ADVERTISEMENT

‘ಕಾಡಾನೆ ಹಾವಳಿ: ಶಾಶ್ವತ ಪರಿಹಾರಕ್ಕೆ ಚಿಂತನೆ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:15 IST
Last Updated 20 ಸೆಪ್ಟೆಂಬರ್ 2013, 9:15 IST

ಮೂಡಿಗೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ ರೈತರ ಬೆಳೆ ಮತ್ತು ಜೀವ ಹಾನಿ ಮಾಡುತ್ತಿರುವ ಕಾಡಾನೆಗಳ ಹಾವಳಿಯನ್ನು ತಡೆ­ಯಲು ಸೂಕ್ತ ಕ್ರಮ ತೆಗೆದು­ಕೊಳ್ಳಲು ಮುಖ್ಯಮಂತ್ರಿಗಳ ಜೊತೆ­ಯಲ್ಲಿ ತಕ್ಷ­ಣವೇ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಅಭಯ­ಚಂದ್ರಜೈನ್ ತಿಳಿಸಿದರು.

ತಾಲ್ಲೂಕಿನ ಕಾಡಾನೆ ಹಾವಳಿ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತ­ನಾಡಿ, ‘ಪ್ರತಿನಿತ್ಯವೂ ಕಾಡಾನೆ ಹಾವ­ಳಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿಗ­ಳು ಪ್ರಕಟಿತವಾಗುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿದಾಗ ಹಾನಿಯ ಪ್ರಮಾಣ ಆತಂಕ­ಕಾರಿಯಾಗಿದ್ದು, ಸರ್ಕಾರ ಶೀಘ್ರವೇ ರೈತರಿಗೆ ಸ್ಪಂದಿಸುವಂತೆ ಮುಖ್ಯ­ಮಂತ್ರಿಗಳ ಬಳಿ ಚರ್ಚಿಸುತ್ತೆನೆ. ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದು, ಸ್ಥಳಾಂತರದ ಬಗ್ಗೆ ಮುಂದಿನ ಒಂದು ವಾರದೊಳಗೆ ಮುಖ್ಯ­­ಮಂತ್ರಿಗಳ ಜೊತೆಯಲ್ಲಿ, ಅರಣ್ಯ ಸಚಿವನ್ನೂ ಕಂಡು ಚರ್ಚಿಸ­ಲಾಗು­ವುದು ಮತ್ತು ಕಾಡಾನೆಗಳು ತಕ್ಷಣದ ಕ್ರಮವಾಗಿ ಕಾಡಾನೆಗಳು ಸಂಚರಿಸುತ್ತಿರುವ ಪ್ರದೇಶಗಳಲಲಿ ಐಬಿಎಕ್ಸ್ ಬೇಲಿ ಮತ್ತು ಟ್ರಂಚ್ ನಿರ್ಮಾಣದ ಬಗ್ಗೆ ಒತ್ತಾಯ ಬಂದಿದ್ದು, ಅದಕ್ಕೆ ಕ್ರಮ ಕೈಗೊಳ್ಳ­ಲಾಗುವುದು' ಎಂದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್.­ಶಂಕರಮೂರ್ತಿ ಮಾತನಾಡಿ, 2 ರಿಂದ 3 ಎಕರೆ ಜಮೀನು ಹೊಂದಿ­ರುವ ಕೃಷಿಕವರ್ಗದಲ್ಲಿ ಕಾಡಾನೆ ಹಾವಳಿಯಿಂದ ಬಹುತೇಕ ಬೆಳೆ ನಾಶವಾಗಿದ್ದು, ನಾಶವಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯ ರೈತರು ಒತತಾಯಿಸಿದ್ದಾರೆ. ಈ ಸಮಸ್ಯೆಯನ್ನು ಸರ್ಕಾರದ ಮಟ್ಟ­ದಲ್ಲಿ ಚರ್ಚಿಸಿ ಮಲೆನಾಡಿನ ಕಾಡಾನೆ ಹಾವಳಿ ಸಮಸ್ಯೆಯ ಬಗೆಹರಿಸಲು ಒತ್ತಾಯಿಸಲಾಗುವುದು ಎಂದರು.

ಸ್ಥಳದಲ್ಲಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎ.ಶೇಷಗಿರಿ ಮಾತನಾಡಿ, ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಶೇ 75 ರಷ್ಟು ಬೆಳೆನಾಶವಾಗಿದ್ದು, ಅಳಿದುಳಿದ ಬೆಳೆಯನ್ನು ದಾಳಿ ನಡೆಸುತ್ತಿರುವ ಕಾಡಾನೆಗಳು ನಾಶ­ಗೊಳಿಸುತ್ತಿವೆ. ಕಾಡಾನೆಗಳಿಂದಾಗಿ ಹತ್ತಾರು ವರ್ಷದ ಕಾಫಿ, ಅಡಿಕೆ, ಸಿಲ್ವರ್ ಗಿಡಗಳು ನಾಶವಾಗಿದ್ದು, ಮುಂದಿನ ನಾಲ್ಕೈದು ವರ್ಷಗಳ ಬೆಳೆ ನಾಶವಾದಂತಾಗಿದೆ ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದು ಸೂಕ್ತ ಪರಿಹಾರ ಒದಗಿಸಬೇಕು ಎಂದರು.

ಭೇಟಿಯ ವೇಳೆ ಬಿಜೆಪಿಯ ತಾಲ್ಲೂಕು ಅಧ್ಯಕ್ಷ ಡಿ.ಎಸ್.ಸುರೇಂದ್ರ, ಕಾಫಿ ಬೆಳೆಗಾರರಾದ ಕೆಂಜಿಗೆ ಕೇಶವ್, ಕಲ್ಲೇಶ್‌ಗೌಡ, ಎಂ.ಆರ್.ಜಗದೀಶ್, ಗಜೇಂದ್ರ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.