ADVERTISEMENT

ಹದಗೆಟ್ಟ ರಸ್ತೆ: ವಾಹನ ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 6:10 IST
Last Updated 6 ಏಪ್ರಿಲ್ 2011, 6:10 IST
ಹದಗೆಟ್ಟ ರಸ್ತೆ: ವಾಹನ ಸಂಚಾರಕ್ಕೆ ಅಡ್ಡಿ
ಹದಗೆಟ್ಟ ರಸ್ತೆ: ವಾಹನ ಸಂಚಾರಕ್ಕೆ ಅಡ್ಡಿ   

ಬಾಗೇಪಲ್ಲಿ:ಪಟ್ಟಣದ ಹೊರವಲಯದಲ್ಲಿರುವ ಪೋತೇಪಲ್ಲಿ ಗ್ರಾಮಕ್ಕೆ ತೆರಳುವ ರಸ್ತೆ ಹದಗಟ್ಟಿದೆ. ರಸ್ತೆ ಡಾಂಬರೀಕರಣ ಕಾಣದೆ ವರ್ಷಗಳೇ ಕಳೆದಿದ್ದು, ವಾಹನ ಸಂಚರಿಸಲು ಪ್ರಯಾಸ ಪಡುವಂತಾಗಿದೆ.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ-7ರ ನಾರೇಪಲ್ಲಿ ಬಳಿ ಟೋಲ್‌ಗೇಟ್ ನಿರ್ಮಿಸಿರುವುದರಿಂದ ಆಂಧ್ಯಪ್ರದೇಶದ ಬಹುತೇಕ ವಾಹನಗಳು ಇದೇ ಗ್ರಾಮದ ರಸ್ತೆಯ ಮೂಲಕ ಸಂಚರಿಸುತ್ತವೆ. ಭಾರೀ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ರಸ್ತೆಯ ಮೂಲಕ ಹಾದು ಹೋಗುತ್ತವೆ. ಇದೇ ಭಾಗದಲ್ಲಿ ಗಣಿಗಾರಿಕೆ ಘಟಕಗಳಿದ್ದು, ಬೃಹತ್ ಕಲ್ಲಿನ ದಿಮ್ಮಿಗಳನ್ನು ಇಲ್ಲಿಂದ ಸಾಗಿಸಲಾಗುತ್ತಿದೆ. ಕಲ್ಲುಗಳ ಸಾಗಣೆ, ಅತಿಯಾದ ವಾಹನಗಳ ಸಂಚಾದಿಂದ ರಸ್ತೆ ಇನ್ನಷ್ಟು ಹದಗೆಟ್ಟಿದೆ.

ಪಟ್ಟಣದ ಗೂಳೂರು, ಮಾರ್ಗಾನುಕುಂಟೆ, ಬಿಳ್ಳೂರು ಹಾಗೂ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಹೆದ್ದಾರಿಯಲ್ಲಿ ನೀಡಬೇಕಿರುವ ಶುಲ್ಕ ತಪ್ಪಿಸಿಕೊಳ್ಳುವ ಸಲುವಾಗಿ ಬಹುತೇಕ ವಾಹನಗಳು ಈ ರಸ್ತೆಯಲ್ಲೇ ಸಂಚರಿಸುತ್ತವೆ. ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರ ಕಡಿಮೆ ಇರುವ ಕಾರಣ ಬಹುತೇಕ ಮಂದಿ ಖಾಸಗಿ ಬಸ್‌ಗಳು ಮತ್ತು ಆಟೊ ರಿಕ್ಷಾಗಳಲ್ಲಿ ಪ್ರಯಾಣಿಸುತ್ತಾರೆ. ರಸ್ತೆ ದುರಸ್ತಿ ಮಾಡದೆ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ.‘ಗ್ರಾಮಗಳ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು, ಲೋಕೋಪಯೋಗಿ ಇಲಾಖೆ ವತಿಯಿಂದ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳ-ಲಾಗುವುದು ಎಂದು ಸರ್ಕಾರ ಆಗಾಗ್ಗೆ ಹೇಳುತ್ತದೆ. ಆದರೆ ಈ ರಸ್ತೆಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಕಾಮಗಾರಿ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.