ADVERTISEMENT

ಹೆದ್ದಾರಿ ಪ್ರಾಧಿಕಾರಕ್ಕೆ ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 8:45 IST
Last Updated 24 ಸೆಪ್ಟೆಂಬರ್ 2011, 8:45 IST

ಚಿಕ್ಕಬಳ್ಳಾಪುರ: ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಧನ ಒದಗಿಸುವುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರೈತರ ಮತ್ತು ಜಿಲ್ಲಾಧಿಕಾರಿ ಸಭೆ ನಿರ್ಣಯ ಕೆಲವರ ಪಾಲಿಗೆ ನಿರಾಸೆ ಮೂಡಿಸಿದರೆ, ಇನ್ನೂ ಕೆಲವರಿಗೆ ತಾಳ್ಮೆ ಕಾಯ್ದುಕೊಳ್ಳುವಂತೆ ಮಾಡಿತು.

ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಹಲವು ದಿನಗಳ ಬಳಿಕ ಸಭೆ ಕರೆಯಲಾಗಿದ್ದ ಕಾರಣ ಕುತೂಹಲ ಮತ್ತು ಆಶಾಭಾವನೆಯಿಂದ ಭಾರಿ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ಒಂದು ಗಂಟೆ ಕಾಲ ಚರ್ಚೆ ನಡೆಯಿತು. ಒಂದು ಹಂತದಲ್ಲಿ ರೈತರು ತಾಳ್ಮೆ ಕಳೆದುಕೊಂಡು ಆಕ್ರೋಶ, ಅಸಮಧಾನ ವ್ಯಕ್ತಪಡಿಸಿದರು.

ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ರೈತರು ಇನ್ನೇನೂ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಬೇಕು ಎನ್ನುವ ವೇಳೆಗೆ ಕೆಲ ಮುಖಂಡರು 30 ದಿನ ಗಡುವು ನೀಡುವ ಮೂಲಕ ಅಂತಿಮ ನಿರ್ಣಯ ಪ್ರಕಟಿಸಿದರು.
ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಒಂದು ತಿಂಗಳ ಅವಧಿಯಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಇನ್ನೂ ಕೆಲ ಹಿರಿಯ ರೈತರು ಮತ್ತು ಮುಖಂಡರು ತಮ್ಮ ಅಭಿಪ್ರಾಯ ತಿಳಿಸುವ ಮುನ್ನವೇ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ, `ಪರಿಹಾರ ಧನ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಒಂದು ತಿಂಗಳು ಅವಕಾಶ ನೀಡೋಣ. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೂ ತರೋಣ~ ಎಂದು ಹೇಳಿ ಸಭೆ ಕೊನೆಗೊಳಿಸಿದರು.

ಹಲವು ವರ್ಷಗಳಿಂದ ನಡೆಸಲಾಗುತ್ತಿರುವ ಹೋರಾಟಕ್ಕೆ ಸಭೆಯಲ್ಲಿ ಖಂಡಿತವಾಗಿ ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಂದಿದ್ದ ರೈತರು ನಿರಾಸೆಯಿಂದ ಮರಳಿದರು. `ಎಷ್ಟೇ ತಡವಾದರೂ ಇವತ್ತು ನಮ್ಮ ಸಮಸ್ಯೆ ಇತ್ಯರ್ಥವಾಗಲೇಬೇಕು~ ಎಂದು ಕೆಲ ರೈತರು ಪಟ್ಟು ಹಿಡಿದರಾದರೂ ಹೆಚ್ಚಿನ ಪ್ರಯೋಜನ ವಾಗಲಿಲ್ಲ.

ನಿಗದಿತ ಸಮಯಕ್ಕಿಂತ ಕೊಂಚ ತಡವಾಗಿಯೇ ಶುರುವಾದ ಸಭೆಯಲ್ಲಿ ರೈತ ಮುಖಂಡ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, `ಜಮೀನು ಕಳೆದಕೊಂಡವರಿಗೆ ಪರಿಹಾರ ಧನ ವಿತರಿಸುವಂತೆ ಈವರೆಗೆ 29 ಬಾರಿ ಪ್ರತಿಭಟನೆ ನಡೆಸಲಾಗಿದೆ. ಪರಿಹಾರ ಧನ ಸಿಗದಿರುವ ಕಾರಣ ಕೆಲ ರೈತರು ಕಂಗೆಟ್ಟು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಎದುರು ಹಲವು ಬಾರಿ ಗೋಗರೆದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

`ಬೇಡಿಕೆ ಸಲ್ಲಿಸಿದಾಗಲೆಲ್ಲ ಪ್ರಾಧಿಕಾರದವರು ಒಂದಿಲ್ಲೊಂದು ನೆಪ ಹೇಳುತ್ತಾರೆ. ಹೆಚ್ಚಿನ ಪರಿಹಾರ ಧನ ಕೇಳಿದ್ದಕ್ಕೆ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ನ್ಯಾಯಾಲಯಕ್ಕೆ ಎಡತಾಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಆಗುತ್ತಿರುವ ಖರ್ಚು-ವೆಚ್ಚವನ್ನು ಯಾರು ಭರಿಸುತ್ತಾರೆ~ ಎಂದು ಪ್ರಶ್ನಿಸಿದರು.

ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, `ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರೈತರನ್ನು ವಂಚಿಸುತ್ತಿದ್ದಾರೆ. ಮೂರು-ನಾಲ್ಕು ರೈತರಿಗೆ ಮಾತ್ರವೇ ಪರಿಹಾರ ಧನ ನೀಡಿ, ಇತರರಿಗೆ ವಂಚಿಸಿದ್ದಾರೆ. ರೈತರಲ್ಲಿ ಒಡಕು ಮೂಡಿಸಲೆತ್ನಿಸುತ್ತಿರುವ ಪ್ರಾಧಿಕಾರದವರನ್ನು ನಾವು ಯಾವುದೇ ಕಾರಣಕ್ಕೂ ನಂಬುವುದಿಲ್ಲ. ಪ್ರಾಧಿಕಾರದವರು ರೈತರಿಗೆ ಮೋಸ ಮಾಡಲೆತ್ನಿಸಿದ ಬಗ್ಗೆ ಖಚಿತ್ರ ದಾಖಲೆಪತ್ರ ನಮ್ಮ ಬಳಿ ಇವೆ~ ಎಂದರು.

ಪರಿಹಾರ ಧನಕ್ಕೆ ಸಂಬಂಧಿಸಿದಂತೆ ಈ ಸಭೆಯಲ್ಲೇ ಅಂತಿಮ ನಿರ್ಣಯ ಕೈಗೊಳ್ಳಬೇಕು ಎಂದು ಬಹುತೇಕ ರೈತರು ಪಟ್ಟು ಹಿಡಿದಾಗ, ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಕಾಂಬ್ಲೆ ಅವರೊಂದಿಗೆ ದೂರವಾಣಿ ಯಲ್ಲಿ ಮಾತನಾಡಿ ವಿಷಯ ತಿಳಿಸಿದರು.

`ಕಾಂಬ್ಲೆ ಅವರು ಈ ವಾರದ ಒಳಗೆ ನವದೆಹಲಿಗೆ ಹೋಗಿ ಪರಿಹಾರ ಧನಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತಾರೆ. ಒಂದು ತಿಂಗಳ ಅವಧಿಯಲ್ಲಿ ವಿಷಯ ಸ್ಪಷ್ಟಪಡಿಸಲಿದ್ದಾರೆ. ಈ ತಿಂಗಳ ಅವಧಿಯಲ್ಲಿ ನಾವು ಮುಖ್ಯಮಂತ್ರಿಯವರನ್ನು ಮತ್ತು ಸಂಸದರನ್ನು ಭೇಟಿಯಾಗೋಣ. ಸಮಸ್ಯೆ ಪರಿಹಾರಕ್ಕೆ ಅವರಲ್ಲಿ ಮನವಿ ಸಲ್ಲಿಸೋಣ~ ಎಂದರು.

ರೈತ ಮುಖಂಡರಾದ ಬಿ.ಎನ್. ಮುನಿಕೃಷ್ಣಪ್ಪ, ಭಕ್ತರಹಳ್ಳಿ ಬೈರೇಗೌಡ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅಧಿಕಾರಿ ಗುಪ್ತಾ, ಉಪವಿಭಾಗಾಧಿಕಾರಿ ಸತೀಶ್‌ಕುಮಾರ್, ತಹಶೀಲ್ದಾರ್ ಭಾಸ್ಕರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ರೈತರ ಬೇಡಿಕೆ ಏನು?
ಚಿಕ್ಕಬಳ್ಳಾಪುರ:
ಕೆಲ ವರ್ಷಗಳ ಹಿಂದೆ ಹೆದ್ದಾರಿ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಎಕರೆಗೆ ರೂ.15 ಲಕ್ಷ ಪರಿ ಹಾರ ಧನ ನೀಡುವುದಾಗಿ ರೈತರಿಗೆ ತಿಳಿಸಿದ್ದರು. ಜಮೀನು ನೀಡಲು ಸಿದ್ಧವಿರದ ರೈತರು ಬಳಿಕ ಪ್ರದೇಶದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಜಮೀನು ನೀಡಲು ಸಿದ್ಧರಾ ದರು. ಎಕರೆಗೆ 20 ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕು ಎಂದು ರೈತರು ಪಟ್ಟು ಹಿಡಿದರು. ಆರಂಭದಲ್ಲಿ ಇದಕ್ಕೆ ಪ್ರಾಧಿಕಾರ ದವರು ಒಪ್ಪದಿದ್ದರೂ ನಂತರ ಸಮ್ಮತಿ ಸೂಚಿಸಿದರು.

`ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಿಸಿದ ಪ್ರಾಧಿಕಾರದವರು ಐದು ರೈತ ಕುಟುಂಬಗಳಿಗೆ ಎಕರೆಗೆ 20 ಲಕ್ಷ ರೂಪಾಯಿಯಂತೆ ಪರಿಹಾರ ಧನ ನೀಡಿದರು. ಕಾಮಗಾರಿ ಪೂರ್ಣಗೊಂಡ ಕೂಡಲೇ ಪ್ರಾಧಿಕಾರದವರು ನ್ಯಾಯಲಯದ ಮೆಟ್ಟಿಲನ್ನೇರಿ ರೈತರು ಹೆಚ್ಚಿನ ಪರಿಹಾರ ಧನ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಪರಿಹಾರ ಧನ ಕೇಳುವುದೇ ತಪ್ಪು ಎಂದು ವಾದಿಸಿದರು. ಆದರೆ ಈಗ ಅದೇ ಪ್ರಾಧಿಕಾರದ ಅಧಿಕಾರಿಗಳು ಬೇರೆಯದ್ದೇ ಹೇಳಿಕೆ ನೀಡು ತ್ತಿದ್ದಾರೆ~ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.

`ಬೈಪಾಸ್ ರಸ್ತೆಯಲ್ಲಿ ಸುಮಾರು 60 ಮೀಟರ್‌ಗಳಷ್ಟು ಜಮೀನು ಕಳೆದುಕೊಳ್ಳು ವವರಿಗೆ ಮಾತ್ರವೇ 20 ಲಕ್ಷ ರೂಪಾಯಿ ಯಷ್ಟು ಪರಿಹಾರ ನೀಡುತ್ತೇವೆ ಎಂದು ಹೇಳಿದ್ದೇವೇ ಹೊರತು 15 ರಿಂದ 20 ಮೀಟರ್‌ಗಳಷ್ಟು ಜಮೀನು ಕಳೆದುಕೊಂಡವರಿಗೆ ಅಷ್ಟೊಂದು ನೀಡುತ್ತೇವೆ ಎಂದು ಹೇಳಿಲ್ಲ ಎಂದು ಅಧಿಕಾರಿಗಳು ವಾದಿಸುತ್ತಿದ್ದಾರೆ. ಅವರೇ ಈಗ ಮಾತು ತಪ್ಪುತ್ತಿದ್ದಾರೆ. ರೈತರಿಗೆ ನ್ಯಾಯಸಮ್ಮತವಾಗಿ ಪರಿಹಾರ ಧನ ಸಿಗುವವರೆಗೆ ಹೋರಾಟ ಹಿಂಪಡೆಯುವುದಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.