ADVERTISEMENT

ವಾಮಾಚಾರ: ಬಾಲಕಿ ಬಲಿಗೆ ವಿಫಲ ಯತ್ನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 7:15 IST
Last Updated 5 ಡಿಸೆಂಬರ್ 2013, 7:15 IST

ಚಿಂತಾಮಣಿ: ನಿಧಿ ಆಸೆಗಾಗಿ ವಾಮಾಚಾರ ನಡೆಸಿ, ಬಾಲಕಿಯೊಬ್ಬಳನ್ನು ಬಲಿಕೊಡುವ ವಿಫಲ ಯತ್ನವೊಂದು ತಾಲ್ಲೂಕಿನ ಯರ್ರೈಗಾರಹಳ್ಳಿಯ ಸಮೀಪ ಬುಧವಾರ ನಡೆದಿದೆ.

ಮಹಮದ್‌ ಬಾಷಾ ಎಂಬ ಮಾಂತ್ರಿಕ ನಗರದ ತಪತೇಶ್ವರ ಕಾಲೊನಿಯ ಸುಮಾರು 7 ವರ್ಷದ ಬಾಲಕಿಯನ್ನು ಪೂಜೆ ಮಾಡಿಸುವ ನೆಪದಲ್ಲಿ ಆಕೆಯ ತಾತನ ಸಹಾಯ­ದಿಂದ ಕರೆದುಕೊಂಡು ಹೋಗಿದ್ದ.

ಮಾಂತ್ರಿಕ ಬಾಷಾನ ಕ್ಷುದ್ರಪೂಜೆ ಹಾಗೂ ನಡವಳಿಕೆಯಿಂದ ಅನು­ಮಾನ­ಗೊಂಡ ಬಾಲಕಿ ಆತನಿಂದ ತಪ್ಪಿಸಿ­ಕೊಂಡು ಬಂದು ಪೋಷಕರಿಗೆ ತಿಳಿಸಿದ್ದಾಳೆ.

ಪೋಷಕರು ಮಾಂತ್ರಿಕ ಬಾಷಾನನ್ನು ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಿನ್ನೆಲೆ: ಯರ್ರೈಗಾರಹಳ್ಳಿಯ ಬಳಿ ನಿಧಿ ಇದೆ. ಹೊರತೆಗೆಯಬೇಕಾದರೆ ನರಬಲಿ ಕೊಡಬೇಕು ಎಂದು ಬಾಷಾ ಗ್ರಾಮದ ವೆಂಕಟರವಣಪ್ಪ ಎಂಬುವರಿಗೆ ತಿಳಿಸಿದ್ದಾನೆ.

ನಿಧಿ ಆಸೆಯಿಂದ ವೆಂಕಟರವಣಪ್ಪ ಸ್ವಂತ ಮೊಮ್ಮಗಳನ್ನೇ ಬಲಿ ಕೊಡಲು ಯೋಜನೆ ರೂಪಿಸಿದ್ದಾರೆ. ಸೋಮವಾರ ನಗರಕ್ಕೆ ಬಂದು ಮೊಮ್ಮಗಳು ಅನಿಕೇತನಳನ್ನು(7) ಕರೆದುಕೊಂಡು ಹೋಗಿದ್ದಾರೆ.

ಮಂಗಳವಾರ ಕ್ಷುದ್ರಪೂಜೆ ಮತ್ತಿ­ತರ ವಾಮಾಚಾರಗಳನ್ನು ಮಾಡು­ತ್ತಿದ್ದದ್ದನ್ನು ಕಂಡು ಹಾಗೂ ಅವರ ಮಾತುಗಳಿಂದ ಬಾಲಕಿಗೆ ಅನುಮಾನ ಬಂದು, ತಪ್ಪಿಸಿಕೊಂಡಿದ್ದಾಳೆ.

ನಂತರ ದಾರಿಹೋಕರ ಸಹಾಯ­ದಿಂದ ಮನೆಗೆ ಬಂದು ಪೋಷಕರಿಗೆ ತಿಳಿಸಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.