ADVERTISEMENT

ವಿಪ್ರ ಮಹಾಸಭೆ ಚಟುವಟಿಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 9:28 IST
Last Updated 9 ಏಪ್ರಿಲ್ 2013, 9:28 IST

ಶಿಡ್ಲಘಟ್ಟ: ಪ್ರತಿ ಜಿಲ್ಲೆಯಲ್ಲೂ ವಿಪ್ರ ಸಹಕಾರ ಬ್ಯಾಂಕ್ ಮತ್ತು ವಿಪ್ರ ವಧು-ವರರ ಅನ್ವೇಷಣಾ ಕೇಂದ್ರಗಳನ್ನು ಆರಂಭಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ರಾಜ್ಯ ಬ್ರಾಹ್ಮಣ ಮಹಾಸಭೆ ಸಂಚಾಲಕ ಸುರೇಶ್ ತಿಳಿಸಿದರು.

ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋಮವಾರ ನಡೆದ ಜಿಲ್ಲಾ ಬ್ರಾಹ್ಮಣ ಮಹಾಸಭೆಯ ಪ್ರಥಮ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, `ವಿಪ್ರ ಸಂಘದ ವತಿಯಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು' ಎಂದರು.

`ರಾಜ್ಯ ಬ್ರಾಹ್ಮಣ ಮಹಾಸಭೆಯಿಂದ ಆರೋಗ್ಯ ಸಹಾಯನಿಧಿ, ಅರ್ಚಕರಿಗೆ ಸಹಾಯನಿಧಿ ಮತ್ತು ವಿಧವಾ ವೇತನಗಳನ್ನು ನೀಡಲು ತೀರ್ಮಾನಿಸಲಾಗಿದ್ದು, ಅರ್ಹರನ್ನು ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಹೆಚ್ಚಿನ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು' ಎಂದು ಅವರು ತಿಳಿಸಿದರು.

ಜಿಲ್ಲಾ ಮಹಾಸಭೆಯ ಖಜಾಂಚಿ ಎಸ್.ವಿ. ನಾಗರಾಜರಾವ್ ರಾವ್ ಮಾತನಾಡಿ, `ಮಹಾಸಭೆ ಚಟುವಟಿಕೆಗಳ ಮೂಲಕ ಅರ್ಹರಿಗೆ ನೆರವಾಗಬೇಕು. ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಬಹುದು' ಎಂದರು.

ಬ್ರಾಹ್ಮಣ ಮಹಾಸಭೆಯ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಂ. ವಾಸುದೇವರಾವ್, ತಾಲ್ಲೂಕು ಬ್ರಾಹ್ಮಣ ಮಹಾಸಭೆ ಗೌರವಾಧ್ಯಕ್ಷ ಎ. ಎಸ್. ಶಂಕರರಾವ್, ಕಾರ್ಯಾಧ್ಯಕ್ಷ ಎ.ಎಸ್.ರವಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಕೃಷ್ಣ, ವಲಯ ಸಂಘಟನಾ ಕಾರ್ಯದರ್ಶಿ ಎನ್. ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.