ಮಂಗಳ ಜನ್ಮ, ಮಂಗಳ ವಿಧಾತ, ಮಂಗಳ ಮಾಯ ದೇವಾ ಜೈ ಹನುಮಾನ್, ಜೈ ಜೈ ಹನುಮಾನ್... ಎಂಬ ಹಾಡಿನ ಮೂಲಕ ‘ಲಂಕಾದಹನ’ ನಾಟಕ ಆರಂಭವಾದೊಡನೆ ಏಯ್, ಓಡ್ರೋ ಲಂಕಾ ಪಟ್ಟಣ ಸುಟ್ಟು ಹೋಗ್ತಿರುತ್ತೆ. ಹನುಮನ ಬಾಲ ಸುಟ್ಟರೆ, ರಾವಣನ ಲಂಕೆ ಹೊಗೆಯಾಡುತ್ತದೆ...
ಹೀಗೆ ಗ್ರಾಮಸ್ಥರು, ನೆರೆಹೊರೆಯ ಗ್ರಾಮಗಳ ಜನರು ಕೆಲಸ ಕಾರ್ಯ ಬದಿಗಿಟ್ಟು ನಾಟಕ ವೀಕ್ಷಿಸಲು ಓಡೋಡಿ ಬರುತ್ತಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಲ್ಲಗುಟ್ಟಪಾಳ್ಯ ಗ್ರಾಮದ ಹಿರಿಯ ಕಲಾವಿದ ಮುನಿರಾಮಯ್ಯ ಅವರ ಪಾತ್ರಾಭಿನಯ ಅಷ್ಟರ ಮಟ್ಟಿಗೆ ಜನರನ್ನು ಸೆಳೆಯುತ್ತದೆ.
ಗ್ರಾಮದಲ್ಲಿ ಯಾವುದೇ ನಾಟಕ ಪ್ರದರ್ಶನವಾದರೂ ಮುನಿರಾಮಯ್ಯ ಅವರು ಕರ್ಣ, ಹನುಮಂತ, ದುರ್ಯೋದನ, ಭೀಮ, ಶಕುನಿ, ಕೃಷ್ಣ ಸೇರಿದಂತೆ ನಾನಾ ಪಾತ್ರಗಳಲ್ಲಿ ಕಾಣಿಸಿಕೊಂಡು ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗುತ್ತಾರೆ.
ನಲ್ಲಗುಟ್ಟಪಾಳ್ಯಕ್ಕೆ ನುರಿತ ರಂಗಕರ್ಮಿಗಳನ್ನು ಕರೆಸಲಾಗುತ್ತದೆ. ಅವರಿಂದ ಗ್ರಾಮಸ್ಥರಿಗೆ ಪೂರ್ಣ ಪ್ರಮಾಣದ ತರಬೇತಿ ಕೊಡಿಸಿ, ಉತ್ತಮ ನಾಟಕ ಪ್ರದರ್ಶನಕ್ಕೆ ಸಜ್ಜು ಮಾಡಲಾಗುತ್ತದೆ. ಅಂಥ ತರಬೇತಿ ಪರಂಪರೆಯಿಂದಲೇ ಮುನಿರಾಮಯ್ಯ ಅವರು ಕಲಾವಿದರಾಗಿ ಹೊರಹೊಮ್ಮಿದ್ದಾರೆ.
‘ಶ್ರೀರಾಮಾಂಜನೇಯ ಯುದ್ದಂ’ ಎಂಬ ನಾಟಕದಲ್ಲಿ ಮುನಿರಾಮಯ್ಯ ಅವರು ಹನುಮಂತನ ಪಾತ್ರಧಾರಿಯಾಗಿ ಎಲ್ಲರನ್ನೂ ಬೆರಗುಗೊಳಿಸಿದರು. ಲಂಕಾ ದಹನ ವೇಳೆ ಹನುಮಂತನ ಸಾಹಸ, ಬಾಲಕ್ಕಂಟಿದ ಬೆಂಕಿಕೊಳ್ಳಿಯಿಂದ ಇಡೀ ಲಂಕೆ ಸುಡುವ ಪ್ರಯತ್ನ ಅಚ್ಚರಿ ಮೂಡಿಸಿದವು. ಮುನಿರಾಮಯ್ಯ ಅವರು ತಮ್ಮನ್ನು ತಾವು ಮರೆತು ಹನುಮಂತನ ಪಾತ್ರದಲ್ಲಿ ತಲ್ಲೀನರಾಗಿದ್ದರು. ಆ ನಾಟಕ ನಿಜಕ್ಕೂ ಅವಿಸ್ಮರಣೀಯ ಎನ್ನುತ್ತಾರೆ ಗ್ರಾಮಸ್ಥ ಸುಧಾಕರ್.
ನಾಟಕದ ಬಗ್ಗೆ ವಿಶೇಷ ಪ್ರೀತಿ ಬೆಳೆಯಲು ಪೌರಾಣಿಕ ಚಲನಚಿತ್ರಗಳೇ ಸ್ಫೂರ್ತಿ. ತೆಲುಗು ನಟ ದಿವಂಗತ ನಂದಮೂರಿ ತಾರಕ ರಾಮಾರಾವ್ ಅವರ ನಟನೆ ನೋಡಿ, ಅವರು ಮಾಡುತ್ತಿದ್ದ ವಿಭಿನ್ನ ಪಾತ್ರಗಳನ್ನು ತಪ್ಪದೇ ನೋಡುತ್ತಿದ್ದೆ. ಆರಂಭದಲ್ಲಿ ನೆಚ್ಚಿನ ನಟನಂತೆ ಡೈಲಾಗ್ಸ್ ಹಾಕುತ್ತಾ ಸ್ನೇಹಿತರನ್ನು ಮೆಚ್ಚಿಸುತ್ತಿದ್ದೆ. ಅದರಿಂದ ಪ್ರಭಾವಿತನಾಗಿ ನಟನೆ ಕಲಿತೆ. ಹೀಗೆ ಕಲಾ ಸೇವೆ ಮಾಡಲು ಖುಷಿಯಾಗುತ್ತದೆ ಎಂಬುದು ಕಲಾವಿದ ಮುನಿರಾಮಯ್ಯ ಅವರ ಮಾತು.
ನಾನೊಬ್ಬ ಹವ್ಯಾಸಿ ನಾಟಕಕಾರ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ನಾಟಕ ನಡೆದರೂ ಆಹ್ವಾನ ಇರುತ್ತದೆ. ಪೌರಾಣಿಕ ನಾಟಕಗಳು ಕಣ್ಮರೆಯಾಗುತ್ತಿದ್ದು, ಸ್ಥಳೀಯ ಸಂಸ್ಕೃತಿ ಸಂಪ್ರದಾಯ ಆಚರಣೆಗಳಿಗೆ ಪೆಟ್ಟು ಬೀಳುತ್ತಿದೆ. ಆದರೆ ಹಾಗಂತ ಅವುಗಳನ್ನು ಬಿಡಲು ಆಗುವುದಿಲ್ಲ. ನಾಟಕದಲ್ಲಿ ತೊಡಗಿಕೊಂಡರೆ ಮನಸ್ಸು ಕೊಂಚ ನಿರಾಳಗೊಳ್ಳುತ್ತದೆ. ಚಿಂತೆ ಕಾಡುವುದಿಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.