ADVERTISEMENT

ಶೌಚಾಲಯ ಕಟ್ಟಿಸದವರಿಗೆ ಪಾದ‘ಪೂಜೆ’!

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 6:02 IST
Last Updated 28 ಅಕ್ಟೋಬರ್ 2017, 6:02 IST

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಗೊರ್ತಪಲ್ಲಿ ಗ್ರಾಮ ಪಂಚಾಯಿತಿ ಯನ್ನು ನವೆಂಬರ್‌ 1ರ ಒಳಗೆ ‘ಬಯಲು ಬಹಿರ್ದೆಸೆ ಮುಕ್ತ’ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಪಣ ತೊಟ್ಟಿರುವ ಪಂಚಾಯಿತಿ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿ ಶೌಚಾ ಲಯ ಇಲ್ಲದವರ ಮನೆ, ಮನೆಗೆ ಹೋಗಿ ಪಾದಪೂಜೆ ಮಾಡುವ ಮೂಲಕ ಶೌಚಾಲಯ ಕಟ್ಟಿಸಿಕೊಳ್ಳುವಂತೆ ವಿನೂತನ ರೀತಿಯಲ್ಲಿ ಒತ್ತಾಯಿಸುವ ಆಂದೋಲನ ಆರಂಭಿಸಿದ್ದಾರೆ.

ಶೌಚಾಲಯವಿಲ್ಲದ ಮನೆಯನ್ನು ಗುರುತಿಸಿಕೊಂಡು ಹೋಗುವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮನೆ ಮಾಲೀಕನನ್ನು ಬಾಗಿಲಿನಲ್ಲಿ ನಿಲ್ಲಿಸಿ ಶೌಚಾಲಯದ ಉಪಯೋಗದ ಮನವರಿಕೆ ಮಾಡಿ ಕೊಡುವ ಜತೆಗೆ ಕಾಲಿಗೆ ನೀರು ಹಾಕಿ, ಹೂವು ಅರ್ಪಿಸುವ ಮೂಲಕ ‘ಆತ್ಮಾವಲೋಕನ’ಕ್ಕೆ ಹಚ್ಚಿಕೊಳ್ಳುವ ರೀತಿಯಲ್ಲಿ ಮನವಿ ಮಾಡುತ್ತಿದ್ದಾರೆ. ವಿಭಿನ್ನ ರೀತಿಯಲ್ಲಿ ಜನರಿಗೆ ಅರಿವು ಮೂಡಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿದ್ದಾರೆ.

ಶೌಚಾಲಯವಿಲ್ಲದ ಏಕ ಮಾತ್ರ ಕಾರಣಕ್ಕೆ ಸಾರ್ವಜನಿಕವಾಗಿ ಸಲ್ಲುವ ಇಂತಹ ‘ಪೂಜೆ’ಯಿಂದ ಮುಜುಗರಕ್ಕೆ ಒಳಗಾಗುತ್ತಿರುವ ಜನರು ತ್ವರಿತವಾಗಿ ಶೌಚಾಲಯ ಕಟ್ಟಿಸಿಕೊಳ್ಳುವ ಭರವಸೆ ನೀಡುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಎಲ್ಲೆಲ್ಲಿ ಶೌಚಾಲಯ ನಿರ್ಮಾಣ ಪ್ರಕ್ರಿಯೆ ಕುಂಠಿತಗೊಂಡಿದೆಯೇ ಅಲ್ಲೆಲ್ಲ ‘ಪಾದಪೂಜೆ’ಯ ತಂತ್ರ ಅನುಸರಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ADVERTISEMENT

‘ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಿಗೆ ಪಂಚಾಯಿತಿ ಸಿಬ್ಬಂದಿ ಅನೇಕ ಬಗೆಯಲ್ಲಿ ಮನವಿ ಮಾಡುತ್ತ ಬಂದಿದ್ದಾರೆ. ಆದರೆ ಯಾವುದಕ್ಕೂ ಪಾದಪೂಜೆಯಷ್ಟು ಉತ್ತಮ ಪ್ರತಿಕ್ರಿಯೆ ದೊರೆತಿರಲಿಲ್ಲ’ ಎಂದು ಲ್ಲಾಪಂಚಾಯಿತಿ ಉಪ ಕಾರ್ಯದರ್ಶಿ ಸಿದ್ದರಾಮಯ್ಯ ತಿಳಿಸಿದರು.

ಗೊರ್ತಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಮನೆಗಳಲ್ಲಿ ಪಾದಪೂಜೆ ಮಾಡಲಾಗಿದೆ. ಇದರಿಂದ ಜನರು ಹಿಂದಿಗಿಂತಲೂ ಹೆಚ್ಚು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.