ADVERTISEMENT

ರಸ್ತೆ ಒತ್ತುವರಿ ತೆರವಿಗೆ ಶೀಘ್ರ ಕ್ರಮ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 9:10 IST
Last Updated 9 ಏಪ್ರಿಲ್ 2012, 9:10 IST

ಗೌರಿಬಿದನೂರು: ಪಟ್ಟಣದ ಬಿ.ಎಚ್.ರಸ್ತೆ ಮತ್ತು ಎಂ.ಜಿ.ರಸ್ತೆ ವಿಸ್ತರಣೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಒತ್ತುವರಿ ಮಾಡಿಕೊಂಡಿರುವ ಮಳಿಗೆದಾರರಿಗೆ ನೋಟಿಸ್ ಹೊರಡಿಸಿ, ಕೆಲವೇ ದಿನಗಳಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ತಿಳಿಸಿದರು.

ಎರಡೂ ರಸ್ತೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಪಟ್ಟಣದ ಪುರಸಭೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, `ಮಳಿಗೆದಾರರು ಸ್ವಯಂ ಪ್ರೇರಣೆಯಿಂದ ಒತ್ತುವರಿ ತೆರವುಗೊಳಿಸಿದ್ದಲ್ಲಿ, ಉತ್ತಮ ರಸ್ತೆ ನಿರ್ಮಾಣಕ್ಕೆ ಅವಕಾಶ ದೊರೆಯುತ್ತದೆ~ ಎಂದರು.

`ರಾಜ್ಯದ ಹೆದ್ದಾರಿ ಪ್ರಾಧಿಕಾರದ ನಿಯಮವಾಳಿ ಪ್ರಕಾರ, ರಸ್ತೆ ಮಧ್ಯಭಾಗದಿಂದ 11 ಮೀಟರ್‌ಗಳಷ್ಟು ರಸ್ತೆ ವಿಸ್ತಾರವಾಗಿರಬೇಕು. ಎರಡೂ ರಸ್ತೆಗಳಲ್ಲಿ ಮಳಿಗೆದಾರರು 6.5 ಮೀಟರ್‌ನಷ್ಟು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಒತ್ತುವರಿ ತೆರವುಗೊಳಿಸಿದ್ದಲ್ಲಿ, ಪರಿಹಾರ ಬೇಕೆಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಕಟ್ಟಡಗಳನ್ನು ನಿರ್ಮಿಸುವ ಮೂಲಕ ರಸ್ತೆ ಒತ್ತುವರಿ ಮಾಡಿಕೊಂಡಿರುವ ಮಳಿಗೆದಾರರ ಪಟ್ಟಿ ಸಿದ್ಧಪಡಿಸಲಾಗುವುದು. ಒತ್ತುವರಿ ತೆರವುಗೊಳಿಸುವಂತೆ ಅವರಿಗೆ ನೋಟಿಸ್ ಹೊರಡಿಸಲಾಗುವುದು. ಬಳಿಕ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು~ ಎಂದು ಅವರು ತಿಳಿಸಿದರು.

ಪುರಸಭೆ ಸದಸ್ಯ ಗೋಪಿ ಮಾತನಾಡಿ, `ಪುರಸಭೆ ವತಿಯಿಂದ ನಿರ್ಮಿಸಲಾಗಿರುವ ನೂತನ ತರಕಾರಿ ಮಾರಾಟ ವಾಣಿಜ್ಯ ಕಟ್ಟಡ ಸಂಕೀರ್ಣವನ್ನು ಅರ್ಹರಿಗೆ ನೀಡಬೇಕು. ನೂತನ ಮಳಿಗೆಗಳನ್ನು ಅರ್ಹ ವ್ಯಾಪಾರಸ್ಥರಿಗೆ ನೀಡಲಾಗುವುದು. ಹರಾಜು ಪ್ರಕ್ರಿಯೆ ನಡೆಸಲಾಗುವುದು~ ಎಂದರು.

ಮತ್ತೊಬ್ಬ ಸದಸ್ಯ ರಫೀಕ್ ಮಾತನಾಡಿ, `ಹಂದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಸರ ಶುಚಿಯಾಗಿಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ. ಜನರ ಆರೋಗ್ಯ ಕಾಪಾಡಲು ಆದ್ಯತೆ ಕೊಡಬೇಕು~ ಎಂದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ತಹಶೀಲ್ದಾರ್ ಡಾ. ಬಿ.ಸುಧಾ, ಪುರಸಭೆ ಅಧ್ಯಕ್ಷೆ ಪ್ರಮೀಳಾ ಬಾಲಾಜಿ, ಉಪಾಧ್ಯಕ್ಷ ವಿ.ರಮೇಶ್, ಸದಸ್ಯರಾದ ರಾಧಾಕೃಷ್ಣ ಗುಪ್ತ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.