ADVERTISEMENT

ವಿದ್ಯಾರ್ಥಿನಿ ಅಪಹರಣಕ್ಕೆ ವಿಫಲ ಯತ್ನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 9:45 IST
Last Updated 11 ನವೆಂಬರ್ 2012, 9:45 IST

ಚಿಂತಾಮಣಿ: ಕಾಲೇಜು ವಿದ್ಯಾರ್ಥಿನಿ ಅಪಹರಣಕ್ಕೆ ವಿಫಲ ಯತ್ನ ನಡೆಸಿದ ಘಟನೆ ಶನಿವಾರ ನಗರದ ಮಹಿಳಾ ಕಾಲೇಜಿನ ಬಳಿ ನಡೆದಿದೆ. ನಗರದ ಮಹಿಳಾ ಪದವಿ ಕಾಲೇಜು ಗೇಟ್ ಬಳಿ ಅಪಹರಣಕಾರರಿಂದ ತಪ್ಪಿಸಿಕೊಂಡ ವಿದ್ಯಾರ್ಥಿನಿ ಸೌಂದರ್ಯ, ನಗರಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ., ವ್ಯಾಸಂಗ ಮಾಡುತ್ತಿರುವ ಸೌಂದರ್ಯ ಬೆಳಿಗ್ಗೆ ತನ್ನ ಸ್ವಗ್ರಾಮ ತುಳುವನೂರಿನಿಂದ ಕಾಲೇಜಿಗೆ ಬರುತ್ತಿದ್ದಾಗ ಅದೇ ಗ್ರಾಮದ ಶ್ರಿಧರರೆಡ್ಡಿ ಅಪಹರಣದ ಯತ್ನ ನಡೆಸಿದ್ದಾನೆ.

ಕಾಲೇಜು ಗೇಟ್ ಬಳಿ ತೆರಳುತ್ತಿದ್ದ ವೇಳೆ ಶ್ರಿಧರರೆಡ್ಡಿ ಮತ್ತು ಸಹಚರರು ಹಿಂದಿನಿಂದ ಕಾರಿನಲ್ಲಿ ಬಂದು ಏಕಾಏಕಿ ಹತ್ತಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ವಿದ್ಯಾರ್ಥಿನಿ ತಕ್ಷಣ ಕೂಗಾಡಿದ್ದಾಳೆ. ಕೂಗಾಟ ಕೇಳಿ ಸುತ್ತಮುತ್ತಲಿದ್ದ ಸಾರ್ವಜನಿಕರು ಕಾರಿನ ಹತ್ತಿರಕ್ಕೆ ಓಡಿ ಬಂದಿದ್ದಾರೆ.

ಸಾರ್ವಜನಿಕರನ್ನು ಕಂಡ  ಶ್ರಿಧರರೆಡ್ಡಿ ಮತ್ತು ಸಹಚರರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಚಾಲಕ ರಮೇಶ್ ಎಂಬುವವನನ್ನು ಹಿಡಿಯುವಲ್ಲಿ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. ಕಾರನ್ನು, ಚಾಲಕ ರಮೇಶನನ್ನು ನಗರ ಠಾಣೆಗೆ ಒಪ್ಪಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ರಮೇಶನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಇತರರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಘಟನೆಯ ಹಿನ್ನೆಲೆ:
ಶ್ರಿಧರರೆಡ್ಡಿ ತನ್ನನ್ನು ಪ್ರೀತಿಸುವಂತೆ ಹಿಂದೆ ಬಿದ್ದು ಪೀಡಿಸುತ್ತಿದ್ದ. ಈ ವಿಷಯವನ್ನು ಪೋಷಕರಿಗೂ ಸಹ ತಿಳಿಸಿದ್ದು, ಪಂಚಾಯಿತಿ ನಡೆಸಿ ಆತನಿಗೆ ಬುದ್ಧಿವಾದ ಹೇಳಿದ್ದರು. ಆದರೂ ಚಾಳಿ ಬಿಡದೆ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.