ADVERTISEMENT

ಶಿಕ್ಷಕರ ನಿಯೋಜನೆಗೆ ಆಗ್ರಹಿಸಿ ಶಾಲೆಗೆ ಬೀಗ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 6:00 IST
Last Updated 24 ಆಗಸ್ಟ್ 2011, 6:00 IST
ಶಿಕ್ಷಕರ ನಿಯೋಜನೆಗೆ ಆಗ್ರಹಿಸಿ ಶಾಲೆಗೆ ಬೀಗ
ಶಿಕ್ಷಕರ ನಿಯೋಜನೆಗೆ ಆಗ್ರಹಿಸಿ ಶಾಲೆಗೆ ಬೀಗ   

ಶಿಡ್ಲಘಟ್ಟ: ಶಿಕ್ಷಕರನ್ನು ನಿಯೋಜಿಸುವಂತೆ ಆಗ್ರಹಿಸಿ ಬೋದಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಬೀಗ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಅರವತ್ತು ಮಂದಿ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಕೇವಲ ಮೂರು ಮಂದಿ ಶಿಕ್ಷಕರಿದ್ದು, ಮತ್ತೊಬ್ಬರನ್ನು ನಿಯೋಜಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ಪೋಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರು ಶಾಲೆಗೆ ಬೀಗ ಹಾಕಿ ಶಾಲಾ ಮಕ್ಕಳು ಹಾಗೂ ಶಿಕ್ಷಕರನ್ನು ಹೊರಗೆ ಕಳುಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ಗ್ರಾಮಸ್ಥರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ, ಶಿಕ್ಷಕರೊಬ್ಬರನ್ನು ನಿಯೋಜಿಸಿದ್ದು ಒಂದೆರಡು ದಿನದಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ. ಅದುವರೆಗೂ ಸಹಕರಿಸಿ ಎಂದು ಮನವಿ ಮಾಡಿದರು.

ಸಮಸ್ಯೆಯನ್ನು 3-4 ದಿನಗಳ ಒಳಗಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರೂ ಒಪ್ಪದ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಕೂತರು.

 ಅನ್ಯ ಮಾರ್ಗವಿಲ್ಲದೆ ಬಿಇಒ ಶ್ರೀಕಂಠ ಗ್ರಾಮಕ್ಕೆ ತೆರಳಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ದಬರಗಾನ ಹಳ್ಳಿಯ ಶಿಕ್ಷಕಿಯೊಬ್ಬರನ್ನು ಬೋದಗೂರಿನ ಶಾಲೆಗೆ ನಿಯೋಜಿಸಿದ ಮೇಲಷ್ಟೆ ಪ್ರತಿಭಟನೆ ನಿಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.