ADVERTISEMENT

ಶಾಶ್ವತ ನೀರಾವರಿ: ಜನಪ್ರತಿನಿಧಿಗಳ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 8:41 IST
Last Updated 5 ಡಿಸೆಂಬರ್ 2012, 8:41 IST

ಚಿಂತಾಮಣಿ: ಬಿಜೆಪಿ ಸರ್ಕಾರವು ಕಳೆದ ನಾಲ್ಕೂವರೆ ವರ್ಷಗಳಿಂದ ಜಾಹೀರಾತುಗಳಿಗೆ ನೀಡಿರುವ ಕೋಟ್ಯಂತರ ರೂಪಾಯಿಗಳನ್ನು ನೀರಾವರಿ ಯೋಜನೆ ಅನುಷ್ಠಾನಕ್ಕೆ ಉಪಯೋಗಿಸಿಕೊಂಡಿದ್ದರೆ ಬರ ಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿಯನ್ನು ಒದಗಿಸಬಹುದಾಗಿತ್ತು ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಆನಂದ್‌ಕುಮಾರ್ ತಿಳಿಸಿದರು.

ತಾಲ್ಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿ ವತಿಯಿಂದ ಬರಪೀಡಿತ ಜಿಲ್ಲೆಗಳಿಗೆ ಡಾ.ಪರಮಶಿವಯ್ಯ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಚಿಂತಾಮಣಿಯಿಂದ ಚಿಕ್ಕಬಳ್ಳಾಪುರಕ್ಕೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಮಶಿವಯ್ಯನವರ ವರದಿಯನ್ನು ಕಳೆದ 10 ವರ್ಷಗಳಿಂದ ಕತ್ತಲೆ ಕೋಣೆಯಲ್ಲಿಟ್ಟು ಸರ್ಕಾರ ಅಧಿಕಾರ ನಡೆಸುತ್ತಿದೆ. ಬೆಂಗಳೂರು ಸೇರಿದಂತೆ ಭೂ ಅಭಿವೃದ್ಧಿಗಾಗಿ ಒಂದು ಎಕರೆಗೆ ಎರಡು ಲಕ್ಷಕ್ಕೂ ಹೆಚ್ಚು ತೆರಿಗೆಯನ್ನು ವಿಧಿಸಿ ಸಾವಿರಾರು ಎಕರೆಗಳಷ್ಟು ಭೂಮಿಯನ್ನು ಪರಿವರ್ತನೆ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿದೆ. ಈ ಹಣವನ್ನು ಅಂತರ್ಜಲ ವೃದ್ಧಿ ಹೆಸರಿನಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸುವ ನೆಪದಲ್ಲಿ ಸ್ವಾಹ ಮಾಡಿದ್ದು, ಅವುಗಳ ಲೆಕ್ಕ ನೀಡುವಂತೆ ಸಮಿತಿಯು ಆಗ್ರಹಿಸುತ್ತದೆ ಎಂದರು.

ಅಂತರ್ಜಲ ಮಟ್ಟವು ಭಾರಿ ಕುಸಿತದಿಂದ 1500ಕ್ಕೂ ಹೆಚ್ಚು ಅಡಿಗಳ ಆಳದಿಂದ ಸಿಗುವ ಫ್ಲೋರೈಡ್‌ಯುಕ್ತ ನೀರನ್ನು ಸೇವಿಸಿ ಅನಾರೋಗ್ಯ ಪೀಡಿತರಾಗಿ ನರಳುತ್ತಿದ್ದಾರೆ. ಇಂತಹ ಜ್ವಲಂತ ಸಮಸ್ಯೆಯನ್ನು ಎದುರಿಸುತ್ತಿರುವ ಜನತೆಗೆ ಶುದ್ಧ ಕುಡಿಯುವ ನೀರು ಕೊಡಲು ಸರ್ಕಾರವು  ಗಂಭೀರವಾಗಿ ಚಿಂತಿಸುತ್ತಿಲ್ಲ ಎಂದು ಆರೋಪಿಸಿದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಮತೇನಹಳ್ಳಿ ಲಕ್ಷ್ಮಣ್‌ಸಿಂಗ್ ಮಾತನಾಡಿ, ಶಾಶ್ವತ ನೀರಾವರಿಗಾಗಿ ಒತ್ತಾಯಿಸಿ ಬರಪೀಡಿತ ಜಿಲ್ಲೆಗಳ ಜನಪ್ರತಿನಿಧಿಗಳಾದ ಶಾಸಕರು ಮತ್ತು ಸಂಸದರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಒತ್ತಡ ಹೇರಬೇಕು. ಜನರನ್ನು  ದಿಕ್ಕು ತಪ್ಪಿಸುವ ರೀತಿಯಲ್ಲಿ ಎತ್ತಿನಹೊಳೆ, ನೇತ್ರಾವತಿ ತಿರುವು ಯೋಜನೆಗಳು ಅನುಷ್ಠಾನ ಎಂಬಿತ್ಯಾದಿ ಹೇಳಿಕೆಗಳನ್ನು ನೀಡುತ್ತಿರುವುದು ಸಲ್ಲದು ಎಂದರು.

ಹಿರಿಯ ಮುಖಂಡ ಆಂಜಪ್ಪ, ನಂದಗುಡಿ ನಾರಾಯಣಸ್ವಾಮಿ, ಕೋಟಹಳ್ಳಿ ಕೃಷ್ಣಮೂರ್ತಿ, ವೈ.ಎಂ.ಗೋಪಾಲ್, ಮುರಳಿ, ನಾಗರಾಜ್, ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ರಾಮಕೃಷ್ಣಪ್ಪ, ಎ.ಎಂ.ನಾರಾಯಣಸ್ವಾಮಿ, ಹೊಸಕೋಟೆ ನಾಗರಾಜ್, ಲಕ್ಷ್ಮಿನಾರಾಯಣ್, ಅಬ್ಬುಗುಂಡು ಚಲಪತಿ, ಗೋಪಲ್ಲಿ ರಘುನಾಥರೆಡ್ಡಿ, ರಾಗುಟ್ಟಹಳ್ಳಿ ರಘುನಾಥರೆಡ್ಡಿ, ಮಾಳಪ್ಪಲ್ಲಿ ರಾಮಕೃಷ್ಣ, ಕಲ್ಲಹಳ್ಳಿ ವೆಂಕಟೇಶ್, ನಾಗದೇನಹಳ್ಳಿ ನಾರಾಯಣಸ್ವಾಮಿ, ಗಂಗಿರೆಡ್ಡಿ, ಸಿ.ಎಂ.ಆರ್.ರಾಮಾಂಜಿ, ಜನಾರ್ದನ್, ರವಿಪ್ರಸಾದ್, ರಮೇಶ್, ಮುನಿರೆಡ್ಡಿ, ಅರುಣಾರೆಡ್ಡಿ, ಶೋಭಾ ರಾಣಿ, ಅಮಲಾ ನಾಗರಾಜ್, ಉಮಾದೇವಿ, ಸರೋಜಮ್ಮ, ಭಾಗ್ಯಮ್ಮ ಹಾಜರಿದ್ದರು.
ವಿದ್ಯುತ್ ಕಡಿತ ಇಂದು

ಚಿಂತಾಮಣಿ: ನಗರದ ಕೆಲವು ಭಾಗಗಳಲ್ಲಿ ಬೆಸ್ಕಾಂ ತುರ್ತು ಕಾಮಗಾರಿ ನಡೆಸಬೇಕಾಗಿರುವುದರಿಂದ ಬುಧವಾರ  ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗುತ್ತದೆ ಎಂದು ಸಹಾಯಕ ಎಂಜಿನಿಯರ್ ಶಿವಪ್ರಸಾದ್ ಬಾಬು ತಿಳಿಸಿದ್ದಾರೆ.

ನಗರದ ಶ್ರಿನಿವಾಸಪುರ ರಸ್ತೆ, ಚೇಳೂರು ರಸ್ತೆ, ಆಜಾದ್‌ಚೌಕ, ದೊಡ್ಡಪೇಟೆ, ಡೈಮಂಡ್ ಚಿತ್ರ ಮಂದಿರ ರಸ್ತೆ, ಬಂಬೂ ಬಜಾರ್, ಅಗ್ರಹಾರ, ನೆಕ್ಕುಂದಿ, ಕೆ.ಇ.ಬಿ ಕಚೇರಿ ಸುತ್ತಮುತ್ತ, ಚೌಡರೆಡ್ಡಿ ಪಾಳ್ಯ, ಟಿಪ್ಪುನಗರ, ಕರಿಯಪ್ಪಲ್ಲಿ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT