ADVERTISEMENT

ಸಮ್ಮೇಳನ.. ಸಂತಸ..

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 8:53 IST
Last Updated 13 ಜೂನ್ 2013, 8:53 IST

ಗಡಿನಾಡಿನಲ್ಲಿ ಸಮ್ಮೇಳನದ ಖುಷಿ
ರಾಜ್ಯದ ರಾಜಧಾನಿ ಸಮೀಪದಲ್ಲೇ ಇದ್ದರೂ ಒಂದು ರೀತಿಯಲ್ಲಿ ಗಡಿನಾಡು ವಾತಾವರಣದಂತಿರುವ ಶಿಡ್ಲಘಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವುದು ಕನ್ನಡದ ಹಬ್ಬವಿದ್ದಂತೆ. ವರ್ಷಕ್ಕೊಮ್ಮೆ ನಡೆಯುವ ಹಬ್ಬದ ಆಚರಣೆಯಿಂದ ಯಾವುದೇ ಕಾರಣಕ್ಕೂ ನಾನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ.
-ಪಿಟೀಲು ವಿದ್ವಾನ್ ಶ್ಯಾಮಸುಂದರ್

ಸಾಹಿತ್ಯ ಸಮ್ಮೇಳನವೇ ಅಪರೂಪ
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ನಮ್ಮ ಜಿಲ್ಲೆಯಲ್ಲಿ ಸಾಹಿತ್ಯ ಕಾರ್ಯಕ್ರಮ, ಕವಿಗೋಷ್ಠಿ ಅಥವಾ ಕೃತಿಗಳ ಬಿಡುಗಡೆ ಸಮಾರಂಭ ನಡೆಯುವುದು ತುಂಬ ಅಪರೂಪ. ಕಾರ್ಯಕ್ರಮ ಎದ ಕೂಡಲೇ ಬಹುತೇಕ ಮಂದಿ ಬೆಂಗಳೂರಿಗೆ ಹೊರಟುಬಿಡುತ್ತಾರೆ. ನಮ್ಮೂರಿನಲ್ಲೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜಿಸುವುದು ಮತ್ತು ಆಚರಿಸುವುದು ತುಂಬ ಖುಷಿ ಕೊಡುತ್ತದೆ.
-ವಿ.ಕೃಷ್ಣ, ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷ

ಯುವಜನರ ಮೇಲೆ ಪ್ರಭಾವ
ಇತ್ತೀಚಿನ ದಿನಗಳಲ್ಲಿ ಯುವಜನರು ಪುಸ್ತಕಗಳ ಓದುವಿಕೆ ಮತ್ತು ಸಾಹಿತ್ಯಿಕ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಂತಹ ದೂರನ್ನು ನಿವಾರಿಸುವಲ್ಲಿ ಮತ್ತು ಅವರಲ್ಲಿ ನಾಡು-ನುಡಿ ಕುರಿತು ಅಭಿಮಾನ ಮೂಡಿಸುವಲ್ಲಿ ಸಾಹಿತ್ಯ ಸಮ್ಮೇಳನ ಪ್ರಮುಖ ಪಾತ್ರವಹಿಸುತ್ತದೆ.
- ಎಸ್.ವಿ.ನಾಗರಾಜರಾವ್, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ.

ಹೆಮ್ಮೆ ಮತ್ತು ಸಂತೋಷ
ನಾಲ್ಕು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಗೆ ಹೆಮ್ಮೆ ಮತ್ತು ಸಂತೋಷದ ವಿಷಯ. ಸಮ್ಮೇಳನಕ್ಕೆ ಖಂಡಿತವಾಗಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಈ ಸಮ್ಮೇಳನವು ದೀರ್ಘಕಾಲದವರಗೆ ಎಲ್ಲರಿಗೂ ನೆನಪಿನಲ್ಲಿ ಉಳಿಯಲಿದೆ ಎಂಬ ವಿಶ್ವಾಸ ನನಗಿದೆ.
-ಬಿ.ಆರ್.ಅನಂತಕೃಷ್ಣ, ಶಿಡ್ಲಘಟ್ಟ ತಾಲ್ಲೂಕು ಕಸಾಪ ಸಂಘಟನಾ ಕಾರ್ಯದರ್ಶಿ

ಸರ್ಕಾರದ ಗಮನಕ್ಕೆ ತರುತ್ತೇವೆ
ಸಾಹಿತ್ಯ ಸಮ್ಮೇಳನ ಆಚರಿಸಿದರೆ ಸಾಲದು, ಅದರ ಉದ್ದೇಶ, ಸಂದೇಶ ಮತ್ತು ಗುರಿ ಎಲ್ಲರಿಗೂ ತಲುಪಬೇಕು. ಈ ನಿಟ್ಟಿನಲ್ಲೇ ನಾವು ವಿವಿಧ ವಿಷಯಗಳ ಕುರಿತು ಗೋಷ್ಠಿಗಳನ್ನು ಇಟ್ಟು ಬೇರೆ ಬೇರೆ ಕ್ಷೇತ್ರದ ತಜ್ಞರನ್ನು ಕರೆದಿದ್ದೇವೆ. ಕನ್ನಡ ನಾಡು-ನುಡಿ ಕುರಿತು ಕೆಲವಾರು ನಿರ್ಣಯಗಳನ್ನು ಮಂಡಿಸಿ, ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ.
-ಕುಂದಲಗುರ್ಕಿ ಮಂಜುನಾಥ್, ಶಿಡ್ಲಘಟ್ಟ ತಾಲ್ಲೂಕು ಕಸಾಪ ಗೌರವಕಾರ್ಯದರ್ಶಿ

ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿ
ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯವಾಗಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಸಾಹಿತ್ಯ ಮತ್ತು ಸಂಸ್ಕೃತಿಯ ತಿಳಿದುಕೊಳ್ಳಲು ಅವರಿಗೆ ಅವಕಾಶ ಸಿಗುತ್ತದೆ ಅಲ್ಲದೇ ಹಿರಿಯ-ಕಿರಿಯ ಸಾಹಿತಿಗಳು-ಕವಿಗಳ ಪರಿಚಯವೂ ಆಗುತ್ತದೆ. ಸಾಹಿತ್ಯಾಭಿಮಾನಿಗಳೊಂದಿಗೆ ಮಕ್ಕಳು ಹೆಚ್ಚಿನ ಪಾಲ್ಗೊಂಡರೆ, ಸಮ್ಮೇಳನ ಸಾರ್ಥಕವಾಗುತ್ತದೆ.
-ದೇವರಾಜ್, ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮರಿಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.