ADVERTISEMENT

ಸಮಸ್ಯೆ ಮಧ್ಯೆ ಹಕ್ಕಿಪಿಕ್ಕಿಗಳ ಬದುಕು

ಶಿಡ್ಲಘಟ್ಟ ತಾಲ್ಲೂಕು ಬಾಳೇಗೌಡನಹಳ್ಳಿಯಲ್ಲಿ ವಾಸ

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 10:31 IST
Last Updated 29 ಜೂನ್ 2015, 10:31 IST
ಶಿಡ್ಲಘಟ್ಟ ತ್ಲಾಲೂಕು ಗಂಜಿಗುಂಟೆ ಗ್ರಾಮ ಪಂಚಾಯತಿಯ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಪ್ಲಾಸ್ಟಿಕ್ ಕರಕುಶಲ ವಸ್ತುಗಳನ್ನು ತಯಾರಿಸಿರುವುದನ್ನು ಗುಡಿಸಲು ಮುಂದೆ ಪ್ರದರ್ಶಿಸಿರುವ ಮಹಿಳೆಯರು.
ಶಿಡ್ಲಘಟ್ಟ ತ್ಲಾಲೂಕು ಗಂಜಿಗುಂಟೆ ಗ್ರಾಮ ಪಂಚಾಯತಿಯ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಪ್ಲಾಸ್ಟಿಕ್ ಕರಕುಶಲ ವಸ್ತುಗಳನ್ನು ತಯಾರಿಸಿರುವುದನ್ನು ಗುಡಿಸಲು ಮುಂದೆ ಪ್ರದರ್ಶಿಸಿರುವ ಮಹಿಳೆಯರು.   

ಶಿಡ್ಲಘಟ್ಟ: ‘ವಾಗ್ರಿ ಏಲೋ ಜಾಡನೊ ಪಾಲೋ’.
–ಇದು ಹಕ್ಕಿಪಿಕ್ಕಿ ಜನಾಂಗದವರ ಜೀವನ ಸಿದ್ಧಾಂತ. ಇದರ ಅರ್ಥ ‘ಎರಡು ಮುದ್ದೆ, ಹಕ್ಕಿ ಮಾಂಸದ ಸಾರು ಮತ್ತು ಮರದ ನೆರಳಿನಲ್ಲಿ ಸುಖನಿದ್ರೆ’.

ಬೇಟೆ ಮತ್ತು ಆಹಾರ ಸಂಗ್ರಹದ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಿದ್ದ ಅಲೆಮಾರಿ ಜನಾಂಗ ಈಗ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿಯ ಹಕ್ಕಿಪಿಕ್ಕಿಕಾಲೊನಿ ಮತ್ತು ಬಾಳೇಗೌಡನಹಳ್ಳಿ ಗ್ರಾಮಗಳಲ್ಲಿ ನೆಲೆ ಕಂಡುಕೊಂಡಿದೆ.
ಸರ್ಕಾರವು ಬೇಟೆ ನಿಷೇಧಿಸಿರುವುದರಿಂದ ಈಗ ಹಕ್ಕಿಪಿಕ್ಕಿ ಜನಾಂಗದ ಮಹಿಳೆಯರು ಸರ, ತೋರಣ, ಹೂವಿನ ಕುಂಡ ಮೊದಲಾದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ, ಮಾರಿ ಜೀವನ ನಡೆಸುತ್ತಾರೆ.

ಕಾಲೊನಿ ತುಂಬ ಇರುವ ಪುಟ್ಟ ಮಕ್ಕಳಿಗೆ ಸರಿಯಾದ ಅಂಗನವಾಡಿ ವ್ಯವಸ್ಥೆ ಇಲ್ಲ. ಅಂಗನವಾಡಿ ಸುತ್ತ ಪಾನ್‌ ಪರಾಗ್‌ ಮತ್ತು ಮದ್ಯದ ಪಾಕೆಟ್‌ಗಳು ಕಂಡು ಬರುತ್ತವೆ. ಕುಡಿಯುವ ನೀರಿನ ಸಮಸ್ಯೆ ಬಹಳಷ್ಟಿದೆ. ಪಕ್ಕದಲ್ಲಿನ ಕೆರೆ– ಕುಂಟೆಯಲ್ಲಿನ ನೀರನ್ನು ತಂದು ಕುಡಿಯುವುದರಿಂದ ರೋಗಗಳು ಬರುತ್ತಿದೆ. ರಸ್ತೆ, ಚರಂಡಿ, ವಿದ್ಯುತ್‌ ಸಮಸ್ಯೆ ಹೇಳಲಾರದಷ್ಟಿದೆ ಎಂದು ಸಂಗೀತಾ ತಿಳಿಸಿದರು.
ನಾವು ತಯಾರಿಸುವ ಅಲಂಕಾರಿಕ ವಸ್ತುಗಳನ್ನು ಮಾರಲು ಆಂಧ್ರ, ತಮಿಳುನಾಡು, ಕರ್ನಾಟಕದ ಹಲವೆಡೆ ತಿರುಗಬೇಕಾಗುತ್ತದೆ. ನಮಗೆ ಸೂಕ್ತ ಮಾರುಕಟ್ಟೆಯನ್ನು ಸರ್ಕಾರ ಕಲ್ಪಿಸಿಕೊಡಬೇಕು. ಈ ಸಂಪಾದನೆಯಿಂದಲೇ ಮಕ್ಕಳನ್ನು ಪೋಷಿಸಬೇಕು ಎನ್ನುತ್ತಾರೆ ಶಿವಮ್ಮ.

ಸರ್ಕಾರದಿಂದ ಅಲೆಮಾರಿ ಜನಾಂಗವನ್ನು ನೆಲೆಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಹಲವಾರು ಕಾರ್ಯಯೋಜನೆಗಳನ್ನು ರೂಪಿಸಿ, ನಿಗಮ– ಮಂಡಳಿಗಳನ್ನು ಸ್ಥಾಪಿಸಿದ್ದರೂ ಇನ್ನೂ ಮೂಲಸೌಕರ್ಯಗಳಿಂದ ವಂಚಿತರಾಗಿ ಅರೆ ಅಲೆಮಾರಿಗಳಾಗಿ ಬದುಕುವ ಹಕ್ಕಿಪಿಕ್ಕಿ ಜನಾಂಗದವರು ತಾಲ್ಲೂಕಿನಲ್ಲಿದ್ದಾರೆ. ಇವರಿಗೆ ಸರಿಯಾದ್ದೊಂದು ಸ್ನಾನಗೃಹ, ಶೌಚಾಲಯವಿಲ್ಲ. ಗುಡಿಸಲಲ್ಲಿ ವಾಸವಿರುವ ಇವರು, ಸೀರೆಗಳಿಂದ ತಾತ್ಕಾಲಿಕ ಬಚ್ಚಲುಮನೆ ನಿರ್ಮಿಸಿಕೊಂಡಿದ್ದಾರೆ. ಇನ್ನಾದರೂ ಅಭಿವೃದ್ಧಿ ಆಗುವುದೇ ಎಂಬ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.

ಹಕ್ಕಿಪಕ್ಕಿ ಸಮುದಾಯ ಸಂಕಷ್ಟದಲ್ಲೇ ಬದುಕುತ್ತಿದೆ. ಸಮಸ್ಯೆ ನಿವಾರಣೆಗೆ ಭರವಸೆ ಸಿಕ್ಕಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ.
ಶಿವಮ್ಮ,
ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.