂಟಿಂಗ್, ಕಬ್ಬಿಣದ ಕೆಲಸ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೆಲಸದ ಮೇಸ್ತ್ರಿಗಳಿಗೆ ಕೈಗೆ ಸಿಗದಂತಾಗಿದ್ದಾರೆ.

ADVERTISEMENT

ದಿನವಿಡೀ ಬಿಸಿಲಿನಲ್ಲಿ ಬೆವರು ಹರಿಸುತ್ತಿದ್ದ ಕಾರ್ಮಿಕರು ಇದೀಗ ಬೆಳಿಗ್ಗೆ ಮತ್ತು ಸಂಜೆ ಕೆಲ ಹೊತ್ತು ಮನೆ ಮನೆಗೆ ಸುತ್ತಾಡಿ ತಮ್ಮನ್ನು ಕರೆತಂದ ಅಭ್ಯರ್ಥಿಯ ಕರಪತ್ರವನ್ನು ಹಂಚುತ್ತ ಕಂಡವರ ಬಳಿ ಮತಯಾಚನೆಯ ‘ಶಾಸ್ತ್ರ’ ಪೂರೈಸುತ್ತಿದ್ದಾರೆ. ಹೀಗಾಗಿ ನಿಗದಿತ ಗಡುವಿನೊಳಗೆ ಕಾಮಗಾರಿ ಮುಗಿಸಿಕೊಡುವ ಭರವಸೆ ನೀಡಿದ ಮೇಸ್ತ್ರಿಗಳಿಗೆ ಪೀಕಲಾಟ ಶುರುವಾಗಿದೆ.

ಪ್ರಚಾರ ಕಾರ್ಯಕ್ಕೆ ಹೋಗುವ ಮಹಿಳೆಯರಿಗೆ ಕನಿಷ್ಠ ₹ 300 ನೀಡಲಾಗುತ್ತಿದೆ. ಕೆಲವೆಡೆ ಪುರುಷರು ₹ 500ರ ವರೆಗೆ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಮತದಾನ ಆಸುಪಾಸು ವಿಶೇಷ ಉಡುಗೊರೆ ನೀಡುವುದಾಗಿ ಅಭ್ಯರ್ಥಿಗಳು ಕಾರ್ಮಿಕರಿಗೆ ಆಮಿಷ ಒಡ್ಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪ್ರಚಾರ ಕಾರ್ಯದಲ್ಲಿ ಪುರುಷರಿಗಿಂತಲೂ ಮಹಿಳೆಯರದೇ ಸಿಂಹಪಾಲಿದೆ.

‘ಬೆಳಿಗ್ಗೆ 6.30ರಿಂದ 9.30 ರವರೆಗೂ ಬಿರುಸಿನ ಪ್ರಚಾರ ನಡೆಸುತ್ತೇವೆ. ಈ ವೇಳೆ ತಿಂಡಿ, ಟೀ, ಕಾಫಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಸಂಜೆ ಕೂಡ ಕೆಲ ಹೊತ್ತು ಪ್ರಚಾರ ನಡೆಸುತ್ತೇವೆ. ಆ ಸಂದರ್ಭದಲ್ಲೂ ತಿಂಡಿ, ಕಾಫಿ ಕೊಡುತ್ತಾರೆ’ ಎನ್ನುತ್ತಾರೆ ನಗರ ವ್ಯಾಪ್ತಿಯಲ್ಲಿ ಪಕ್ಷವೊಂದರ ಪ್ರಚಾರದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕ ರಮೇಶ್.

‘ನಗರದ ವಿವಿಧ ಬಡಾವಣೆಗಳಲ್ಲಿ ನಾಲ್ಕು ಮನೆಗಳನ್ನು ನಿರ್ಮಿಸುವ ಗುತ್ತಿಗೆ ಪಡೆದಿರುವೆ. ಈ ಚುನಾವಣೆ ಜೋರಾಗಿದ್ದೆ ಕಾರ್ಮಿಕರು ಸುಳ್ಳು ಹೇಳಿ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಹತ್ತಾರು ಜನರು ಕೆಲಸ ಮಾಡುವ ಕಡೆಗಳಲ್ಲಿ ಒಬ್ಬಿಬ್ಬರನ್ನು ನಿಯೋಜಿಸಿ ಮಾಲೀಕರಿಗೆ ಸಮಾಧಾನ ಮಾಡುವ ಕೆಲಸ ಮಾಡುತ್ತಿರುವೆ. ಇನ್ನೊಂದು ವಾರ ಕಳೆದರೆ ಎಲ್ಲ ಸರಿಹೋಗುತ್ತದೆ’ ಎಂದು ಗಂಗನಮಿದ್ದೆ ನಿವಾಸಿ, ಗಾರೆ ಕೆಲಸದ ಮೇಸ್ತ್ರಿ ವೆಂಕಟೇಶ್ ತಿಳಿಸಿದರು.

‘ಯಾರ ಕಿರಿಕಿರಿಯೂ ಇರಲ್ಲ’

‘ಮೇಸ್ತ್ರಿ ಕೈಕೆಳಗೆ ಕೆಲಸಕ್ಕೆ ಹೋದರೆ ಸಂಜೆ ವರೆಗೆ ಕುಳಿತುಕೊಳ್ಳಲು ಬಿಡುವುದಿಲ್ಲ. ಪ್ರಚಾರವಾದರೆ ಆರಾಮಾಗಿ ಗುಂಪಿನಲ್ಲಿ ಗೋವಿಂದ ಎನ್ನುವಂತೆ ತಿರುಗಾಡಬಹುದು. ಯಾರ ಕಿರಿಕಿರಿಯೂ ಇರುವುದಿಲ್ಲ. ಹೀಗಾಗಿ ಚುನಾವಣೆ ಮುಗಿಯುವ ವರೆಗೂ ಗಾರೆ ಕೆಲಸಕ್ಕೆ ಹೋಗಬಾರದೆಂದು ನಿರ್ಧರಿಸಿ ಬಿಟ್ಟಿದ್ದೆನೆ’ ಎಂದು ಅಂಬೇಡ್ಕರ್ ನಗರದ ನಿವಾಸಿ ಮುನಿಶಾಮಪ್ಪ ಹೇಳಿದರು.

‘ಹೊಟ್ಟೆ ಪಾಡು ಬದುಕಬೇಕಲ್ಲ?’

‘ಎರಡ್ಮೂರು ಮನೆಗಳಲ್ಲಿ ಮನೆಗೆಲಸ ಮಾಡುವೆ. ಅವರ ಬಳಿ ಚುನಾವಣೆ ಮುಗಿಯುವವರೆಗೂ ಬೆಳಿಗ್ಗೆ ಹೊತ್ತು ಕೆಲಸಕ್ಕೆ ಬರಲಾಗುವುದಿಲ್ಲ ಎಂದು ಹೇಳಿರುವೆ. ಅವರಿಗೂ ಅನಿವಾರ್ಯ ಒಪ್ಪಿಕೊಂಡಿದ್ದಾರೆ. ಬೆಳಿಗ್ಗೆ ಪ್ರಚಾರಕ್ಕೆ ಹೋಗಿ ಮಧ್ಯಾಹ್ನ ಮನೆಗೆಲಸ ಮಾಡಿ ಮತ್ತೆ ಸಂಜೆ ಪ್ರಚಾರಕ್ಕೆ ಹೋಗುವೆ. ಹೊಟ್ಟೆಪಾಡು ಏನೋ ಮಾಡಿ ಬದುಕಬೇಕಲ್ಲ’ ಎಂದು ಕಂದವಾರ ಬಾಗಿಲ ನಿವಾಸಿ ಮೀನಾಕ್ಷಮ್ಮ ತಿಳಿಸಿದರು.

**
ಬಸವ ಜಯಂತಿಗೆ ಗೃಹಪ್ರವೇಶಕ್ಕೆ ಉದ್ದೇಶಿಸಿ ದ್ದೆವು. ಮೇಸ್ತ್ರಿ ಹೇಳಿದಂತೆ ಕೆಲಸ ಮುಗಿಸಲಿಲ್ಲ. ಇದೀಗ ಕಾರ್ಮಿಕರೇ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ
- ಅಶೋಕ್, ಕೆಳಗಿನತೋಟದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.