ADVERTISEMENT

ರೋಗಿಗಳನ್ನು ಆತ್ಮೀಯತೆಯಿಂದ ಕಾಣಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:52 IST
Last Updated 20 ಸೆಪ್ಟೆಂಬರ್ 2013, 8:52 IST

ಚಿಕ್ಕಬಳ್ಳಾಪುರ: ಉತ್ತಮ ಚಿಕಿತ್ಸೆಯ ನಿರೀಕ್ಷೆಯಲ್ಲಿ ಬರುವ ರೋಗಿಗಳಿಗೆ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಆತ್ಮೀಯತೆಯಿಂದ ಕಾಣಬೇಕು. ಎಷ್ಟೇ ದುಬಾರಿ ಔಷಧಿ ನೀಡಿದರೂ ಪರಿ­ಹಾರ ಕಾಣದ ಕೆಲ ದೈಹಿಕ ಮತ್ತು ಮಾನ­ಸಿಕ ಸಮಸ್ಯೆಗಳು ಪ್ರೀತಿ ಮತ್ತು ವಿಶ್ವಾಸದಿಂದ ನಿವಾರಣೆಗೊಳ್ಳುತ್ತವೆ. ಇದನ್ನರಿತು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯ­ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಗುರು­ವಾರ ರೋಗಿಗಳನ್ನು ಮತ್ತು ಸಂಬಂಧಿಕ­ರನ್ನು ಭೇಟಿಯಾದ ಬಳಿಕ ಆಸ್ಪತ್ರೆಯ ಸರ್ಜನ್‌, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದ ಅವರು, ರೋಗಿಗಳಿಗೆ ಔಷಧಿಯ ಜೊತೆ ಪ್ರೀತಿ, ವಿಶ್ವಾಸವೂ ತುಂಬಾ ಮುಖ್ಯ. ಹಲವಾರು ಜಂಜಾಟಗಳಿಗೆ  ತುತ್ತಾಗಿ ಅನಾರೋಗ್ಯಗೊಂಡು ಆಸ್ಪತ್ರೆಗೆ ಬರುವ ಅವರಲ್ಲಿ ನೆಮ್ಮದಿ ಭಾವ ಮೂಡಿಸ­ಬೇಕು. ಸಮಸ್ಯೆಗಳು ಕೊನೆಯಾಗುತ್ತವೆ ಎಂಬ ವಿಶ್ವಾಸ ಅವರಲ್ಲಿ ಬರಬೇಕು’ ಎಂದರು.

ಆಸ್ಪತ್ರೆಯಲ್ಲಿ ಸ್ವಚ್ಛತೆ, ಬದ್ಧತೆ ಮತ್ತು ಔಷಧಿ ತುಂಬಾ ಮುಖ್ಯವಾಗಿದ್ದು, ಇವು ಮೂರನ್ನು ಸದಾ ಕಾಯ್ದುಕೊಳ್ಳಬೇಕು. ಇವು ಮೂರು ವಿಭಾಗಗಳಲ್ಲಿ ಯಾವು­ದಾ­ದರೂ  ಒಂದು ಕೊರತೆಯಾದಲ್ಲಿ, ರೋಗಿಗಳಿಗೆ ಆರೈಕೆ ಮಾಡಲಾಗು­ವುದಿಲ್ಲ. ಮಲಿನ ವಾತಾವರಣದಿಂದಾಗಿ ರೋಗಿಗಳು ಇನ್ನಷ್ಟು ಅನಾರೋಗ್ಯ­ಕ್ಕೀಡಾ­ದರೆ, ಬದ್ಧತೆಯ ಕೊರತೆ­ಯಿಂದಾಗಿ ಉತ್ತಮ ಚಿಕಿತ್ಸೆ ಸಿಗುವುದಿಲ್ಲ. ಔಷಧಿಯಿಲ್ಲವೆಂದರೆ ರೋಗಿಗಳು ಸಹ ಆಸ್ಪತ್ರೆಯತ್ತ ಬರಲು ಇಚ್ಛಿಸುವುದಿಲ್ಲ ಎಂದು ಅವರು ತಿಳಿಸಿದರು.

ಬಳಿಕ ಆಸ್ಪತ್ರೆಯಲ್ಲಿನ ಸೌಕರ್ಯಗಳ ಕೊರತೆ ಮತ್ತು ಅವ್ಯವಸ್ಥೆಗೆ ಸಂಬಂಧಿಸಿ­ದಂತೆ ಅಸಮಾಧಾನ ವ್ಯಕ್ತಪಡಿಸಿದ ಅವರು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಲ್ಲಿ ಸೇವಾ ಬದ್ಧತೆ ಮತ್ತು ಚಾಕಚಕ್ಯತೆಯಿರದ ಕಾರಣದಿಂದಲೇ ಆಸ್ಪತ್ರೆಗೆ ಇಂತಹ ದುಸ್ಥಿತಿ ಬಂದೊದ­ಗಿದೆ. ಆಸ್ಪತ್ರೆಯಲ್ಲಿ ಎಲ್ಲಿಯೂ ಸ್ವಚ್ಛತೆ ಕಾಪಾಡಲಾಗಿಲ್ಲ. ಎಲ್ಲಿ ಬೇಕೆಂದಲ್ಲಿ, ಎಲೆ ಅಡಿಕೆ ಉಗುಳಿದ್ದರಿಂದ ಆಸ್ಪತ್ರೆಯ ಗೋಡೆಗಳು ಗಲೀಜಾದಂತೆ ಕಂಡು ಬರುತ್ತವೆ. ಸ್ವಚ್ಛತಾ ನಿರ್ವಹಣಾ ಕಾರ್ಯವನ್ನು ಯಾರೂ ಸಮರ್ಪಕ­ವಾಗಿ ನಿರ್ವಹಿಸುವುದಿಲ್ಲವೊ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗು­ವುದು ಎಂದು ಎಚ್ಚರಿಕೆ ನೀಡಿದರು.

ಸೌಕರ್ಯಗಳ ಕೊರತೆಯಿದೆ ಎಂದು ದಿನಗಳನ್ನು ದೂಡುವುದರ ಬದಲು ಆಸ್ಪತ್ರೆಯ ಮುಖ್ಯಸ್ಥರು ಮತ್ತು ಸಿಬ್ಬಂದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕು. ಆಸ್ಪತ್ರೆಗೆ ಯಾವ್ಯಾವ ಸೌಲಭ್ಯಗಳ ಅಗತ್ಯತೆ­ಯಿದೆಯೋ, ಅವುಗಳಿಗೆ ಸಂಬಂಧಿಸಿ­ದಂತೆ ಪ್ರಸ್ತಾವನೆ ಸಲ್ಲಿಸಬೇಕು. ಅದ್ಯಾವುದನ್ನೂ ಮಾಡದೇ ಯಥಾಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸು­ವುದು ಮುಂದುವರೆಸಿದ್ದಲ್ಲಿ, ಸಮಸ್ಯೆ ಹೇಗೆ ತಾನೇ ಪರಿಹಾರಗೊಳ್ಳುತ್ತದೆ ಎಂದು ಅವರು ಪ್ರಶ್ನಿಸಿದರು.

ಜನರ ಆರೋಗ್ಯ ರಕ್ಷಣೆಗಾಗಿ ಮತ್ತು ಆಸ್ಪತ್ರೆಯ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಎಷ್ಟೆಲ್ಲ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಲಭ್ಯವಿರುವ ಅನುದಾನ­ವನ್ನು ಸದ್ಬಳಕೆ ಮಾಡಿಕೊಂಡಲ್ಲಿ, ಆಸ್ಪತ್ರೆ­ಯಲ್ಲಿನ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಿ­ಕೊಳ್ಳಬಹುದು. ಆಸ್ಪತ್ರೆಗೆ ಸಂಬಂಧಿಸಿದಂತೆ ಪದೇ ಪದೇ ಅಹವಾಲು­ಗಳನ್ನು ಸಲ್ಲಿಸುವಂತಹ ಪರಿಸ್ಥಿತಿ ಇರುವುದಿಲ್ಲ ಎಂದು ಅವರು ತಿಳಿಸಿದರು. ಜಿಲ್ಲಾ ಸರ್ಜನ್‌ ಡಾ. ಮಂಜುಳಾ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.