ADVERTISEMENT

10 ಕೋಟಿ ವೆಚ್ಚದ ಹೆರಿಗೆ ಆಸ್ಪತ್ರೆ

ಗೌರಿಬಿದನೂರಿನಲ್ಲಿ ‘ನಗು ಮಗು’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 9:40 IST
Last Updated 10 ಡಿಸೆಂಬರ್ 2013, 9:40 IST

ಗೌರಿಬಿದನೂರು:  ಪಟ್ಟಣದ ಹೊರವಲಯದ ಮಾದನಹಳ್ಳಿ ಸಮೀಪ ಈ ವರ್ಷದ ಅಂತ್ಯಕ್ಕೆ ನಬಾರ್ಡ್ ಯೋಜನೆ ಅಡಿ ₨ 10 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ 60 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ನಗು ಮಗು’ ಎಂಬ ಯೋಜನೆಯ ಅಡಿ ಆಂಬುಲನ್ಸ್ ವಾಹನವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ  ಮಾತನಾಡಿದರು.

ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 300 ಹೆರಿಗೆಗಳು ಆಗುತ್ತಿವೆ. ಸ್ಥಳದ ಅಭಾವದ ಹಿನ್ನೆಲೆಯಲ್ಲಿ ಹೊಸ ಹೆರಿಗೆ ಆಸ್ಪತ್ರೆ ಅವಶ್ಯಕತೆ ಎದುರಾಗಿದೆ. ‘ನಗು ಮಗು’ ಯೋಜನೆ ಉದ್ದೇಶ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಮನೆಗೆ ಉಚಿತವಾಗಿ ತಲುಪಿಸುವುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬಾಣಂತಿಯರಿಗೆ ಮಡಿಲು ಕಿಟ್ ಹಾಗೂ ಸಹಾಯಧನ ನೀಡಲಾಯಿತು. ಕೆಲವರನ್ನು ನೂತನ ಆಂಬುಲನ್ಸ್‌ನಲ್ಲಿ ಕರೆದೊಯ್ಯ­ಲಾಯಿತು.

 ರೇಮಾಂಡ್ಸ್ ಕಾರ್ಖಾನೆ ಆಡಳಿತ ಮಂಡಳಿ ವತಿಯಿಂದ ಆಸ್ಪತ್ರೆಗೆ ಹೊದಿಕೆ ಮತ್ತು ತಲೆ ದಿಂಬುಗಳನ್ನು ನೀಡಲಾಯಿತು. ತಾಲ್ಲೂಕು ವೈದ್ಯಾಧಿಕಾರಿ ಡಾ.ಗುಂಡೂರಾವ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಾಮ್‌ಸುಂದರ್, ಡಾ.ಶೇಷಗಿರಿ ರಾವ್, ಡಾ.ಬಾನು, ಡಾ.ತೇಜಾವತಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಪುರಸಭೆ ಸದಸ್ಯರು, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.