ADVERTISEMENT

ಸಮಸ್ಯೆ ನಿವಾರಣೆಗೆ ಸಚಿವ ದಿನೇಶ್‌ ಸೂಚನೆ

ಬಾಗೇಪಲ್ಲಿ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:33 IST
Last Updated 14 ಸೆಪ್ಟೆಂಬರ್ 2013, 6:33 IST

ಬಾಗೇಪಲ್ಲಿ: ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕುಡಿಯುವ ನೀರಿನ ಅವ್ಯವಸ್ಥೆ, ಎಸ್ಸೆಸ್ಸೆಲ್ಸಿ ಫಲಿತಾಂಶ ಹಿನ್ನಡೆ ಸೇರಿದಂತೆ ಇತರ ವಿಷಯಗಳು ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯಾದವು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮತ್ತು ಶಾಸಕ ಎಸ್‌.­ಎನ್‌.­ಸುಬ್ಬಾರೆಡ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿ­ಸಿದಂತೆ ಹಲವಾರು ಲೋಪದೋಷಗಳು ಬೆಳಕಿಗೆ ಬಂದವು.

ಇಲಾಖೆ ವ್ಯಾಪ್ತಿಯಲ್ಲಿನ ಸಮಸ್ಯೆ­ಗಳನ್ನು ಶೀಘ್ರವೇ ಬಗೆಹರಿಸಿಕೊಳ್ಳಬೇಕು ಮತ್ತು ಜನರ ಸಂಕಷ್ಟಗಳಿಗೆ ಸ್ಪಂದಿಸ­ಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡ­ಲಾಯಿತು.

ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವ­ಹಿಸಲು ಸುಮಾರು 320ಕ್ಕೂ ಶಿಕ್ಷಕರ ಕೊರತೆಯಿದ್ದು, ಇದರಿಂದ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ವೆಂಕಟೇಶ್‌ ಸಭೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಚಿವ ದಿನೇಶ್‌, ಶಿಕ್ಷಕರ ಕೊರತೆ ನೀಗಿಸಲು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು. ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶ ತರಬೇಕು, ವಿದ್ಯಾರ್ಥಿಗಳಿಗೆ ಶಾಲಾ ಕೊಠಡಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶಂಕರರೆಡ್ಡಿ ಮಾತನಾಡಿ, ತಾಲ್ಲೂಕಿನ ನಲ್ಲಪರೆಡ್ಡಿ­ಪಲ್ಲಿ ಸರ್ಕಾರಿ ಶಾಲೆಯಲ್ಲಿ ಹಣ ದುರು­ಪಯೋಗದ ಬಗ್ಗೆ ಆರೋಪಿ­ಸಿದರು.

ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆಗಳ ವಿದ್ಯಾರ್ಥಿನಿಲಯಗಳಲ್ಲಿ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಬೇಕು. ಚೇಳೂರಿನಿಂದ ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಇಂತಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ನೀಡಬೇಕಾಗಿದೆ ಎಂದು ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಮನವಿ ಮಾಡಿ­ಕೊಂಡಾಗ, ಸಚಿವರು ಪರಿಶೀಲಿಸು­ವುದಾಗಿ ತಿಳಿಸಿದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದ ಅಗತ್ಯವಿದ್ದು, ಸರ್ಕಾರಿ ಜಮೀನುಗಳಲ್ಲಿ ವಿದ್ಯಾರ್ಥಿ­ನಿಲಯ­ಗಳನ್ನು ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ತಾಲ್ಲೂಕಿನ ಆಚಗಾನಪಲ್ಲಿ ಕಸ್ತೂರ್ಬಾ ಶಾಲೆಯಲ್ಲಿ ಕೊಳವೆಬಾವಿ ಕೊರೆಯಿಸಲಾಗಿಲ್ಲ. ಇದರಿಂದ ವಿದ್ಯಾರ್ಥಿನಿ­ಯರಿಗೆ ತೊಂದರೆ ಆಗಿದೆ. ಜಿಲ್ಲಾ ಪಂಚಾಯತ್ ತಾಂತ್ರಿಕ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸು­ತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಬಿ.ಸಾವಿತ್ರಮ್ಮ ಆರೋಪಿಸಿದಾಗ, ಅದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ್‌ ತಾಂತ್ರಿಕ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗಪ್ಪ, ಕೊಳವೆಬಾವಿ, ಪೈಪ್‌ಲೈನ್ ಒದಗಿಸಲಾಗುವುದು ಎಂದರು. 

ಪಟ್ಟಣದ ಸರ್ಕಾರಿ ಆಸ್ಪತ್ರೆ, ಪ್ರಾಥ­ಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದೆ. ಕನಿಷ್ಠ ಮೂಲ ಸೌಲಭ್ಯಗಳು ಇಲ್ಲ. ಇದರಿಂದ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ವೈದ್ಯರು ಬರುತ್ತಾರೆಯಾದರೂ ನಿಯೋಜಿತ ಕೆಲಸವೆಂದು ಬೇರೆ ಕಡೆ ತೆರಳುತ್ತಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್‌ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್‌ ಗುಂಡೂರಾವ್‌, ಸಮಸ್ಯೆಗಳ ನಿವಾ­ರಣೆಗೆ  ಇಲಾಖೆ ಮಂತ್ರಿ ಜೊತೆ ಚರ್ಚಿಸ­ಲಾಗುವುದು. ರೋಗಿಗಳ ಸಂಖ್ಯೆ ಹೆಚ್ಚಾ­ಗು­ತ್ತಿರುವ ಹಿನ್ನೆಲೆಯಲ್ಲಿ  ವೈದ್ಯರನ್ನು ಕೂಡಲೇ ನಿಯೋಜಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯಿಂದ ರಸ್ತೆ ಮಧ್ಯೆ ಗುಂಡಿ ಅಗೆದು, ಕಲ್ಲು–ಮಣ್ಣು ಚೆಲ್ಲಾಡಿ, ಇದೀಗ ಮಣ್ಣು ತುಂಬಿಸದ ಇರುವ ಬಗ್ಗೆ ಸಾರ್ವಜನಿಕರು ದೂರಿ­ದ್ದಾರೆ. ಒಳಚರಂಡಿ ಮಂಡಲಿ ಅಧಿಕಾರಿಗಳ ಇದನ್ನು ಪರಿಶೀಲಿಸಿ, ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ಆರ್‌.ವಿಶಾಲ್‌, ಜಿಲ್ಲಾ ಪಂಚಾಯಿತಿ ಮುಖ್ಯ­ಕಾರ್ಯನಿರ್ವಣಾಧಿಕಾರಿ ನೀಲಾ­ಮಂಜು­ನಾಥ್, ಅಧ್ಯಕ್ಷ ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರಹನುಮಾನ್, ತಹಶೀಲ್ದಾರ್ ಎಂ.ಎ.ಪದ್ಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಶ್ರೀನಿವಾಸ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.