ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರಿಗೆ ಮನವಿ ಸಲ್ಲಿಸಿದ ರೈತ ಸಂಘದ ಪದಾಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 11:03 IST
Last Updated 12 ಜೂನ್ 2018, 11:03 IST

ಚಿಕ್ಕಬಳ್ಳಾಪುರ: ನಗರಕ್ಕೆ ಸೋಮವಾರ ಭೇಟಿ ನೀಡಿದ ನೂತನ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರಿಗೆ ರೈತಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಹವಾಲು ಸಲ್ಲಿಸಿದರು.

ಜಿಲ್ಲಾಡಳಿತ ಭವನದ ಎದುರು ಸಚಿವರನ್ನು ಸನ್ಮಾನಿಸಿದ ಪದಾಧಿಕಾರಿಗಳು ಇದೇ ವೇಳೆ ಶಿವಶಂಕರರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಲಕ್ಷ್ಮೀನಾರಾಯಣ ರೆಡ್ಡಿ, ‘ಪ್ರತ್ಯೇಕ ಕೃಷಿ ನೀತಿ ರೂಪಿಸಿ ಖುಷ್ಕಿ ಪ್ರದೇಶಕ್ಕೆ ಸಕಲ ವ್ಯವಸ್ಥೆ ಕಲ್ಪಿಸಬೇಕು. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡಬೇಕು. ಬೋರ್‌ವೆಲ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಹಿಂದಿನ ಸರ್ಕಾರ ರಚಿಸಿರುವ ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಿ ಆಯೋಗವನ್ನು ಮುಂದುವರಿಸಬೇಕು. ಆ ಮೂಲಕ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಹಳ್ಳಿಯ ನೀರಾವರಿ ಅಚ್ಚುಕಟ್ಟುಗಳ ರಸ್ತೆ ಮತ್ತು ಹೊಲಕ್ಕೆ ಹೋಗುವ ರಸ್ತೆಗಳ ನಿರ್ಮಾಣಕ್ಕಾಗಿ ವಿಶೇಷ ಯೋಜನೆ ರೂಪಿಸಬೇಕು. ಜಮೀನುಗಳ ದುರಸ್ತಿ ಮಾಡಲು ಕಾಲಮಿತಿ ಕಾರ್ಯಕ್ರಮ ಜಾರಿಗೆ ತರಬೇಕು. ತುರ್ತು ಅವಶ್ಯಕತೆ ಕಾರಣಕ್ಕೆ ಜಮೀನು ಮಾರಾಟ ಮಾಡುವಂತಹ ರೈತರಿಗೆ ನೀಲನಕ್ಷೆ ನೀಡಲು ಯಾವುದೇ ನಿರ್ಬಂಧ ಇಲ್ಲದೆ ದುರಸ್ತಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಹೇಳಿದರು.

‘ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಸಲು ಹೆಚ್ಚು ಒತ್ತು ನೀಡಬೇಕು. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ರೇಷ್ಮೆ ವಿಷಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರವೇಶದಲ್ಲಿ ರೈತ ಮಕ್ಕಳಿಗೆ ಇರುವ ಮೀಸಲಾತಿ ಸಂಖ್ಯೆಯನ್ನು ಶೇ 60ಕ್ಕೆ ಏರಿಸಬೇಕು. ಜಿಲ್ಲೆಯ ಕೆರೆಗಳಲ್ಲಿರುವ ಜಾಲಿ ಮರ ತೆಗೆಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಪರಿಹಾರ ಹಣ ಬಾಕಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಿಸಬೇಕು. ಶಿಡ್ಲಘಟ್ಟ ಮತ್ತು ಗುಡಿಬಂಡೆಯಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸಬೇಕು ಮತ್ತು ರೈತ ಭವನ ನಿರ್ಮಿಸಬೇಕು’ ಎಂದು ಮನವಿ ಸಲ್ಲಿಸಿದರು.

‘ರೇಷ್ಮೆ ಇಲಾಖೆಯಲ್ಲಿ ಎರಡು ವರ್ಷದಿಂದ ಹನಿ ನೀರಾವರಿ ಸಹಾಯ ಧನ ಬಾಕಿ ಉಳಿಸಿ ಕೊಳ್ಳಲಾಗಿದೆ. ಅದನ್ನು ಕೂಡಲೇ ಬಿಡುಗಡೆಗೆ ಕ್ರಮ ವಹಿಸಬೇಕು. ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ರೈತರಿಗೆ ದಿನದಲ್ಲಿ 10 ಗಂಟೆ ಕಾಲ ತ್ರೀಫೇಸ್ ವಿದ್ಯುತ್ ಪೂರೈಸಬೇಕು’ ಎಂದು ತಿಳಿಸಿದರು.

‘ಸರ್ಕಾರಿ ಭೂಮಿಗಳ ಒತ್ತುವರಿ ತೆರವಿಗೆ ಕ್ರಮವಹಿಸಬೇಕು. ಕೃಷಿ ಹೊಂಡಗಳ ತಾಡಪತ್ರೆಗಾಗಿ ರೈತರು ಹಣ ಕಟ್ಟಿ ಮೂರು ತಿಂಗಳಾದರೂ ಪೂರೈಕೆ ಮಾಡಿಲ್ಲ ಎಂದು ಆರೋಪಿಸಿದರು.

ಮುಖಂಡರಾದ ರೆಡ್ಡಪ್ಪ, ಹುಸೇನ್ ಸಾಬ್, ಕದರೇಗೌಡ, ರವಿಪ್ರಕಾಶ್, ವೆಂಕಟಸ್ವಾಮಿ, ಕೆ. ನಾರಾಯಣಸ್ವಾಮಿ, ಪೆದ್ದಪ್ಪಯ್ಯ, ವೆಂಕಟರಮಣಪ್ಪ, ಕಮಲಮ್ಮ, ಪದ್ಮಮ್ಮ ಹಾಜರಿದ್ದರು.

ಮಳೆ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ರಾಜಕಾಲುವೆಗಳು ಮತ್ತು ಕೆರೆಗಳ ಹೂಳು ತೆಗೆಸಬೇಕು. ಕೆರೆ ಒತ್ತುವರಿಯನ್ನು ತ್ವರಿತಗತಿಯಲ್ಲಿ ತೆರವುಗೊಳಿಸಿ ಸಂರಕ್ಷಣೆ ಮಾಡಬೇಕು
- ಟಿ.ಲಕ್ಷ್ಮೀನಾರಾಯಣ ರೆಡ್ಡಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.