ADVERTISEMENT

ಹೂಳು ತೆಗೆದ ಮಂಡಳಿ: ಚಿತ್ರಾವತಿ ಹೋರಾಟಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2012, 6:00 IST
Last Updated 8 ನವೆಂಬರ್ 2012, 6:00 IST

ಬಾಗೇಪಲ್ಲಿ: ಪಟ್ಟಣದ ಹೊರವಲಯದಲ್ಲಿರುವ ಪರಗೋಡು ಚಿತ್ರಾವತಿ ಬ್ಯಾರೇಜ್‌ನಲ್ಲಿ ಹೂಳು ತೆಗೆಯುವಂತೆ ಆಗ್ರಹಿಸಿ ಕಳೆದ 49 ದಿನಗಳಿಂದ ನಡೆದ ಧರಣಿಗೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿ ಕೊನೆಗೂ ಮಣಿದಿದೆ.

ಮಂಡಲಿಯ ಅಧಿಕಾರಿಗಳು ಬುಧವಾರ ಟಿಪ್ಪರ್ ಹಾಗೂ ಹಿಟ್ಯಾಚಿಗಳ ಮೂಲಕ ಹೂಳು ತೆಗೆಸಿದರು. ಚಿತ್ರಾವತಿ ಹೋರಾಟ ಸಮಿತಿ ಸದಸ್ಯರು ಹಮ್ಮಿಕೊಂಡಿರುವ ಅನಿರ್ದಿಷ್ಟ ಧರಣಿಯನ್ನು ಬುಧವಾರ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಚಿತ್ರಾವತಿ ಬ್ಯಾರೇಜ್‌ನಲ್ಲಿ ಹೂಳು ತೆಗೆಯಬೇಕು ಎಂದು ತಾಲ್ಲೂಕಿನ ಪ್ರಗತಿ ಪರ ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಸಮಿತಿ ಸದಸ್ಯರು ಕಳೆದ 48 ದಿನಗಳಿಂದ ಧರಣಿ, ರಸ್ತೆತಡೆ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ನ 8- 9ರಂದು ಬಾಗೇಪಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು.

ಸರ್ಕಾರ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿ ಅಧಿಕಾರಿಗಳು ಮಂಗಳವಾರ ಹಾಗೂ ಬುಧವಾರದಂದು ಮುಂದೆ ನಿಂತು ಬ್ಯಾರೇಜ್‌ನಿಂದ ತೆಗೆಸಿದರು.

ಸರ್ಕಾರದ ನಮ್ಮ ಮನವಿಗೆ ಸ್ಪಂದಿಸಿರುವುದರಿಂದ ಬಾಗೇಪಲ್ಲಿ ಬಂದ್ ಕರೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಮುಂದಿನ  ದಿನಗಳಲ್ಲಿ ಹೂಳು ತೆಗೆಯುವ ಕಾರ್ಯ ಸ್ಥಗಿತಗೊಂಡರೆ ಯಾವುದೇ ಮುನ್ಸೂಚನೆ ಇಲ್ಲದೆ ಪ್ರತಿಭಟನೆ ಹಾಗೂ ಬಂದ್‌ಗೆ ಕರೆ ನೀಡಲಾಗುವುದು ಎಂದು ಚಿತ್ರಾವತಿ ಹೋರಾಟ ಸಮಿತಿ ಉಪಾಧ್ಯಕ್ಷ ಗೋವರ್ಧನಚಾರಿ ಹೇಳಿದರು.

ಸರ್ಕಾರ ತಮ್ಮ ಹೋರಾಟಕ್ಕೆ ಗೌರವ ನೀಡಿರುವುದನ್ನು ಸ್ವಾಗತಿಸಿ, ಚಿತ್ರಾವತಿ ಹೋರಾಟ ವೃತ್ತದಲ್ಲಿ ಚಿತ್ರಾವತಿ ಹೋರಾಟ ಸಮಿತಿ ಸದಸ್ಯರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.