ADVERTISEMENT

ರಕ್ತದಾನ ಮಾಡಿ ಅಮೂಲ್ಯ ಜೀವ ಉಳಿಸಿ

‘ವಿಶ್ವ ರಕ್ತದಾನಿಗಳ ದಿನ’ದ ಕಾರ್ಯಕ್ರಮದಲ್ಲಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌. ಕೋರಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 11:04 IST
Last Updated 15 ಜೂನ್ 2018, 11:04 IST

ಚಿಕ್ಕಬಳ್ಳಾಪುರ: ‘ಎಲ್ಲ ದಾನಗಳಲ್ಲೇ ರಕ್ತದಾನ ಶ್ರೇಷ್ಠ ದಾನ. ರಕ್ತವನ್ನು ದಾನ ಮಾಡುವುದು ಒಳ್ಳೆಯ ಕಾರ್ಯ. ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌ ಕೋರಡ್ಡಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಆರೋಗ್ಯ ಇಲಾಖೆ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಜಿಲ್ಲಾ ಏಡ್ಸ್‌ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ರಕ್ತದಾನಿಗಳ ದಿನ’ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಕ್ತದ ತೊಂದರೆ ಎದುರಾದಾಗ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. 18 ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ನಿಯಮಿತವಾಗಿ ರಕ್ತವನ್ನು ನೀಡುವ ಮೂಲಕ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 14ರಂದು ‘ವಿಶ್ವ ರಕ್ತ ದಾನಿಗಳ ದಿನ’ವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ 2004ರಲ್ಲಿ ಈ ಆಚರಣೆ ಆರಂಭವಾಯಿತು. ರಕ್ತ ವರ್ಗಾವಣಾ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೀನರ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಈ ದಿನ ಆಚರಿಸಲಾಗುತ್ತದೆ’ ಎಂದು ತಿಳಿಸಿದರು.

‘ಯಕೃತ್ತು (ಲಿವರ್), ಮೂತ್ರಪಿಂಡ (ಕಿಡ್ನಿ), ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ರಕ್ತಹೀನತೆ, ಕ್ಯಾನ್ಸರ್, ಕ್ಷಯ, ಮಲೇರಿಯಾ, ಟೈಫಾಯ್ಡ, ಜಾಂಡೀಸ್‌ನಿಂದ ಬಳಲಿದವರು ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು. ಆರೋಗ್ಯವಂತ ವ್ಯಕ್ತಿಗಳ ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿಸಲು ಸಾಧ್ಯ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಮಾತನಾಡಿ, ‘ಕಳೆದ ವರ್ಷ 12 ಸಾವಿರ ಯೂನಿಟ್‌ ರಕ್ತದ ಅವಶ್ಯಕತೆ ಇತ್ತು. ಆದರೆ ಕೇವಲ 8 ಸಾವಿರ ಯೂನಿಟ್‌ ರಕ್ತ ಸಂಗ್ರಹಿಸಲು ಸಾಧ್ಯವಾಯಿತು. ಈ ವರ್ಷದಲ್ಲಿ 15 ಸಾವಿರ ಯೂನಿಟ್‌ನಷ್ಟು ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ಪ್ರತಿಯೊಬ್ಬರು ಇದನ್ನು ಮನಗಂಡು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. ಆರೋಗ್ಯವಂತ ವ್ಯಕ್ತಿಗಳು ತಮ್ಮ ಹುಟ್ಟುಹಬ್ಬದ ದಿನದಂದು ರಕ್ತದಾನ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆ ಉಪಾಧ್ಯಕ್ಷ ಡಾ.ಕೆ.ಪಿ.ಶ್ರೀನಿವಾಸಮೂರ್ತಿ ಮಾತನಾಡಿ, ‘ಒಂದು ಯೂನಿಟ್‌ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ಇದರಿಂದ ಪ್ರಾಣ ಹಾನಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು’ ಎಂದರು.

ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಹಿರಿಯ ಸಿವಿಲ್‌ ನ್ಯಾಯಾಧೀಶ ಎಚ್‌.ದೇವರಾಜ್‌, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಎಂ.ರವಿಶಂಕರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ್‌ಕುಮಾರ್‌, ವಕೀಲ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್‌ ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.