ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಪ್ರಕ್ರಿಯೆಯು ನಗರದ ವಿವಿಧ ಮತಗಟ್ಟೆ ಕೇಂದ್ರಗಳಲ್ಲಿ ಭಾನುವಾರ ನಡೆಯಿತು. ಆದರೆ ಜಿಲ್ಲೆಯ ಕೆಲ ಮತಗಟ್ಟೆಗಳಲ್ಲಿ ಶಾಲೆಗಳ ಬಾಗಿಲುಗಳೇ ತೆರೆದಿರಲಿಲ್ಲ.
ಮತಗಟ್ಟೆ ಅಧಿಕಾರಿಗಳು ಕೊಠಡಿ ಹಾಗೂ ಆಸನ ವ್ಯವಸ್ಥೆ ಇರದೆ ಮರದ ಕೆಳಗಡೆ ಕೂತು ಹೆಸರು ಸೇರ್ಪಡೆಗೊಳಿಸುವ ಕಾರ್ಯ ನಿರ್ವಹಿಸಿದರು.
ಇನ್ನೊಂದೆಡೆ ಮತದಾರರು ಅರ್ಜಿಗಳಲ್ಲಿ ಮಾಹಿತಿ ಭರ್ತಿ ಮಾಡಲು ತೊಂದರೆ ಅನುಭವಿಸಬೇಕಾಯಿತು. ಈ ಅವ್ಯವಸ್ಥೆಯಿಂದ ಕೆಲವರು ಬೇಸರ ವ್ಯಕ್ತಪಡಿಸಿದರು.
ನಗರದ ಸೇಂಟ್ ಜೋಸೆಫ್ ಶಾಲೆ ಆವರಣದ ಹೊರಗಡೆ ಕೂತಿದ್ದ ಮತಗಟ್ಟೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ‘ಮರದ ಕೆಳಗಡೆ ತಂಪಾದ ವಾತಾವರಣ ಇರುವ ಕಾರಣ ಇಲ್ಲಿಯೇ ಕೂತಿದ್ದೇವೆ. ಶಾಲೆಯಲ್ಲಿ ಕೊಠಡಿ ಸೌಲಭ್ಯವಿದ್ದರೂ ನಾವು ಅಲ್ಲಿಗೆ ಹೋಗಲಿಲ್ಲ’ ಎಂದರು.
ಅಧಿಕಾರಿ ಲೂಸಿಯಾನಾ ಮಾತನಾಡಿ, ವಿಳಾಸ ಬದಲಾವಣೆ, ಹೆಸರು ಇರದವರು ಮತಗಟ್ಟೆ ಕೇಂದ್ರಕ್ಕೆ ಬಂದು ಹೆಸರನ್ನು ನೋಂದಾಯಿಸಿದರು. ಮೂಲ ದಾಖಲೆ ಪರಿಶೀಲಿಸಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲಾಯಿತು ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸುವುದು ಸರಳಗೊಳಿಸಲಾಗಿದೆ.
ಮಾರ್ಚ್ 16ರವರೆಗೆ ಮತದಾರರು ನಮೂನೆ–6ರ ಅರ್ಜಿಯನ್ನು ಪಡೆದು ನಿಗದಿತ ದಾಖಲೆಗಳೊಂದಿಗೆ ತಾಲ್ಲೂಕು ಕಚೇರಿ ಅಥವಾ ಆಯಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ಬಳಿಗೆ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬಹುದು ಎಂದು ಮತಗಟ್ಟೆ ಅಧಿಕಾರಿಗಳಾದ ದೇವೇಂದ್ರ ಮತ್ತು ವರಲಕ್ಷ್ಮಿ ತಿಳಿಸಿದರು.
ನಗರದ ಸೇಂಟ್ ಜೋಸೆಫ್ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ 23, 29 ಮತ್ತು 31ನೇ ವಾರ್ಡ್‌ಗಳ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.