ADVERTISEMENT

ವೈದ್ಯರ ನಿಯೋಜನೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 6:40 IST
Last Updated 11 ಅಕ್ಟೋಬರ್ 2011, 6:40 IST

ಬಾಗೇಪಲ್ಲಿ: ತಾಲ್ಲೂಕಿನ ಆರೋಗ್ಯ ಕೇಂದ್ರಗಳು ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಮೂಲಸೌಕರ್ಯಗಳ ಕೊರತೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ನೂರಾರು ಕಾರ್ಯಕರ್ತರು ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ಸೋಮವಾರ ಪ್ರತಿಭಟನಾ ಧರಣಿ ನಡೆಸಿದರು.

ಸರ್ಕಾರಿ ಆಸ್ಪತ್ರೆಗಳ ಸ್ಥಿತಿ-ಗತಿ ಸುಧಾರಿಸಲು ಸರ್ಕಾರ ಗಮನ ಹರಿಸುತ್ತಿಲ್ಲ. ವೈದ್ಯರು, ಸಿಬ್ಬಂದಿ ನೇಮಿಸುತ್ತಿಲ್ಲ. ಮೂಲಭೂತ ಸೌಕರ್ಯ ಒದಗಿಸುವತ್ತ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಜಿ.ಎಲ್. ರಾಮಾಂಜನೇಯಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತೆ ಇಲ್ಲದೇ ಅನೇಕ ಮಂದಿ ರೋಗಪೀಡಿತರಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಪ್ರತಿದಿನ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆರಳೇಣಿಕೆ ಯಷ್ಟು ಮಂದಿ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಡಿಯಲು ನೀರು, ಶೌಚಾಲದ ವ್ಯವಸ್ಥೆ ಇಲ್ಲ. ಒಳರೋಗಿಗಳಿಗೆ ಹಾಸಿಗೆಗಳಿಲ್ಲದೆ ನೆಲದ ಮೇಲೆ ಮಲಗಬೇಕಾದ ಅನಿವಾರ್ಯತೆ ಇದೆ ಎಂದು ಆರೋಪಿಸಿದರು.

ಆಸ್ಪತ್ರೆಗಳಿಗೆ ಅಗತ್ಯವಾದ ವೈದ್ಯರನ್ನು ನಿಯೋಜಿಸಿ, ವೈದ್ಯರು ಕೇಂದ್ರಸ್ಥಾನದಲ್ಲಿ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕು. ಅಂಬುಲೆನ್ಸ್ ರೋಗಿಗಳ ಬಳಕೆ ಬರುವಂತೆ ಸುಸ್ಥಿಯಲ್ಲಿರಿಸಬೇಕು. ರಕ್ತನಿಧಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿ ಡಾ.ಭಕ್ತವತ್ಸಲಂ ಆಗಮಸಿ ಪ್ರತಿಭಟನಾಕಾರೊಂದಿಗೆ ತುರ್ತು ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ವೈದ್ಯರು ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಕ್ರಮ ಕೈಗೊಳ್ಳುತ್ತೇನೆ. ಆದರೆ, ವೈದ್ಯ ಸಿಬ್ಬಂದಿ ನೇಮಕ ಪ್ರಕಿಯೆ ಸರ್ಕಾರದ ಹಂತದಲ್ಲಿ ನಡೆಯಬೇಕು. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಧರಣಿ ಹಿಂಪಡೆದರು. 

 ಜಿಲ್ಲಾ ಸಂಘಟನಾ ಸಂಚಾಲಕರಾದ ಜಿ.ಎನ್.ಆಂಜಿನಪ್ಪ, ಎಚ್.ಎನ್. ಸುನಂದ ಕುಮಾರ್, ತಾಲ್ಲೂಕು ಸಂಚಾಲಕ ಬಿ.ನರಸಿಂಹಪ್ಪ, ಮುಖಂಡ ರಾದ ವೆಂಕಟರಮಣ, ಎಚ್.ತಿಪ್ಪಣ್ಣ, ಜಿ.ಎಸ್.ನರಸಿಂಹಪ್ಪ, ಸಿ.ವೈ. ಶ್ರೀನಿ ವಾಸ, ಮನೇರಿ ಶ್ರೀನಿವಾಸ, ನಾಗ, ರಮೇಶ, ಶ್ರೀನಿವಾಸ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.