ADVERTISEMENT

ಸೊಪ್ಪು ಸಂಗ್ರಹಿಸಿ ಮಾರುವ ಕಾಯಕ

ಸ್ವಾಭಿಮಾನ ಮತ್ತು ಸಾಹಸಕ್ಕೆ ಅನ್ವರ್ಥವಾಗಿರುವ ಹಳ್ಳಿಗಾಡಿನ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 6 ಮೇ 2018, 8:46 IST
Last Updated 6 ಮೇ 2018, 8:46 IST
ಮುತ್ತೂರಿನ ಮುನಿತಾಯಮ್ಮ ಮತ್ತು ಕದಿರಮ್ಮ
ಮುತ್ತೂರಿನ ಮುನಿತಾಯಮ್ಮ ಮತ್ತು ಕದಿರಮ್ಮ   

‘ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು...‘ ಎಂಬ ಶುಭಮಂಗಳ ಚಲನಚಿತ್ರದ ಹಾಡು ಜನಪ್ರಿಯ. ಹಳ್ಳಿಗಾಡಿನಲ್ಲಿ ಈ ರೀತಿ ಸಾಹಸಿ ಮಹಿಳೆಯರು ಸಾಕಷ್ಟು ಮಂದಿ ಇದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದ ಇಬ್ಬರು ಮಹಿಳೆಯರು ಹಳ್ಳಿಗಳಲ್ಲಿ ವಿವಿಧ ಸೊಪ್ಪುಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ರಾತ್ರಿಯಿಡೀ ನಿದ್ರೆಗೆಟ್ಟು ಕಟ್ಟುಗಳನ್ನು ಕಟ್ಟುವರು. ಬೆಳಗಿನ ಜಾವ ಮಾರಿ ಬರುವರು. ಆ ಮೂಲಕ ಸ್ವಾಭಿಮಾನ ಮತ್ತು ಸಾಹಸ– ಎರಡೂ ಪದಗಳಿಗೆ ಅನ್ವರ್ಥವಾಗಿದ್ದಾರೆ. ಇಪ್ಪತ್ತೈದು ವರ್ಷಗಳಿಂದ ವ್ರತದಂತೆ ಈ ಕಾಯಕವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.

ಈ ಮಹಿಳೆಯರು ಒಂದೇ ಕುಟುಂಬದವರಲ್ಲ. ನೆರೆ ಹೊರೆಯವರು. ಮುನಿತಾಯಮ್ಮ ಮತ್ತು ಕದಿರಮ್ಮ ಎಂಬಿಬ್ಬರು ತುಳಸಿ, ಗರಿಕೆ, ಬೇವಿನಸೊಪ್ಪು, ಕರಿಬೇವಿನ ಸೊಪ್ಪು, ಬಿಲ್ವಪತ್ರೆ, ಬೇಲದ ಕಾಯಿ, ಮಾವಿನ ಸೊಪ್ಪು ಮುಂತಾದವುಗಳನ್ನು ಹಳ್ಳಿ ಹಳ್ಳಿ ಸುತ್ತಿ ಸಂಗ್ರಹಿಸುತ್ತಾರೆ. ಮುತ್ತೂರಿನ ಸುತ್ತಮುತ್ತ ಅಪ್ಪೇಗೌಡನಹಳ್ಳಿ, ಗಂಗನಹಳ್ಳಿ, ಕೊಳವನಹಳ್ಳಿ, ತಾಳಹಳ್ಳಿ, ಭಕ್ತರಹಳ್ಳಿ, ಚೌಡಸಂದ್ರಗಳಲ್ಲಿ ಸೊಪ್ಪು ಸಂಗ್ರಹಿಸಿ ತಲೆ ಮೇಲೆ ಹೊತ್ತು ಬರುತ್ತಾರೆ.

ADVERTISEMENT

‘ಬೆಳಿಗ್ಗೆಯಿಂದ ಸಂಜೆಯವರೆಗೂ ಹಲವಾರು ಸೊಪ್ಪುಗಳನ್ನು ಸಂಗ್ರಹ ಮಾಡುತ್ತೀವಿ. ಆಮೇಲೆ ಬೆಂಗಳೂರಿಗೆ ಹೋಗುತ್ತೇವೆ. ಕಲಾಸಿಪಾಳ್ಯಂ ಮಾರುಕಟ್ಟೆ ಬಳಿ ಹಣ್ಣು ಅಂಗಡಿ ಮುಂದೆ ನಮ್ಮ ಬಿಡಾರ. ಹಲವಾರು ವರ್ಷಗಳಿಂದ ಅಲ್ಲಿ ಸ್ಥಳ ನಮಗೆ ರೂಢಿಯಾಗಿದೆ. ಆ ಅಂಗಡಿಯವರು ರಾತ್ರಿ ಬಾಗಿಲು ಮುಚ್ಚಿದ ಮೇಲೆ ಅಂಗಡಿಯ ಮುಂದೆ ನಾವು ಸೊಪ್ಪು ಕಟ್ಟಲು ಕೂರುತ್ತೇವೆ. ಅಂಗಡಿಗೆ ಕಾವಲು ಇದ್ದಂತಿರುತ್ತದೆ ಎಂದು ಅವರೂ ಬೇಜಾರು ಮಾಡಿಕೊಳ್ಳುವುದಿಲ್ಲ. ಏನೂ ಹೇಳುವುದಿಲ್ಲ’ ಎಂದರು.

‘ತುಳಸಿ ಮಾಲೆ ಮಾಡುವುದು, ಬೇರೆ ಬೇರೆ ಸೊಪ್ಪುಗಳನ್ನು ಕಟ್ಟುತ್ತೇವೆ. ಬೆಳಗಿನ ಜಾವ ಮೂರು ಗಂಟೆಗೆ ವ್ಯಾಪಾರ ಆರಂಭವಾಗುತ್ತದೆ. ಆರು ಗಂಟೆವರೆಗೂ ಮಾರಾಟ ಮಾಡಿ ಊರಿಗೆ ಬಸ್‌ ಹತ್ತುತ್ತೇವೆ. ಎರಡು ಅಥವಾ ಮೂರು ದಿನಕ್ಕೊಮ್ಮೆ ಬೆಂಗಳೂರಿಗೆ ಹೋಗುತ್ತೇವೆ’ ಎಂದು ತಮ್ಮ ದೈನಂದಿನ ಕೆಲಸದ ಬಗ್ಗೆ ಮುನಿತಾಯಮ್ಮ ವಿವರಿಸಿದರು.

‘ತುಳಸಿಯ ಮಾಲೆ ₹ 10ರಿಂದ 15ಕ್ಕೆ ಒಂದು ಮಾರು, ಬೇರೆ ಬೇರೆ ಸೊಪ್ಪಿನ ಕಟ್ಟುಗಳು ₹ 5 ರಿಂದ 10ಕ್ಕೆ ಮಾರುತ್ತೇವೆ. ಜೀವನಕ್ಕೆ ಏನೋ ಒಂದು ಕೆಲಸ ಮಾಡಬೇಕಲ್ಲ. ನಾವು ಇದನ್ನು ಅವಲಂಬಿಸಿದ್ದೇವೆ. ಬೇಸಿಗೆಯಲ್ಲಿ ತುಳಸಿ ಸಿಗದು. ಆಗ ಮಾವಿನ ಸೊಪ್ಪು ಗರಿಕೆ ಹುಲ್ಲು ಸಂಗ್ರಹಿಸುತ್ತೇವೆ. ಮಳೆಗಾಲ ಬಂದ ನಂತರವೇ ತುಳಸಿ ಸಿಗುವುದು. ₹ 500ರಿಂದ 600 ಸಂಪಾದನೆಯಾದರೂ ಬಸ್‌ ಚಾರ್ಜು, ಊಟ, ತಿಂಡಿ, ಸುಂಕದ ಖರ್ಚು ಇತ್ಯಾದಿ ಕಳೆದು ಉಳಿದ ₹ 200ರಿಂದ 300 ಹಂಚಿಕೊಳ್ಳುತ್ತೇವೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ಬೆಂಗಳೂರಿಗೆ ಹೋಗಿ ಬರುತ್ತೇವೆ. ನಿದ್ದೆಗೆಟ್ಟು ದುಡಿಯುತ್ತೇವೆ’ ಎನ್ನುತ್ತಾರೆ ಕದಿರಮ್ಮ.

–ಡಿ.ಜಿ.ಮಲ್ಲಿಕಾರ್ಜುನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.