ADVERTISEMENT

‘ಅಂಗವಿಕಲರಿಗೆ ಲಭ್ಯವಾಗಲಿ ಸೌಕರ್ಯ’

ವಿಶ್ವ ಅಂಗವಿಕಲರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:53 IST
Last Updated 4 ಡಿಸೆಂಬರ್ 2013, 6:53 IST

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಅಂಗವಿಕಲ­ರಿದ್ದು, ಅವರಿಗೆ ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ. ಬಹುತೇಕ ಮಂದಿ ಸೌಲಭ್ಯ­ಗಳಿಂದ ವಂಚಿತರಾಗಿದ್ದರೆ, ಹಲವರಿಗೆ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ­ಯಿಲ್ಲ. ಹೀಗಾಗಿ ಅರ್ಹರಿಗೆ ಸೌಲಭ್ಯ­ಗಳು ಸರಿಯಾಗಿ ತಲುಪುತ್ತಿಲ್ಲ ಎಂದು ಪ್ರಭಾರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾ­ಧೀಶ ಕೆ.ಅಮರನಾರಾಯಣ ವಿಷಾದಿಸಿದರು.

ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ನಗರದ ಡಾ. ಎ.ಪಿ.ಜೆ.­ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮ­ದಲ್ಲಿ ಮಾತನಾಡಿದ ಅವರು, ಎಲ್ಲಿ­ಯವರೆಗೆ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ದೊರೆಯುವುದಿಲ್ಲವೋ ಮತ್ತು ಸೌಲಭ್ಯಗಳು ಸದ್ಬಳಕೆ­ಯಾಗು­ವುದಿಲ್ಲವೋ ಅಲ್ಲಿಯವರೆಗೆ ಅಂಗ­ವೈಕಲ್ಯ ಸಮಸ್ಯೆ ಸಂಪೂರ್ಣವಾಗಿ ಕೊನೆ­ಗಾಣುವುದಿಲ್ಲ ಎಂದರು.

ಅಂಗವಿಕಲರು  ಸಮಾಜದಲ್ಲಿ ಆಗುವ ಶೋಷಣೆ ಮತ್ತು ದೌರ್ಜನ್ಯ­ವನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡ­ಬೇಕು. ಸಂವಿಧಾನದತ್ತ­ವಾಗಿರುವ ಹಕ್ಕು­ಗಳನ್ನು ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಖಂಡಿತ­ವಾಗಿಯೂ ಯಶಸ್ಸು ದೊರೆಯುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಆರ್‌.ವಿಶಾಲ್‌ ಮಾತನಾಡಿ, ಸರ್ಕಾರದ ಮೀಸಲಾತಿ ಸೌಲಭ್ಯದ ಜೊತೆಗೆ ಶೇ 3ರಷ್ಟು ಅನು­ದಾನ ಸಹ ಕೊಡಲಾಗುತ್ತಿದೆ. ಯಾವ್ಯಾವ ಯೋಜನೆಗಳಲ್ಲಿ ಅವಕಾಶ­ವಿದೆಯೋ ಅವುಗಳಲ್ಲಿ ಅಂಗವಿಕಲ­-ರಿಗೂ ಆದ್ಯತೆ ನೀಡಲಾಗುತ್ತಿದೆ. ಅಂಗ­ವಿಕಲರ ಶ್ರೇಯೋಭಿವೃದ್ಧಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದರು.

ಅಂಗವಿಕಲರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಸಂತೋಷ್‌­ರಾವ್‌, ರಘುನಾಥರೆಡ್ಡಿ ಮತ್ತು ಕುಶು­ಕುಮಾರ್‌ ಅವರನ್ನು ಇದೇ ಸಂದರ್ಭ­ದಲ್ಲಿ ಸನ್ಮಾನಿಸಲಾಯಿತು. ಶ್ರವಣ­ದೋಷ ಮತ್ತು ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ಅಂಗವಿಕಲರಿಗೆ ಸಲಕರಣೆಗಳನ್ನು ವಿತರಿಸಲಾಯಿತು. ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಅಂಗವಿಕಲ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ನ್ಯಾಯಾಧೀಶರಾದ ರಾಜೇಶ್ವರಿ ಎನ್‌.ಹೆಗಡೆ, ನಳಿನಿಕುಮಾರಿ, ಅನಿತಾ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎನ್‌.ಎಂ.­ಶಾಂತರಸ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ವಿ.ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸುರೇಖಾ ವಿಜಯಪ್ರಕಾಶ್‌, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ಕಾರ್ಯದರ್ಶಿ ಪಾಪಿರೆಡ್ಡಿ, ಜಿಲ್ಲಾ ಆಸ್ಪತ್ರೆ ಸರ್ಜನ್‌ ಡಾ. ಮಂಜುಳಾ,  ಕರ್ನಾಟಕ ಅಂಗವಿಕಲರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಬಿ.ಉಷಾ­ಕಿರಣ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.