ಚಿಂತಾಮಣಿ: ನಗರದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ಮಂಗಳವಾರ ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮಹಿಳಾ ಕಾಲೇಜಿನಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ನಂತರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ವ್ಯವಸ್ಥಾಪಕರು ಖಾಸಗಿ ಶಾಲೆಗಳೊಂದಿಗೆ ಶಾಮೀಲಾಗಿ ಅನುದಾನ ಬಂದ ತಕ್ಷಣ ಅವರಿಗೆ ಆದ್ಯತೆ ನೀಡುತ್ತಾರೆ. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡುತ್ತಿಲ್ಲ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ ಆರೋಪಿಸಿದರು.
ಸರ್ಕಾರದಿಂದ ವಿದ್ಯಾರ್ಥಿ ವೇತನ ಬಿಡುಗಡೆಯಾದ ಕೂಡಲೇ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಬೇಕು. ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಸಗಿ ಕಾಲೇಜುಗಳಿಂದ ಕಮಿಷನ್ ಪಡೆದು ಅವರಿಗೆ ವಿತರಿಸುತ್ತಾರೆ. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಕೇಳಿದರೆ ಸರ್ಕಾರದಿಂದ ಮಂಜೂರಾಗಿಲ್ಲ ಎಂದು ಉತ್ತರಿಸುತ್ತಾರೆ ಎಂದು ಟೀಕಿಸಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಶಿಷ್ಟ ಜಾತಿಯ 367, ಪರಿಶಿಷ್ಟ ಪಂಗಡದ 245 ವಿದ್ಯಾರ್ಥಿಗಳು ಸೇರಿ 612ರ ಪೈಕಿ 267 ಮಂದಿಗೆ, ಬಾಲಕರ ಕಾಲೇಜಿನಲ್ಲಿ 824ರ ಪೈಕಿ 102, ಮಹಿಳಾ ಕಾಲೇಜಿನಲ್ಲಿ 768ರ ಪೈಕಿ 408, ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 98ರ ಪೈಕಿ 28 ಮಂದಿಗೆ ವಿದ್ಯಾರ್ಥಿ ವೇತನ ವಿತರಿಸಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಬಗ್ಗೆ ಗಮನ ನೀಡದ ಸಮಾಜ ಕಲ್ಯಾಣಾಧಿಕಾರಿ ಹಾಗೂ ಕಚೇರಿ ವ್ಯವಸ್ಥಾಪಕರ ಮೇಲೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದರು. ವಿದ್ಯಾರ್ಥಿ ಮುಖಂಡರಾದ ಸುರೇಶ್, ಮುರಳಿ, ನವಾಜ್, ನವಕುಮಾರ್, ಪ್ರವೀಣ್, ಅರ್ಶಿಯಾ, ಲಾವಣ್ಯಾ, ಶ್ವೇತಾ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.