ADVERTISEMENT

ಲೋಕಸಭೆ ಚುನಾವಣೆಗೆ ತಾಲೀಮು?

*ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ *ವರ್ಷಗಳ ನಿರೀಕ್ಷೆಗೆ ಬಿತ್ತು ತೆರೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 6:19 IST
Last Updated 20 ಮಾರ್ಚ್ 2014, 6:19 IST

ಚಿಕ್ಕಬಳ್ಳಾಪುರ: ಕಳೆದೊಂದು ವರ್ಷದಿಂದ ಬಾಕಿ ಉಳಿದಿದ್ದ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾ­ಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಶಿಡ್ಲಘಟ್ಟ ಪುರಸಭೆ ಚುನಾವಣೆ ಈಗಾಗಲೇ ನಡೆದಿದ್ದು, ಚಿಕ್ಕಬಳ್ಳಾಪುರ, ಚಿಂತಾ­ಮಣಿ, ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ ಆಯ್ಕೆ ನಡೆಯಿತು. ಐದು ಕಡೆಗಳಲ್ಲೂ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ನಗರಸಭೆ ನೂತನ ಅಧ್ಯಕ್ಷೆಯಾಗಿ 29ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಎಸ್‌.ಲೀಲಾವತಿ ಮತ್ತು ಉಪಾಧ್ಯಕ್ಷೆಯಾಗಿ ಪಕ್ಷೇತರ ಸದಸ್ಯೆ ಜಬೀನ್ ತಾಜ್‌ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಬಿ) ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ–ಮಹಿಳೆಗೆ ಮೀಸ­ಲಾಗಿತ್ತು. ನಗರಸಭೆಯಲ್ಲಿ ಕಾಂಗ್ರೆಸ್‌–9, ಜೆಡಿಎಸ್‌–10, ಪಕ್ಷೇತರರು–11 ಮತ್ತು ಬಿಎಸ್‌ಆರ್ ಕಾಂಗ್ರೆಸ್–1 ಬಲ ಹೊಂದಿದ್ದು, ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು.

ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಚುನಾವಣೆ ಪ್ರಕ್ರಿಯೆ ಪೂರ್ಣ­ಗೊಳಿಸಿದ ಬಳಿಕ ಚುನಾವಣಾಧಿಕಾರಿ ಕೆ.ಟಿ.ಶಾಂತಲಾ ಫಲಿತಾಂಶ ಘೋಷಿಸಿ­ದರು.

ಮಧ್ಯಾಹ್ನ 12.50ರ ಸುಮಾರಿಗೆ 5 ರಿಂದ 6 ಕಾರುಗಳಲ್ಲಿ ಬಂದ ಕಾಂಗ್ರೆಸ್‌ನ ಸದಸ್ಯರು ಮತ್ತು ಪಕ್ಷೇತರ ಸದಸ್ಯರು ಶಾಸಕ ಡಾ. ಕೆ.ಸುಧಾ­ಕರ್‌ ನೇತೃತ್ವದಲ್ಲಿ ನಗರಸಭೆ ಸಭಾಂಗಣದೊಳಗೆ ಪ್ರವೇಶಿಸಿದರೆ, ಜೆಡಿಎಸ್‌ನ ಸದಸ್ಯರು ಕೆಲ ಹೊತ್ತಿನ ನಂತರ ಸಭಾಂಗಣಕ್ಕೆ ಬಂದರು.

ಅಧ್ಯಕ್ಷ ಸ್ಥಾನಕ್ಕೆ ಎಸ್‌.ಲೀಲಾವತಿ, 1ನೇ ವಾರ್ಡ್‌ನ ಜೆಡಿಎಸ್‌ ಸದಸ್ಯ ಬಿ.ಎಲ್‌.ಕೇಶವ್‌ಕುಮಾರ್‌ ಮತ್ತು 8ನೇ ವಾರ್ಡ್‌ನ ಜೆಡಿಎಸ್‌ ಸದಸ್ಯ ಪಿ.ಶ್ರೀನಿವಾಸ್‌ ಆರಂಭದಲ್ಲಿ ನಾಮಪತ್ರ ಸಲ್ಲಿಸಿದರು. ಆದರೆ ಕೆಲ ಹೊತ್ತಿನ ನಂತರ ಪಿ.ಶ್ರೀನಿವಾಸ್‌ ನಾಮಪತ್ರ ಹಿಂಪಡೆದರು. ನಂತರ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು.

ಎಸ್‌.ಲೀಲಾವತಿ 22 ಮತ ಗಳಿಸಿ ವಿಜೇತರಾದರೆ, ಬಿ.ಎಲ್‌.ಕೇಶವ­ಕುಮಾರ್‌ 10 ಮತ ಗಳಿಸಿ ಪರಾಭವಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಜಬೀನ್‌ ತಾಜ್‌ ಮತ್ತು 16ನೇ ವಾರ್ಡ್‌ನ ಜೆಡಿಎಸ್‌ ಸದಸ್ಯೆ ನಾಗರತ್ನಾ ನಾಮಪತ್ರ ಸಲ್ಲಿಸಿದರು. ಜಬೀನ್‌ ತಾಜ್‌ 22 ಮತ ಗಳಿಸಿ ವಿಜೇತರಾದರೆ, ನಾಗರತ್ನ 10 ಮತ ಪಡೆದು ಪರಾಭವ­ಗೊಂಡರು. ಚುನಾವಣೆಯಲ್ಲಿ 31 ಸದಸ್ಯರು, ಶಾಸಕ ಡಾ. ಕೆ.ಸುಧಾಕರ್‌ ಕೂಡ ಮತ ಚಲಾಯಿಸಿದರು.

ಫಲಿತಾಂಶ ಘೋಷಣೆಯಾದ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಬೆಂಬಲಿಗರು ಶಾಸಕರಿಗೆ, ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಗೆ ಹೂ­ಮಾಲೆ ಹಾಕಿ ಶುಭ ಹಾರೈಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT