ADVERTISEMENT

‘ಯೂರಿಯಾ ಸಿಕ್ತು, ಹೊತ್ತೊಯ್ಯಲು ಕಸುವು ಬಂತು’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 9:08 IST
Last Updated 17 ಸೆಪ್ಟೆಂಬರ್ 2013, 9:08 IST

ಚಿಕ್ಕಬಳ್ಳಾಪುರ: ಸತತ ಮಳೆಯಿಂದ ರೈತರು ಉತ್ತಮ ಬೆಳೆ­ಯ ನಿರೀಕ್ಷೆಯಲ್ಲಿದ್ದಾರೆ.  ಇದಕ್ಕೆ ಸಾಕ್ಷಿ ಎಂಬಂತೆ ರೈತರು ಸೋಮವಾರ ಯೂರಿಯಾ ರಸಗೊಬ್ಬರ ಖರೀದಿಗೆ ಮುಗಿ ಬಿದ್ದಿದ್ದರು.

ಯೂರಿಯಾ ಖರೀದಿಗಾಗಿ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌­ಕಾಮ್ಸ್‌) ಮಳಿಗೆ­ಎದುರು ಕಳೆದ ಶನಿವಾರ­ವಿದ್ದಷ್ಟೇ ಸೋಮವಾರ ಕೂಡ ಕಂಡು ಬಂದರು. ಎಷ್ಟೇ ಕಷ್ಟನಷ್ಟವಾದರೂ ಪರವಾಗಿಲ್ಲ, ಯೂರಿಯಾ ಖರೀದಿಸಲೇಬೇಕು ಎಂಬ ಸ್ಥಿತಿ­ಯಲ್ಲಿರುವ ರೈತರು ಬೆಳಿಗ್ಗೆಯಾದ ಕೂಡಲೇ ಹಾಪ್‌­ಕಾಮ್ಸ್‌ ಮಳಿಗೆ ಮತ್ತು ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳ ಎದುರು ಜಮಾಯಿ­ಸುತ್ತಿದ್ದಾರೆ. ಕುಟುಂಬ ಸದಸ್ಯರು ಮುಂತಾ­ದವರು ಜಮೀನಿನಲ್ಲಿ ಕೃಷಿ ಕೆಲಸ ಮಾಡು­ತ್ತಿದ್ದರೆ, ಅವರ ಪರವಾಗಿ ಮೂಟೆ­ಗಳನ್ನು ಖರೀದಿಸಲು ಮಹಿಳೆಯರು ಕೂಡ ಸಾಲುಗಳಲ್ಲಿ ನಿಲ್ಲುತ್ತಿದ್ದಾರೆ. ಮೂಟೆ ಹೊತ್ತೊಯ್ಯುವುದು ಕಷ್ಟಕರವಾಗಿದ್ದರೂ ಆಟೊಗಳಲ್ಲಿ, ತಮ್ಮ ವಾಹನಗಳಲ್ಲಿ ಹಾಕಿಕೊಂಡು ಹೋಗುತ್ತಿದ್ದಾರೆ.

ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 9ರಿಂದಲೇ ಮೂಟೆಗಳನ್ನು ವಿತರಿಸಲಾಗುತ್ತಿದ್ದು, ರಜಾ ದಿನಗಳಲ್ಲಿಯೂ ಹಾಪ್‌ಕಾಮ್ಸ್‌ ಸಿಬ್ಬಂದಿ  ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಗಸ್ಟ್‌ 28ರಿಂದ ಯೂರಿಯಾ ವಿತರಣೆ ಸ್ಥಗಿತಗೊಂಡು ಮಳೆಯೂ ಸಹ ಬಾರದ ಕಾರಣ ಕಂಗಾಲಾಗಿದ್ದ ರೈತರು  ಒಮ್ಮಿಂದೊ­ಮ್ಮೆಲೇ  ಮೈಯಲ್ಲಿನ ಕಸುವು ಹೆಚ್ಚಿಸಿಕೊಂಡು ಯೂರಿಯಾ ಹೊತ್ತುಕೊಂಡು ಹೋಗುತ್ತಿ­ದ್ದಾರೆ. ವೃದ್ಧ ರೈತರು ‘ನಾವು ರಾಗಿಮುದ್ದೆ ತಿಂದವರು’ ಎಂದು ಹೇಳುತ್ತಾ ಹೊತ್ತುಕೊಂಡು ಹೋಗುತ್ತಿದ್ದಾರೆ.

‘50 ಕೆಜಿ ಯೂರಿಯಾ ಮೂಟೆ ತಲೆಯ ಮೇಲೆ ಹೊತ್ತುಕೊಳ್ಳುವುದು ನಮಗೆ ಭಾರ ಎನ್ನಿಸುವುದಿಲ್ಲ. ಒಂದು ವೇಳೆ ಮಳೆ ಬಾರದೇ ಹೋಗಿದ್ದರೆ ಮತ್ತು ಸಕಾಲಕ್ಕೆ ರಸಗೊಬ್ಬರ ಸಿಗದಿ­ರದಿದ್ದರೆ, ನಮ್ಮ ಪಾಡು ಇನ್ನೂ ಗಂಭೀರ­ವಾಗುತಿತ್ತು. ಸದ್ಯಕ್ಕೆ ಒಬ್ಬೊಬ್ಬರಿಗೆ ಒಂದೊಂದು ಮೂಟೆ ಕೊಡುತ್ತಿದ್ದಾರೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲ್ಲರಿಗೂ ಬೇಡಿಕೆಯಿದ್ದಷ್ಟು ನೀಡುತ್ತಾರಂತೆ. ಆ ದಿನದ ನಿರೀಕ್ಷೆಯಲ್ಲಿ ನಾವಿದ್ದೇವೆ’ ಎಂದು ರೈತ ಮುನಿಶಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

’ಕಳೆದ ಶನಿವಾರ ವಿತರಿಸಲಾದ ಯೂರಿಯಾದ 300 ಮೂಟೆಗಳು (15 ಟನ್‌) ಕೆಲ ರೈತರಿಗೆ ಮಾತ್ರವೇ ಲಭ್ಯವಾಯಿತೇ ಹೊರತು ಬಹುತೇಕ ಮಂದಿಗೆ ಸಿಕ್ಕಿರಲಿಲ್ಲ. ಅದಕ್ಕೆ ಸೋಮವಾರ ಬೆಳಿಗ್ಗೆಯೇ ರೈತರು ಮತ್ತೆ ಹಾಪ್‌ಕಾಮ್ಸ್‌ ಮಳಿಗೆಗೆ ಬಂದಿದ್ದಾರೆ. ಆದರೆ 120 ಮೂಟೆಗಳು ಮಾತ್ರವೇ ಲಭ್ಯವಿರುವ ಕಾರಣ ರೈತರಲ್ಲಿ ತೀವ್ರ ಪೈಪೋಟಿ ಉಂಟಾ­ಯಿತು. ಕಡಿಮೆ ಮೂಟೆಗಳು ಇರುವ ಕಾರಣ ಕೆಲ ಹಾಪ್ಕಾಮ್ಸ್‌ ಮಳಿಗೆಯ ಬಾಗಿಲನ್ನೇ ಮುಚ್ಚಿ ಪ್ರತಿಭಟನೆ ನಡೆಸಲು ಮುಂದಾದರು. ಎಲ್ಲರಿಗೂ ಮೂಟೆ ವಿತರಿಸದಿದ್ದರೆ, ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪರಿಸ್ಥಿತಿಯು ಕೈಮೀರುತ್ತಿರುವಂತೆ ಕಂಡು ಬಂತು. ಆದರೆ ಅಷ್ಟರಲ್ಲಿ ಸ್ಥಳಕ್ಕೆ ಬಂದ ಕೃಷಿ ಇಲಾಖೆಯ ಅಧಿಕಾರಿಗಳು ಸಮಾಧಾನಪಡಿಸಲು ಯತ್ನಿಸಿದರು. ನಾವು ಕೂಡ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದೆವು. ಆಗ ಎಲ್ಲವೂ ಸಹಜಸ್ಥಿತಿಗೆ ಬಂದು ಮೂಟೆಗಳನ್ನು ಒಂದೊಂದಾಗಿ ವಿತರಿಸಲಾಯಿತು’ ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.

’ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಮೂಟೆಗಳು ಖಾಲಿಯಾದರೂ ರೈತರು ಆತಂಕಪಡಬೇಕಿಲ್ಲ. ಅವರು ಖಾಸಗಿ ಮಳಿಗೆಗಳಲ್ಲೂ ಅದನ್ನು ನಿಗದಿತ ಬೆಲೆಗೆ ಖರೀದಿಸಬಹುದು. ಎಲ್ಲ ಖಾಸಗಿ ಮಳಿಗೆಗಳಲ್ಲೂ ಮತ್ತು ಸಹಕಾರಿ ಸಂಘಗಳಿಗೂ ಮೂಟೆಗಳನ್ನು ವಿತರಿಸಲಾಗಿದ್ದು,  ದುಬಾರಿ ಮಾರಾಟದ ದೂರು ಕೇಳಿ ಬಂದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಕೃಷಿ ಇಲಾಖೆ ಅಧಿಕಾರಿ ರಾಮು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.