ADVERTISEMENT

‘ಜಲಕ್ಷಾಮ ತಪ್ಪಿಸಲು ಬೇಕು ಶಾಶ್ವತ ನೀರಾವರಿ ’

ಬಾಗೇಪಲ್ಲಿಯಲ್ಲಿ ಗ್ರಾ.ಪಂ ಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 8:39 IST
Last Updated 10 ಜನವರಿ 2014, 8:39 IST

ಬಾಗೇಪಲ್ಲಿ: ಪಶ್ಚಿಮಘಟ್ಟದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿರುವ ನೇತ್ರಾವತಿ ನದಿಯ ನೀರು ಸದ್ಬಳಕೆಯಾದಲ್ಲಿ, ಚಿಕ್ಕಬಳ್ಳಾಪುರ–ಕೋಲಾರ ಸೇರಿದಂತೆ ಐದು ಜಿಲ್ಲೆಗಳಲ್ಲಿನ ನೀರಾವರಿ ಸಮಸ್ಯೆ ಬಗೆಹರಿಯಲಿದೆ. ಜಿ.ಎಸ್‌.ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲ್ಲೂಕು ಸಮಿತಿ ಕಾರ್ಯದರ್ಶಿ ಎನ್‌.ಎಸ್‌.ಚಲಪತಿ ತಿಳಿಸಿದರು.

ತಾಲ್ಲೂಕಿನ ಪಾತಪಾಳ್ಯ ಸಮೀಪದ ಸೋಮನಾಥಪುರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲ್ಲೂಕು ಸಮಿತಿ ವತಿಯಿಂದ ಬುಧವಾರ ನಡೆದ ಪಂಚಾಯಿತಿ ಮಟ್ಟದ ಸಮಾವೇಶದಲ್ಲಿ ಮಾತನಾಡಿ, ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳದಿದ್ದರೆ, ನೀರಿನ ಸಮಸ್ಯೆ ಇನ್ನಷ್ಟು ತೀವ್ರವಾಗಿ ಕಾಡಲಿದೆ. ಬಯಲುಸೀಮೆ ಜಿಲ್ಲೆಗಳು ಜಲಕ್ಷಾಮದಂತಹ ಪರಿಸ್ಥಿತಿ ಎದುರಿಸಲಿವೆ ಎಂದರು.

ತಾಲ್ಲೂಕು ಸಮಿತಿ ಖಜಾಂಚಿ ಪಿ.ಮಂಜುನಾಥರೆಡ್ಡಿ ಮಾತನಾಡಿ, ಫ್ಲೋರೈಡ್ ಅಂಶವುಳ್ಳ ನೀರು ಕುಡಿಯುವಂತಹ ಪರಿಸ್ಥಿತಿ ಬಂದಿದ್ದು, ವಿಷಯುಕ್ತ ರಾಸಾಯನಿಕ ಅಂಶವುಳ್ಳ ನೀರನ್ನು ಸೇವಿಸಿ ಮಕ್ಕಳು ಸೇರಿದಂತೆ ಎಲ್ಲರೂ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. 80ನೇ ವಯಸ್ಸಿಗೆ ನಿಶ್ಯಕ್ತಿಗೆ ತುತ್ತಾಗುವವರು 40ನೇ ವಯಸ್ಸಿಗೆ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. 1500 ಅಡಿಗಳಷ್ಟು ಆಳ ಕೊರೆದರೂ ಒಂದು ಹನಿ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ್ಯ ಎಂ.ಸಿ.ಕೃಷ್ಣಾರೆಡ್ಡಿ, ಸದಸ್ಯರಾದ ಜಾಹಿರ್‌ ಬೇಗ್‌, ಬಿ.ವಿ.ಪಾಪಿರೆಡ್ಡಿ, ಮುತ್ತಿರೆಡ್ಡಿ, ಬಿ.ವಿ.ನಾರಾಯಣಸ್ವಾಮಿ, ಷಾಮೀರ್, ರವ­ಣಪ್ಪ, ಕರೆಪ್ಪರೆಡ್ಡಿ, ಮುನಿರಾಜು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT