ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಯಿಂದ 6 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ನೀರಾವರಿ ತಜ್ಞರು ವೈಜ್ಞಾನಿಕವಾಗಿ ಸಾರಿ ಸಾರಿ ಹೇಳಿದರೂ ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಮರೆಮಾಚಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ನೀರಾವರಿ ಹೋರಾಟಗಾರ ವೈದ್ಯ ಡಾ.ಮಧುಸೀತಪ್ಪ ಆರೋಪಿಸಿದರು.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಯೋಜನೆಯಿಂದ 24 ಟಿಎಂಸಿನೀರು ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಇದನ್ನು ಅಲ್ಲಗಳೆದು ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದ ಜನರಿಗೆ ಇಲ್ಲಸಲ್ಲದ್ದನ್ನು ಹೇಳಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ವಂಚಿಸುತ್ತಿದ್ದಾರೆ. ಈಗಲಾದರೂ ಸತ್ಯ ನುಡಿಯಬೇಕು ಎಂದು ವ್ಯಂಗ್ಯವಾಡಿದರು.
ಎತ್ತಿನಹೊಳೆ ಯೋಜನೆ ಕುರಿತು ನಾವು ಸುಳ್ಳು ಹೇಳಿದ್ದೇವೆ ಎಂಬುದು ಸಾಬೀತಾದಾರೆ, ಜೈಲಿಗೆ ಹೋಗಲು ಸಿದ್ಧ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ 2012ರಲ್ಲೇ ಕರೆದಿದ್ದ ಟೆಂಡರ್ ಪಕ್ರಿಯೆಗೆ ಪುನರ್ ಚಾಲನೆ ನೀಡಲಾಗಿದೆ ಹೊರತು ಹೊಸದೇನೂ ಮಾಡಲಾಗಿಲ್ಲ. ಆಗಿನ ಯೋಜನೆಯ ಮೊತ್ತ 2,300 ಕೋಟಿ ರೂಪಾಯಿಯಾಗಿದ್ದರೆ, ಈಗ ಅದರ ಮೊತ್ತ 12 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಯೋಜನೆ ಹೆಸರಿನಲ್ಲಿ ಜನರ ಹಣ ವ್ಯರ್ಥ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
‘ತಮ್ಮನ್ನು ತಾವು ಭಗೀರಥ ಎಂದು ವೀರಪ್ಪ ಮೊಯಿಲಿ ಕರೆಸಿಕೊಳ್ಳುತ್ತಿದ್ದಾರೆ. ಆದರೆ ನಿಜವಾದ ಅರ್ಥದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರೇ ಭಗೀರಥರೇ ಹೊರತು ಬೇರೆ ಯಾರೂ ಅಲ್ಲ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಕಲ್ಯಾಣಕುಮಾರ್, ಅಜ್ಜವಾರ ಶ್ರೀನಿವಾಸ್, ಮೋಹನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.