ADVERTISEMENT

‘ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 9:41 IST
Last Updated 10 ಡಿಸೆಂಬರ್ 2013, 9:41 IST

ಚಿಂತಾಮಣಿ: ವಿದ್ಯಾರ್ಥಿ ನಿಲಯಗಳಲ್ಲಿ ಆಹಾರ, ವಸತಿಯೊಂದಿಗೆ ಗುಣ­ಮಟ್ಟದ ಶಿಕ್ಷಣ ನೀಡಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಹೇಳಿದರು.

ತಾ.ಪಂ.ನಲ್ಲಿ ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆ­ಯಲ್ಲಿ ಮಾತನಾಡಿ, ಹಾಸ್ಟೆಲ್‌­ಗಳಲ್ಲಿ ಆಹಾರ, ವಸತಿ ನೀಡು­ವುದಷ್ಟೇ ಜವಾಬ್ದಾರಿ ಎಂಬ ಕಲ್ಪನೆ ಅಧಿಕಾರಿಗಳಲ್ಲಿದೆ. ವಿದ್ಯಾರ್ಥಿ ನಿಲಯ­ಗಳ ಮೇಲ್ವಿಚಾರಕರು ಶಾಲೆಗಳ ಮುಖ್ಯ ಶಿಕ್ಷಕರನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ಮಾಡಬೇಕು, ಪೋಷ­ಕರ ಗಮನಕ್ಕೂ ತರಬೇಕು ಎಂದರು.

ವಿದ್ಯಾರ್ಥಿಗಳು ಪ್ರತಿವಾರ ಊರು­ಗಳಿಗೆ ಹೋಗುವ ಪರಿಪಾಠವನ್ನು ನಿಲ್ಲಿಸಬೇಕು. ಕೆಲವು ಕಡೆ ಮೇಲ್ವಿ­ಚಾರಕರೇ ಸೂಚನೆ ನೀಡಿ ಊರುಗಳಿಗೆ ಕಳುಹಿಸುತ್ತಾರೆ ಎಂಬ ಆರೋಪವಿದೆ ಎಂದು ಕಾರ್ಯ ನಿರ್ವಹಣಾಧಿಕಾರಿ ಬಿ.ಸಿ.ವಸಂತಕುಮಾರ್‌ ಹೇಳಿದರು.

ತಾಲ್ಲೂಕಿನ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚುವರಿಯಾಗಿರುವ ಅಡಿಗೆಯವರನ್ನು ಎಲ್ಲಿ ಕೊರತೆ ಇದೆಯೋ ಅಲ್ಲಿಗೆ ನಿಯೋಜನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನಾಗರಾಜ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಮಟ್ಟದ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳಿಗೆ ಅನೀರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಕ್ರೀಡಾ ಸಾಮಗ್ರಿಗಳು ಸೇರಿದಂತೆ ಮೂಲ ಸೌಲಭ್ಯ ಒದಗಿಸಿದರೆ ಮಕ್ಕಳು ವಿದ್ಯಾರ್ಥಿ ನಿಲಯಗಳಲ್ಲಿ ಉಳಿಯು­ತ್ತಾರೆ ಎಂದರು.
ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹಮದ್‌ ಸಫೀರ್‌, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಖಾಜಿ ಉಪಸ್ಥಿತ­ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.