ADVERTISEMENT

ಹಕ್ಕುಗಳಿಗೆ ಧಕ್ಕೆ ಆಗದಂತೆ ವರ್ತಿಸಿ: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸಲಹೆ

‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 10:52 IST
Last Updated 10 ಡಿಸೆಂಬರ್ 2018, 10:52 IST
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವ ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವ ಪ್ರತಿಜ್ಞೆ ಮಾಡಿದರು.   

ಚಿಕ್ಕಬಳ್ಳಾಪುರ: ‘ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಲು ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ. ಹೀಗಿದ್ದೂ, ಪ್ರತಿ ದಿನ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಭಿನ್ನಾಭಿಪ್ರಾಯವಿದ್ದರೂ ವ್ಯಕ್ತಿಯ ಘನತೆ, ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಇನ್ನೊಬ್ಬರ ಹಕ್ಕುಗಳಿಗೆ ಧಕ್ಕೆ ಆಗದಂತೆ ವರ್ತಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.

ನಗರದಲ್ಲಿ ಸೋಮವಾರ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್‌ ಇಲಾಖೆ ಹಾಗೂ ವಾರ್ತಾ ಇಲಾಖೆ ಮತ್ತು ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಹಕ್ಕುಗಳನ್ನು ಸ್ಥಾಪಿಸಿಕೊಂಡರೆ ಸಾಲದು. ಇನ್ನೊಬ್ಬರ ಹಕ್ಕುಗಳನ್ನು ನಾವು ಗೌರವಿಸಬೇಕು. ನಮ್ಮ ಆಚರಣೆಯಲ್ಲಿ ಸಾಕಷ್ಟು ಕೊರತೆಗಳಿವೆ ಅದನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಬರೀ ಆಚರಣೆಗಳಿಗೆ ಪುಸ್ತಕಗಳಿಗೆ ಸೀಮಿತವಾಗುತ್ತವೆ. ಮಾನವ ಹಕ್ಕುಗಳನ್ನು ಯಾರು ಕೂಡ ದುರುಪಯೋಗಪಡಿಸಿಕೊಳ್ಳಬಾರದು’ ಎಂದು ಹೇಳಿದರು.

ADVERTISEMENT

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್‌.ಎಚ್. ಕೋರಡ್ಡಿ ಮಾತನಾಡಿ, ‘ಸಮಾಜದಲ್ಲಿ ವ್ಯಕ್ತಿಯ ಘನತೆ, ಗೌರವ ಕಾಪಾಡಿಕೊಳ್ಳಲು ಮಾನವ ಹಕ್ಕುಗಳು ಅತ್ಯವಶ್ಯಕವಾಗಿವೆ. ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮುಂದಾಗಬೇಕು. ಮಾನವ ಹಕ್ಕುಗಳು ಉಲ್ಲಂಘನೆಯಾದರೆ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ’ ಎಂದರು.

‘ಭಾರತ ಅಭಿವೃದ್ಧಿ ವಿಷಯದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದರೂ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ವ್ಯಕ್ತಿಯ ಹಕ್ಕಿಗೆ ಚ್ಯುತಿಯಾಗದಂತೆ ನೋಡಿಕೊಳ್ಳುವುದು ಪ್ರತಿ ಇಲಾಖೆಯ ಜವಾಬ್ದಾರಿ. ಸಂವಿಧಾನದ ಅಡಿಯಲ್ಲಿ ಸಿಗಬೇಕಾದ ಹಕ್ಕುಗಳು ಸಿಗದಿದ್ದಾಗ ಜನರು ಕಾನೂನಾತ್ಮಕ ಹೋರಾಟ ಮಾಡಬೇಕು’ ಎಂದು ತಿಳಿಸಿದರು.

‘ಸಮಾಜದ ಅತ್ಯಂತ ದುರ್ಬಲ ವ್ಯಕ್ತಿಗೂ ಸಹ ರಕ್ಷಣೆ ನೀಡಿ ಗೌರವಯುತ ಮತ್ತು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳುವ ಪರಿಸರ ನಿರ್ಮಾಣ ಮಾಡುವುದು ಮಾನವ ಹಕ್ಕುಗಳ ಉದ್ದೇಶವಾಗಿದೆ. ಅದೇ ರೀತಿ ಹಕ್ಕುಗಳನ್ನು ಪಡೆದುಕೊಳ್ಳುವಷ್ಟೇ ನಮ್ಮ ಕರ್ತವ್ಯಗಳನ್ನು ನಾವು ನಿರ್ವಹಿಸುವದು ಅಷ್ಟೇ ಮುಖ್ಯ ಅಂದಾಗ ಮಾತ್ರ ಆರೋಗ್ಯಕರ ಸಮಾಜ ಕಾಣಲು ಸಾಧ್ಯವಾಗುತ್ತದೆ’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್‌, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ವಿ.ವಿಶ್ವನಾಥ್, ಶಾಂತಾ ಕಾಲೇಜಿನ ಪ್ರಾಂಶುಪಾಲ ಕೋಡಿರಂಗಪ್ಪ, ಸರ್ಕಾರಿ ಅಭಿಯೋಜಕ ಬಿ.ರಂಗಸ್ವಾಮಿ, ವಕೀಲ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ವಿ ಬಾಲಾಜಿ, ಪ್ರಧಾನ ಕಾರ್ಯದದರ್ಶಿ ವಿನೋದ್‌ ಕುಮಾರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.